Kannada News Next

udupi

ಕುಂದಾಪುರ ಶೂಟೌಟ್‌ ತನಿಖೆ ಚುರುಕು : ಡೆರಿಕ್‌ ಕ್ರಾಸ್ತಾಗಾಗಿ ಉಡುಪಿ ಪೊಲೀಸರ ಹುಡುಕಾಟ

ನಾಪತ್ತೆಯಾಗಿರುವ ಆರೋಪಿ ಡೆರಿಕ್‌ ಬಂಧನಕ್ಕಾಗಿ ಉಡುಪಿ ಜಿಲ್ಲಾ ಪೊಲೀಸರು ವಿಶೇಷ ಮೂರು ತಂಡಗಳನ್ನು ರಚಿಸಿದ್ದಾರೆ. ಶೀಘ್ರದಲ್ಲಿಯೇ ಆರೋಪಿಯನ್ನು ಬಂಧಿಸುವುದಾಗಿ ಹರಿರಾಂ ಶಂಕರ್‌ ತಿಳಿಸಿದ್ದಾರೆ.

By Arun Gundmi | ಅರುಣ್‌ ಗುಂಡ್ಮಿ Editor-in-Chief
kundapura Shoot out Ivan and Derick

ಕುಂದಾಪುರ : ಕರಾವಳಿಯನ್ನೇ ಬೆಚ್ಚಿ ಬೀಳಿಸಿದ್ದ ಕುಂದಾಪುರದ ಶೂಟೌಟ್‌ ಪ್ರಕರಣದ ತನಿಖೆಯನ್ನು ಉಡುಪಿ ಪೊಲೀಸರು ಚುರುಕುಗೊಳಿಸಿದ್ದಾರೆ. ಆರೋಪಿ ಡೆರಿಕ್‌ ಕ್ರಾಸ್ತಾ ಪತ್ತೆಗಾಗಿ ಉಡುಪಿ ಎಸ್‌ಪಿ ಹರಿರಾಂ ಶಂಕರ್‌ ವಿಶೇಷ ತಂಡವನ್ನು ರಚಿಸಿದ್ದು, ಎಲ್ಲಾ ಆಯಾಮಗಳಿಂದಲೂ ತನಿಖೆ ಜೋರಾಗಿದೆ.

ಜುಲೈ 31ರಂದು ಮುಂಜಾನೆ ಕುಂದಾಪುರದ ಹೋಲಿ ರೋಜರಿ ಚರ್ಚ್‌ ರಸ್ತೆಯಲ್ಲಿ ಬಾರಕೂರು ಮೂಲದ ಐವನ್ ರಿಚರ್ಡ್‌ ಮಸ್ಕರೇನಸ್‌ ಎಂಬಾತನನ್ನು ಸ್ನೇಹಿತ ಡೆರಿಕ್‌ ಕ್ರಾಸ್ತಾ ಎಂಬಾತ ಬಂದೂಕಿನಿಂದ ಶೂಟ್‌ ಮಾಡಿ ಹತ್ಯೆ ಮಾಡಿದ್ದ.

Derick crasta 1.jpeg

ಜುಲೈ 30ರಂದು ರಾತ್ರಿ 11.45ರ ಸುಮಾರಿಗೆ ಕುಂದಾಪುರದ ಡೆರಿಕ್‌ ಹಾಗೂ ಬಾರಕೂರಿನ ಐವರ್‌ ರಿಚರ್ಡ್‌ ಮಸ್ಕರೇನಸ್‌ ನಡುವೆ ಹಣಕಾಸಿಕ ವಿಚಾರದಲ್ಲಿ ಪೋನ್‌ನಲ್ಲಿ ಗಲಾಟೆ ನಡೆದಿತ್ತು. ಈ ವೇಳೆ ಕುಂದಾಪುರಕ್ಕೆ ಬರುವಂತೆ ಐವನ್‌ಗೆ ಡೆರಿಕ್‌ ಚಾಲೆಂಜ್‌ ಮಾಡಿದ್ದ, ಐವನ್‌ ಕುಂದಾಪುರಕ್ಕೆ ಬಂದು ಕಾರಿನಿಂದ ಇಳಿಯುತ್ತಿದ್ದಂತೆಯೇ ಆರೋಪಿ ಡೆರಿಕ್‌ ಏಕಾಏಕಿಯಾಗಿ ಪಿಸ್ತೂಲ್‌ನಿಂದ ಐವನ್‌ ಸೊಂಟದ ಭಾಗಕ್ಕೆ ಗುಂಡು ಹಾರಿಸಿದ್ದಾನೆ.

ತೀವ್ರ ರಕ್ತಶ್ರಾವದಿಂದಾಗಿ ಐವನ್‌ ಸ್ಥಳದಲ್ಲಿಯೇ ಸಾವನ್ನಪ್ಪಿದ್ದ. ನಂತರ ಡೆರಿಕ್‌ ಸ್ಥಳದಿಂದ ಎಸ್ಕೇಪ್‌ ಆಗಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳಕ್ಕೆ ವಿಧಿವಿಜ್ಞಾನ ತಜ್ಞರು, ಶ್ವಾನದಳವನ್ನು ಕರೆಯಿಸಿ ತಪಾಸಣೆ ಮಾಡಲಾಗಿದೆ.

ನಾಪತ್ತೆಯಾಗಿರುವ ಆರೋಪಿ ಡೆರಿಕ್‌ ಬಂಧನಕ್ಕಾಗಿ ಉಡುಪಿ ಜಿಲ್ಲಾ ಪೊಲೀಸರು ವಿಶೇಷ ಮೂರು ತಂಡಗಳನ್ನು ರಚಿಸಿದ್ದಾರೆ. ಶೀಘ್ರದಲ್ಲಿಯೇ ಆರೋಪಿಯನ್ನು ಬಂಧಿಸುವುದಾಗಿ ಹರಿರಾಂ ಶಂಕರ್‌ ತಿಳಿಸಿದ್ದಾರೆ. ಇನ್ನು ಮೃತಪಟ್ಟಿರುವ ಐವನ್‌ ರಿಚರ್ಡ್‌ ವಿರುದ್ದ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ರೌಡಿಶೀಟರ್‌ ತೆರೆಯಲಾಗಿದ್ದು, ಈ ಹಿಂದೆ ಪಿಟ್ಟಿ ನಾಗೇಶ್‌ ಕೊಲೆ ಪ್ರಕರಣದಲ್ಲಿಯೂ ಆರೋಪಿಯಾಗಿದ್ದಾನೆ. ಆದರೆ ಹಣಕಾಸಿನ ವಿಚಾರದಲ್ಲಿ ಇದೀಗ ತನ್ನದೇ ಸ್ನೇಹಿತನಿಂದಲೇ ಐವನ್‌ ಹತ್ಯೆಯಾಗಿದ್ದಾರೆ.

ಹಣಕಾಸಿನ ವಿಚಾರಕ್ಕೆ ಕೊಲೆ ನಡೆದಿದೆ ಎನ್ನಲಾಗುತ್ತಿದೆ. ಹಣಕಾಸಿನ ಜೊತೆಗೆ ಇಬ್ಬರ ನಡುವೆ ಬೇರೆ ಯಾವುದಾದ್ರೂ ವ್ಯವಹಾರ ಇತ್ತಾ ? ಅನ್ನೋದು ಪೊಲೀಸರ ತನಿಖೆಯಿಂದಷ್ಟೇ ಸತ್ಯಾಂಶ ಹೊರಬರೋದಕ್ಕೆ ಸಾಧ್ಯ.