ಕುಂದಾಪುರ : ಉತ್ತರ ಕನ್ನಡ ಜಿಲ್ಲೆಯ ಜನತೆಗೆ ವಿರೋಧಕ್ಕೆ ಕಾರಣವಾಗಿದ್ದ ಶರಾವತಿ ಪಂಪ್ಡ್ ಸ್ಟೋರೇಜ್ ವಿದ್ಯುತ್ ಯೋಜನೆ ಸದ್ಯ ಸ್ಥಗಿತಗೊಂಡಿದೆ. ಇದರ ಬೆನ್ನಲ್ಲೇ ಇದೀಗ ವಾರಾಹಿ ಪಂಪ್ಡ್ ಸ್ಟೋರೇಜ್ ಜಲವಿದ್ಯುತ್ ಯೋಜನೆಯನ್ನು ಜಾರಿಗೆ ತರಲು ರಾಜ್ಯ ಸರಕಾರ ಮುಂದಾಗಿದೆ. ಕೆಪಿಸಿಎಲ್ ಹಾಗೂ ರಾಜ್ಯ ಇಂಧನ ಇಲಾಖೆ ಈ ಕುರಿತು ಸರ್ವೆ ಕಾರ್ಯ ನಡೆಸಲು ಮುಂದಾಗಿದೆ. ಇದು ಪರಿಸರ ತಜ್ಞರ, ವಿಜ್ಞಾನಿಗಳ ವಿರೋಧಕ್ಕೆ ಕಾರಣವಾಗಿದೆ.
ಪಶ್ಚಿಮ ಘಟ್ಟದ ಅತ್ಯಂತ ಸೂಕ್ಷ್ಮ ಪ್ರದೇಶಗಳಲ್ಲಿ ಒಂದಾಗಿರುವ ವಾರಾಹಿ ಕಣಿವೆಯಲ್ಲಿ ಬರೋಬ್ಬರಿ 2500 ಮೆಗಾ ವ್ಯಾಟ್ ಸಾಮರ್ಥ್ಯದ ವಾರಾಹಿ ಪಂಪ್ಡ್ ಸ್ಟೋರೇಜ್ ಜಲವಿದ್ಯುತ್ ಯೋಜನೆ ಜಾರಿಗೆ ಬರಲಿದೆ. ಕೇಂದ್ರ ಪರಿಸರ ಅರಣ್ಯ ಮಂತ್ರಾಲಯ ಅಧಿಸೂಚನೆ ಹೊರಡಿಸಿದ್ದು, ಬಹುಕೋಟಿ ಯೋಜನೆಗೆ ಕೆಪಿಸಿಎಲ್ ಮತ್ತು ರಾಜ್ಯ ಇಂಧನ ಇಲಾಖೆ ಜಂಟಿ ಸರ್ವೆ ಕಾರ್ಯ ನಡೆಸಲಿವೆ.
ಸೋಮೇಶ್ವರ ಹಾಗೂ ಮೂಕಾಂಬಿಕಾ ಅಭಯಾರಣ್ಯದ ವ್ಯಾಪ್ತಿಯಲ್ಲಿ ಬರುವ ಈ ಯೋಜನೆಗೆ ಬರೋಬ್ಬರಿ 1000 ಎಕರೆ ಅರಣ್ಯ ಭೂಮಿ ನಾಶವಾಗಲಿದ್ದು, ಲಕ್ಷಾಂತರ ಮರಗಳಿಗೆ ಕೊಡಲಿಯೇಟು ಬೀಳಲಿದೆ. ಇದರಿಂದಾಗಿ ಜೀವ ವೈವಿದ್ಯಕ್ಕೆ ಧಕ್ಕೆ ಆಗಲಿದೆ ಅನ್ನೋದು ಪರಿಸರ ಪ್ರಿಯರ ಆತಂಕ.
ಉಡುಪಿ ಜಿಲ್ಲೆಯ ಕುಂದಾಪುರ, ಶಿವಮೊಗ್ಗ ಜಿಲ್ಲೆಯ ಹೊಸನಗರ ಮತ್ತು ತೀರ್ಥಹಳ್ಳಿ ತಾಲೂಕಿನ ಗಡಿ ಭಾಗಗಳಲ್ಲಿ ವಾರಾಹಿ ಪಂಪ್ಡ್ ಸ್ಟೋರೇಜ್ ಜಲ ವಿದ್ಯುತ್ ಯೋಜನೆ ಸಾಕಾರಗೊಳ್ಳಲಿದೆ. ಮಾಣಿ ಜಲಾಶಯದ ನೀರನ್ನು ಬಳಸಿ ವಿದ್ಯುತ್ ಉತ್ಪಾದನೆ ಮಾಡುವ ಗುರಿ ಹೊಂದಲಾಗಿದ್ದು, ಹೊಸ ಜಲಾಶಯ ನಿರ್ಮಾಣ ಮಾಡಿ, ನೆಲದ ಅಡಿಯಲ್ಲಿ ವಿದ್ಯುತ್ ಕೇಂದ್ರ ನಿರ್ಮಾಣದ ಯೋಜನೆ ಹಾಕಿಕೊಳ್ಳಲಾಗಿದೆ.
ಜಲ ವಿದ್ಯುತ್ ಯೋಜನೆಯಿಂದಾಗಿ ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಯ ವ್ಯಾಪ್ತಿಯಲ್ಲಿ ಅಪಾರ ಪ್ರಮಾಣದಲ್ಲಿ ಅರಣ್ಯನಾಶದ ಭೀತಿ ಎದುರಾಗಿದೆ. ಸಿದ್ದಾಪುರ, ಹುಲಿಕಲ್, ಶಂಕರನಾರಾಯಣ ಭಾಗದ ಜನರಿಗೆ ಸಮಸ್ಯೆ ಆಗೋದು ಖಚಿತ. ಅದ್ರಲ್ಲೂ ಪಶ್ಚಿಮಘಟ್ಟದಲ್ಲಿರುವ ವಾರಾಹಿ ಕಣಿವೆ ಅತ್ಯಂತ ಸೂಕ್ಷ್ಮ ಪ್ರದೇಶ, ಜೊತೆಗೆ ವಾರಾಹಿ ನದಿ ಮೂಲವೂ ಹತ್ತಿರದಲ್ಲೇ ಇದ್ದು, ಚಕ್ರಾ, ಸಾವೆಹಲ್ಲು ಜಲಾಶಯ, ಮಾಣಿ, ಯಡೂರು ಅಣೆಕಟ್ಟುಗಳನ್ನು ಒಳಗೊಂಡಿವೆ. ಇದರ ನಡುವಲ್ಲೇ ಮತ್ತೊಂದು ಜಲಾಶಯವನ್ನು ತಡೆಯುವ ಸಾಮರ್ಥ್ಯ ವಾರಾಹಿ ಕಣಿವೆಗೆ ಇಲ್ಲಾ ಅನ್ನೋದು ಪರಿಸರ ತಜ್ಞರ ವಾದ.
ವಾರಾಹಿ ಕಣಿವೆಯನ್ನು ಈಗಾಗಲೇ ಭೂಕಂಪ ಸೂಕ್ಷ್ಮ ವಲಯ ಪಟ್ಟಿಗೆ ಸೇರ್ಪಡೆ ಮಾಡಲಾಗಿದ್ದು, ಸಂಭಾವ್ಯ ಭೂಕುಸಿತ ಪ್ರದೇಶದ ಪಟ್ಟಿಯಲ್ಲಿದೆ. ಇದೇ ಸ್ಥಳದಲ್ಲಿ ಮತ್ತೊಂದು ಜಲಾಶಯ ನಿರ್ಮಾಣ ಮಾಡಿದ್ರೆ ಅದನ್ನು ತಡೆಯುವ ಸಾಮರ್ಥ್ಯ ವಾರಾಹಿ ಕಣಿವೆ ಇಲ್ಲ. ಸರಕಾರ ಯೋಜನೆಯನ್ನು ಕಾರ್ಯಗತಗೊಳಿಸಿದ್ದೇ ಆದ್ರೆ ಉಗ್ರ ಹೋರಾಟ ಎಚ್ಚರಿಕೆ ಕೇಳಿಬಂದಿದೆ.