ಶ್ರಾವಣ ಮಾಸದ ಪ್ರಮುಖ ಹಬ್ಬಗಳಲ್ಲಿ ಒಂದಾದ ವರಮಹಾಲಕ್ಷ್ಮೀ ವ್ರತವನ್ನು ಶುಭ ಶುಕ್ರವಾರದ ದಿನದಂದೇ ಆಚರಿಸಲಾಗುತ್ತಿರುವುದು ವಿಶೇಷ. ಕರ್ನಾಟಕ ಸೇರಿದಂತೆ ದಕ್ಷಿಣ ಭಾರತೀಯರು ಈ ಹಬ್ಬವನ್ನು ಶ್ರದ್ದಾಭಕ್ತಿಯಿಂದ ಆಚರಿಸುತ್ತಾರೆ. ಸುಖ, ಶಾಂತಿ, ಐಶ್ವರ್ಯ, ಆರೋಗ್ಯ, ಸಮೃದ್ದಿಗಾಗಿ ಮಹಾಲಕ್ಷ್ಮೀ ದೇವಿಯನ್ನು ಆರಾಧಿಸುವುದು ಈ ವ್ರತದ ಮುಖ್ಯ ಉದ್ದೇಶ.
ವರಮಹಾಲಕ್ಷ್ಮೀ ಹಬ್ಬ ಆಚರಣೆ ಮಾಡೋದ್ಯಾಕೆ ?
ವರಮಹಾಲಕ್ಷ್ಮೀ ಅಂದ್ರೆ ಭಕ್ತರಿಗೆ ವರಗಳನ್ನು ಕರುಣಿಸುವ ಮಹಾಲಕ್ಷ್ಮೀ ಎಂಬ ನಂಬಿಕೆಯಿದೆ. ಲಕ್ಷ್ಮೀ ದೇವಿಯ ಆರಾಧನೆಯ ಮೂಲಕ ಸುಖ- ಸಮೃದ್ದಿ, ಆರೋಗ್ಯ- ಕುಟುಂಬ -ಕ್ಷೇಮ, ಧನ ಧಾನ್ಯ ಮನೆಗೆ ಕರುಣಿಸಲಿ ಅನ್ನೋ ಧಾರ್ಮಿಕ ನಂಬಿಕೆ ಭಕ್ತರಲ್ಲಿದೆ.
ವರಮಹಾಲಕ್ಷ್ಮೀ ವ್ರತವನ್ನು ಅಷ್ಟಲಕ್ಷ್ಮಿಯ ಆರಾಧನೆಗೆ ಸಮಾನ ಎಂದು ಪರಿಗಣಿಸಲಾಗುತ್ತದೆ. ಆದಿಲಕ್ಷ್ಮೀ, ಧಾನ್ಯಲಕ್ಷ್ಮೀ, ಧೈರ್ಯಲಕ್ಷ್ಮೀ, ಗಜಲಕ್ಷ್ಮೀ, ಸಂತಾನಲಕ್ಷ್ಮೀ, ವಿಜಯಲಕ್ಷ್ಮೀ, ವಿದ್ಯಾಲಕ್ಷ್ಮೀ ಮತ್ತು ಧನಲಕ್ಷ್ಮೀ ಸೇರಿದಂತೆ ಲಕ್ಷ್ಮಿಯನ್ನು ವಿವಿಧ ರೂಪದಲ್ಲಿ ಪೂಜಿಸಲಾಗುತ್ತದೆ.
ಶ್ರಾವಣ ಮಾಸದ ಹುಣ್ಣಿಮೆಯ ಹಿಂದಿನ ಶುಕ್ರವಾರದಂದು ವರಮಹಾಲಕ್ಷ್ಮೀ ವ್ರತವನ್ನು ಆಚರಿಸುವುದು ವಾಡಿಕೆ. ಆದರೆ ಕುಟುಂಬದ ಸಂಪ್ರದಾಯಕ್ಕೆ ಅನುಗುಣವಾಗಿ ಪೂಜಾ ವಿಧಾನದಲ್ಲಿ ವ್ಯತ್ಯಾಸಗಳಿರುತ್ತದೆ. ವರಮಹಾಲಕ್ಷ್ಮೀ ವೃತದ ಕುರಿತು ಇರುವ ಕಥೆಗಳೇನು ? ಪೂಜಾ ವಿಧಾನಗಳು ಯಾವುವು ಅನ್ನೋ ಡಿಟೇಲ್ಸ್ ಇಲ್ಲಿದೆ ನೋಡಿ.
ವರಮಹಾಲಕ್ಷ್ಮೀ ವ್ರತದ ಹಿಂದೆ ಚಾರುಮತಿಯ ಕಥೆ
ವರಮಹಾಲಕ್ಷ್ಮೀ ವ್ರತದಲ್ಲಿ ಚಾರುಮತಿಯ ಕಥೆ ಅತ್ಯಂತ ಪ್ರಸಿದ್ದವಾಗಿದೆ. ವೃತ್ತದ ಕುರಿತು ಇರುವ ಪೌರಾಣಿಕ ಹಿನ್ನೆಲೆಯನ್ನು ನೋಡಿದ್ರೆ ಪಾರ್ವತಿ ದೇವಿಯು ಶಿವನನ್ನು ಲೋಕದ ಜನರಿಗೆ ಅನುಕೂಲವಾಗುವ ವ್ರತ ಯಾವುದು ಎಂದು ಪ್ರಶ್ನಿಸುತ್ತಾಳೆ. ಆಗ ಪರಶಿವನು ವರಮಹಾಲಕ್ಷ್ಮೀ ವ್ರತದ ಮಹತ್ವವನನು ವಿವರಿಸುತ್ತಾನೆ ಎಂಬ ನಂಬಿಕೆಯಿದೆ.
ಕುಂಡಿನ ಎಂಬ ನಗರದಲ್ಲಿರುವ ಚಾರುಮತಿ ಅನ್ನೋ ಮಹಿಳೆ ತನ್ನ ಕುಟುಂಬದವರೊಂದಿಗೆ ವಾಸಿಸುತ್ತಿದ್ದಳು. ಆಕೆ ಭಕ್ತಿ ಭಾವವುಳ್ಳವಳಾಗಿದ್ದು, ತಮ್ಮ ಅತ್ತೆ - ಮಾವಂದಿರನ್ನು ಪ್ರೀತಿ, ಶ್ರದ್ದೆಯಿಂದ ನೋಡಿಕೊಳ್ಳುತ್ತಿದ್ದಳು. ಅವರ ಸೇವೆಯನ್ನು ನಿಸ್ವಾರ್ಥವಾಗಿಯೇ ಮಾಡುತ್ತಿದ್ದಳು.
ಚಾರುಮತಿಯ ಭಕ್ತಿ, ಸೇವೆಯಿಂದ ಸಂತುಷ್ಟಳಾದ ಮಹಾಲಕ್ಷ್ಮೀ ದೇವಿಯು ಆಕೆಯ ಕನಸಿನಲ್ಲಿ ಕಾಣಿಸಿಕೊಳ್ಳುತ್ತಾಳೆ. ಶ್ರಾವಣ ಮಾಸದ, ಹುಣ್ಣಿಮೆಗೆ ಮುನ್ನ ಬರುವ ಶುಕ್ರವಾರ ತನ್ನನ್ನು ವರಮಹಾಲಕ್ಷ್ಮೀಯ ರೂಪದಲ್ಲಿ ಪೂಜಿಸುವಂತೆ ದೇವಿ ಚಾರುಮತಿಗೆ ಸೂಚನೆಯನ್ನು ನೀಡುತ್ತಾಳೆ. ಅಂತೆಯೇ ಚಾರುಮತಿ ತನ್ನ ಕುಟುಂಬಸ್ಥರು, ಊರಿನವರನ್ನು ಸೇರಿಸಿಕೊಂಡು ವ್ರತ ಆಚರಿಸಲು ಮುಂದಾದಳು. ದೇವಿಯ ಅನುಗ್ರಹದಿಂದ ಆಕೆಗೆ ಸಮೃದ್ದಿ, ಶುಭಫಲಗಳು ದೊರೆತಲು ಅನ್ನೋ ನಂಬಿಕೆಯಿದೆ. ಅಂದಿನಿಂದ ವರಮಹಾಲಕ್ಷ್ಮೀ ವ್ರತ ಆಚರಿಸಲಾಗುತ್ತದೆ.
ವರಮಹಾಲಕ್ಷ್ಮೀ ವ್ರತವನ್ನು ಹೇಗೆ ಆಚರಿಸಬೇಕು ?
ಶ್ರಾವಣ ಮಾಸದಲ್ಲಿ ಆಚರಿಸುವ ವರಮಹಾಲಕ್ಷ್ಮೀ ಪೂಜೆಯಲ್ಲಿನ ವಿಧಾನಗಳು ಊರಿನಿಂದ ಊರಿಗೆ ವಿಭಿನ್ನವಾಗಿದೆ. ಒಂದೊಂದು ಮನೆಯಲ್ಲಿ ಒಂದೊಂದು ರೂಪದಲ್ಲಿ ದೇವಿಯ ಆರಾಧನೆ ನಡೆಯುತ್ತಿದೆ. ಸಾಮಾನ್ಯವಾಗಿ ಬೆಳಗ್ಗೆ ಮನೆಯನ್ನು ಸ್ವಚ್ಛಗೊಳಿಸಿ, ಸ್ನಾನ ಮಾಡಿ ಶುಭ್ರವಾದ ಬಟ್ಟೆ ಧರಿಸಿ ಪೂಜೆಗೆ ಸಿದ್ಧರಾಗುತ್ತಾರೆ. ಪೂಜಾ ಸ್ಥಳದಲ್ಲಿ ರಂಗೋಲಿ ಹಾಕಿ, ಪೀಠವನ್ನು ಸಿದ್ಧಪಡಿಸಲಾಗುತ್ತದೆ.
ಕಲಶವನ್ನು ಪ್ರತಿಷ್ಠಾಪಿಸಿ ಅದರಲ್ಲಿ ಅಕ್ಕಿ, ನೀರು, ನಾಣ್ಯ ಮತ್ತು ಕುಟುಂಬ ಸಂಪ್ರದಾಯಕ್ಕೆ ಅನುಗುಣವಾಗಿ ವಸ್ತುಗಳನ್ನು ಇಡಲಾಗುತ್ತದೆ. ಕಲಶಕ್ಕೆ ಮಾವಿನ ಎಲೆಗಳನ್ನು ಇರಿಸಿ ಮೇಲೆ ತೆಂಗಿನಕಾಯಿ ಇಟ್ಟು ಅಲಂಕರಿಸಲಾಗುತ್ತದೆ. ಕೆಲವು ಮನೆಗಳಲ್ಲಿ ಕಲಶವನ್ನು ಸೀರೆ ಮತ್ತು ಆಭರಣ ಹಾಗೂ ಮಹಾಲಕ್ಷ್ಮೀ ದೇವಿಯ ಮುಖವಾಡದಿಂದ ಅಲಂಕಾರ ಮಾಡಿ ಪೂಜಿಸಲಾಗುತ್ತದೆ.
ಗಣಪತಿ ಪೂಜೆ ನೆರವೇರಿಸಿದ ಬಳಿಕ ಮಹಾಲಕ್ಷ್ಮೀ ದೇವಿಯ ಆವಾಹನೆ ನಡೆಯುತ್ತಿದ್ದು, ಅರಶಿನ, ಕುಂಕುಣ, ಅಕ್ಷತೆ, ಹೂವು, ಹಣ್ಣು ಮತ್ತು ನೈವೇದ್ಯವನ್ನು ಸಮರ್ಪಿಸಲಾಗುತ್ತದೆ. ಲಕ್ಷ್ಮೀ ಸ್ತೋತ್ರ ಅಥವಾ ಅಷ್ಟೋತ್ತರ ಶತನಾಮಾವಳಿಯನ್ನು ಪಠಿಸಲಾಗುತ್ತದೆ.
ನಂತರ ವರಮಹಾಲಕ್ಷ್ಮೀ ವ್ರತದ ಕಥೆಯನ್ನು ಓದಿದ ನಂತರ ಆರತಿ ಬೆಳಗಲಾಗುತ್ತದೆ. ಪೂಜೆಯ ನಂತರದಲ್ಲಿ ವ್ರತದಲ್ಲಿ ಪಾಲ್ಗೊಂಡವರು ಪ್ರಸಾದವನ್ನು ಸ್ವೀಕಾರ ಮಾಡುತ್ತಾರೆ. ಕೆಲವು ಸಂಪ್ರದಾಯಗಳಲ್ಲಿ ಮುತ್ತೈದೆಯರಿಗೆ ಅರಶಿನ, ಕುಂಕುಮ, ತಾಂಬೂಲ ನೀಡುವ ಪದ್ದತಿಯೂ ಇದೆ.
ವರಮಹಾಲಕ್ಷ್ಮೀ ಪೂಜೆಗೆ ಬೇಕಾಗುವ ಪ್ರಮುಖ ಸಾಮಗ್ರಿಗಳು
ವರಮಹಾಲಕ್ಷ್ಮೀ ಪೂಜೆಗೆ ಸಾಮಾನ್ಯವಾಗಿ ಕಲಶ, ನೀರು, ತೆಂಗಿನಕಾಯಿ, ಮಾವಿನ ಎಲೆ, ಅರಿಶಿನ, ಕುಂಕುಮ, ಅಕ್ಷತೆ, ಹೂವು, ಹಣ್ಣು, ನೈವೇದ್ಯ, ದೀಪ ಮತ್ತು ಧೂಪ ಸೇರಿದಂತೆ ಇತರ ಪೂಜಾ ಸಾಮಗ್ರಿಗಳಿಂದ ಸಿದ್ದಪಡಿಸಲಾಗುತ್ತದೆ.
ಕಲಶದ ಅಲಂಕಾರಕ್ಕೆ ಸೀರೆ, ಆಭರಣ ಅಥವಾ ಮನೆಯ ಸಂಪ್ರದಾಯಕ್ಕೆ ಅನುಗುಣವಾದ ಇತರ ವಸ್ತುಗಳನ್ನು ಬಳಸಬಹುದು. ಆದರೆ ಆಡಂಬರಕ್ಕಿಂತ ಭಕ್ತಿ ಮತ್ತು ಶ್ರದ್ಧೆಯೇ ಮುಖ್ಯ ಎಂಬ ನಂಬಿಕೆ ಇದೆ.
ವರಮಹಾಲಕ್ಷ್ಮೀ ವ್ರತದ ವಿಶೇಷತೆ ಏನು?
ವರಮಹಾಲಕ್ಷ್ಮೀ ವ್ರತವು ಕೇವಲ ಸಂಪತ್ತು ಮತ್ತು ಐಶ್ವರ್ಯಕ್ಕಾಗಿ ಮಾಡುವ ಪೂಜೆ ಮಾತ್ರವಲ್ಲ. ಕುಟುಂಬದ ಸದಸ್ಯರ ಆರೋಗ್ಯ, ಸಂತೋಷ, ನೆಮ್ಮದಿ ಮತ್ತು ಪರಸ್ಪರ ಬಾಂಧವ್ಯಕ್ಕಾಗಿ ದೇವಿಯನ್ನು ಪ್ರಾರ್ಥಿಸುವ ಸಂದರ್ಭವೂ ಹೌದು.
ಈ ಹಬ್ಬದ ಮೂಲಕ ಮಹಿಳೆಯರು ಕುಟುಂಬದ ಒಳಿತಿಗಾಗಿ ಪ್ರಾರ್ಥಿಸುವುದರ ಜೊತೆಗೆ, ಸಂಬಂಧಿಕರು ಮತ್ತು ನೆರೆ ಹೊರೆಯ ಜನರ ಜೊತೆಗೆ ಅರಿಶಿನ-ಕುಂಕುಮ, ತಾಂಬೂಲ ಹಾಗೂ ಪ್ರಸಾದ ಹಂಚಿಕೊಳ್ಳುವ ಮೂಲಕ ಸಾಮಾಜಿಕ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತಾರೆ.
ವರಮಹಾಲಕ್ಷ್ಮೀ ವ್ರತವು ಭಕ್ತಿ, ಕುಟುಂಬದ ಕ್ಷೇಮ, ಸೌಭಾಗ್ಯ ಮತ್ತು ಸಮೃದ್ಧಿಯನ್ನು ಆಶಿಸುವ ಶ್ರಾವಣ ಮಾಸದ ಪ್ರಮುಖ ಧಾರ್ಮಿಕ ಆಚರಣೆಗಳಲ್ಲಿ ಒಂದಾಗಿದೆ. ಚಾರುಮತಿಯ ಕಥೆಯು ಈ ವ್ರತದ ಹಿನ್ನೆಲೆಯಲ್ಲಿರುವ ಪ್ರಸಿದ್ಧ ಪೌರಾಣಿಕ ಕಥೆಯಾಗಿದ್ದು, ನಿಸ್ವಾರ್ಥ ಸೇವೆ ಮತ್ತು ಭಕ್ತಿಯ ಮಹತ್ವವನ್ನು ಸಾರುತ್ತದೆ.
ಸೂಚನೆ: ಪೂಜೆಯ ನಿಖರ ಮುಹೂರ್ತ, ಮಂತ್ರಗಳು ಮತ್ತು ವಿಧಿ-ವಿಧಾನಗಳು ಪ್ರದೇಶ ಹಾಗೂ ಕುಟುಂಬದ ಸಂಪ್ರದಾಯಕ್ಕೆ ಅನುಗುಣವಾಗಿ ಬದಲಾಗಬಹುದು.