Kannada News Next

cricket

ಭಾರತ-ಪಾಕ್ ಪಂದ್ಯದ ವೈರಲ್ ವಿಡಿಯೋ: ಕುಲದೀಪ್ ಮೇಲಿನ ಸಿಟ್ಟಿಗೆ ನಿಜವಾದ ಕಾರಣ ತಿಳಿಸಿದ ಸೂರ್ಯ!

ಪಂದ್ಯ ಮುಗಿದ ಬಳಿಕ ಇಬ್ಬರೂ ಒಬ್ಬರನ್ನೊಬ್ಬರು ಕೋಪದಿಂದ ನೋಡಿಕೊಂಡರೂ, ಅದು ಗಂಭೀರವಾದ ಜಗಳವಾಗಿರಲಿಲ್ಲ.

By Suma G | ಸುಮಾ ಜಿ.
Photo: Internet

ಟಿ20 ವಿಶ್ವಕಪ್‌ನ ಭಾರತ ಮತ್ತು ಪಾಕಿಸ್ತಾನ ಪಂದ್ಯದ ವೇಳೆ ಕುಲದೀಪ್ ಯಾದವ್ ಸರಳ ಕ್ಯಾಚ್ ಕೈಚೆಲ್ಲಿದಾಗ ತಾವು ಕೋಪಗೊಂಡಿದ್ದೇಕೆ ಎಂಬ ಸತ್ಯವನ್ನು ಭಾರತ ತಂಡದ ಮಾಜಿ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಬಿಚ್ಚಿಟ್ಟಿದ್ದಾರೆ.

ಆಕಾಶ್ ಚೋಪ್ರಾ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಸೂರ್ಯಕುಮಾರ್, ಪಂದ್ಯದಲ್ಲಿ ತಮಗೆ ಬೌಲಿಂಗ್ ಅವಕಾಶ ಸಿಗದಿದ್ದಕ್ಕೆ ಕುಲದೀಪ್ ತೀವ್ರ ನಿರಾಶೆಗೊಂಡಿದ್ದರು. ಆ ಹಂತದಲ್ಲಿ ಅಕ್ಷರ್ ಪಟೇಲ್, ತಿಲಕ್ ವರ್ಮಾ, ವರುಣ್ ಚಕ್ರವರ್ತಿ ಹಾಗೂ ಹಾರ್ದಿಕ್ ಪಾಂಡ್ಯ ಅವರಿಗೆ ಬೌಲಿಂಗ್ ನೀಡಿದ್ದರಿಂದ, "ನನಗೆ ಏಕೇ ಬೌಲಿಂಗ್ ಸಿಗುತ್ತಿಲ್ಲ?" ಎಂದು ಕುಲದೀಪ್ ಬೇಸರದಲ್ಲಿದ್ದರು.

ಇದೇ ನಿರಾಶೆಯಲ್ಲಿದ್ದ ಕುಲದೀಪ್, ಲಾಂಗ್-ಆನ್‌ನಲ್ಲಿ ಬಂದ ಸುಲಭ ಕ್ಯಾಚ್ ಹಿಡಿಯಲು ಯಾವುದೇ ಪ್ರಯತ್ನ ಮಾಡದೇ ನಿರ್ಲಕ್ಷ್ಯದಿಂದ ಓಡಿ ಕ್ಯಾಚ್ ಬಿಟ್ಟರು. ಪ್ರಯತ್ನ ಪಟ್ಟು ಕ್ಯಾಚ್ ತಪ್ಪಿದ್ದರೆ ಅಭ್ಯಂತರವಿರಲಿಲ್ಲ, ಆದರೆ ಕನಿಷ್ಠ ಪ್ರಯತ್ನವನ್ನೂ ಮಾಡದಿರುವುದು ತಮಗೆ ಕೋಪ ತರಿಸಿತು ಎಂದು ಸೂರ್ಯ ವಿವರಿಸಿದ್ದಾರೆ.

ಪಂದ್ಯ ಮುಗಿದ ಬಳಿಕ ಇಬ್ಬರೂ ಒಬ್ಬರನ್ನೊಬ್ಬರು ಕೋಪದಿಂದ ನೋಡಿಕೊಂಡರೂ, ಅದು ಗಂಭೀರವಾದ ಜಗಳವಾಗಿರಲಿಲ್ಲ. ಕ್ಯಾಮೆರಾಗಳಲ್ಲಿ ಅದು ದೊಡ್ಡ ವಿಷಯವಾಗಿ ಕಂಡರೂ, ವಾಸ್ತವವಾಗಿ ಅದು ಇಬ್ಬರ ನಡುವಿನ ತಮಾಷೆಯ ಸನ್ನಿವೇಶವಾಗಿತ್ತು (Banter) ಎಂದು ಸೂರ್ಯಕುಮಾರ್ ಸ್ಪಷ್ಟಪಡಿಸಿದ್ದಾರೆ.