Kannada News Next

travel

ಈ ಬಾರಿ ದಸರಾ ನೋಡಲು ಮೈಸೂರಿಗೆ ಹೊರಟಿದ್ದೀರಾ ? ಹಾಗಾದ್ರೆ ಈ ಸ್ಥಳಗಳನ್ನು ತಪ್ಪದೇ ನೋಡ್ಕೊಂಡು ಬನ್ನಿ !

ಕುಟುಂಬ ಸಮೇತ ಮೈಸೂರು ದಸರಾಕ್ಕೆ ಹೋಗುವ ಪ್ಲಾನ್‌ ಇದ್ದರೆ, ಕೇವಲ ದಸರಾ ಮಾತ್ರ ನೋಡಿಕೊಂಡು ಹಾಗೆ ಬರಬೇಡಿ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನೋಡಬಹುದಾದ ಮತ್ತಷ್ಟು ಅದ್ಭುತ ಸ್ಥಳಗಳೂ ಇವೆ.

By Archana V Bhat | ಅರ್ಚನಾ ವಿ ಭಟ್‌
Mysore places to visit

‘ಮೈಸೂರು ದಸರಾ ಎಷ್ಟೊಂದು ಸುಂದರ, ಚೆಲ್ಲಿದೆ ನಗೆಯ ಪನ್ನಿರ’ ಈ ಹಾಡು ಕೇಳದ ಕನ್ನಡಿಗರೇ ಇಲ್ಲ. ಈ ಹಾಡಿನ ಸಾಲಿನಲ್ಲಿ ಹೇಳಿದಂತೆ ಮೈಸೂರು ದಸರಾ ಅಷ್ಟು ಸುಂದರವಾಗಿದೆ. ಕಣ್ಮನ ಸೆಳೆಯುತ್ತದೆ. ಇಲ್ಲಿನ ದಸರಾ ಉತ್ಸವ ಕೇವಲ ನಮ್ಮ ಕರ್ನಾಟಕದಲ್ಲಷ್ಟೇ ಅಲ್ಲ, ದೇಶ ವಿದೇಶಗಳಲ್ಲೂ ಖ್ಯಾತಿ ಪಡೆದಿದೆ. ಇದರ ವೈಭವವನ್ನು ಕಣ್ತುಂಬಿಕೊಳ್ಳಲು ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು ದಸರೆಯ ಸಂದರ್ಭದಲ್ಲಿ ಮೈಸೂರಿಗೆ ಬರುತ್ತಾರೆ. ಜೀವನದಲ್ಲಿ ಒಮ್ಮೆಯಾದರೂ ನೋಡಲೇ ಬೇಕಾದ ವೈಭವೋಪೇತದ ನಮ್ಮ ನಾಡಹಬ್ಬ ಇದು. ರಾಜಗಾಂಭೀರ್ಯದಲ್ಲಿ, ಚಿನ್ನದ ಅಂಬಾರಿಯನ್ನು ಹೊತ್ತು ನಡೆವ ಗಜಪಡೆಯನ್ನು ನೋಡಿ ಪ್ರವಾಸಿಗರು ಪುಳಕಿತರಾಗುತ್ತಾರೆ. ನೀವು ಈ ಬಾರಿ ನಿಮ್ಮ ಕುಟುಂಬ ಸಮೇತ ಮೈಸೂರು ದಸರಾಕ್ಕೆ ಹೋಗುವ ಪ್ಲಾನ್‌ ಇದ್ದರೆ, ಕೇವಲ ದಸರಾ ಮಾತ್ರ ನೋಡಿಕೊಂಡು ಹಾಗೆ ಬರಬೇಡಿ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನೋಡಬಹುದಾದ ಮತ್ತಷ್ಟು ಅದ್ಭುತ ಸ್ಥಳಗಳೂ ಇವೆ. ಆ ಸ್ಥಳಗಳಿಗೂ ಭೇಟಿ ನೀಡಿ. ಅದರಲ್ಲೂ ಮಕ್ಕಳು ನೋಡಲೇಬೇಕಾದ ಪ್ರಮುಖ ಸ್ಥಳಗಳು ಕೂಡಾ ಅಲ್ಲಿವೆ. ಹಾಗಾದರೆ ಈ ಬಾರಿ ಮೈಸೂರಿಗೆ ದಸರಾ ನೋಡಲು ಹೊರಟಿದ್ದರೆ, ನೀವು ಭೇಟಿ ನೀಡಲೇ ಬೇಕಾದ ಸ್ಥಳಗಳ ಕಿರು ಪರಿಚಯ ಇಲ್ಲಿದೆ ಓದಿ.

ಮೈಸೂರು ಅರಮನೆ

ಮೈಸೂರಿನ ಮುಕುಟವಾಗಿರುವ ಅರಮನೆ ನೀವು ನೋಡಲೇಬೇಕಾದ ಅತ್ಯಂತ ಪ್ರಮುಖ ಸ್ಥಳ. ಸಂಜೆಯ ಬೆಳಕಿನಲ್ಲಿ ಕಂಗೊಳಿಸುವ ಅರಮನೆಯನ್ನು ಕಣ್ತುಂಬಿಕೊಳ್ಳಲು ಎಲ್ಲರು ಬಯಸುತ್ತಾರೆ. ಆದರೆ ಹಗಲಿನಲ್ಲಿಯೂ ಹೋಗಿ ನೋಡುವುದು ಅವಶ್ಯಕ. ನಮ್ಮ ಹೆಮ್ಮೆಯ ಮೈಸೂರಿನ ಒಡೆಯರ್‌ ಅವರು ಬಾಳಿ ಬದುಕಿದ ಅರಮನೆಯನ್ನು ನೋಡಿ, ಅವರು ಹೇಗೆ ಬದುಕಿದ್ದರು, ಯಾವೆಲ್ಲ ವಸ್ತುಗಳನ್ನು ಬಳಸುತ್ತಿದ್ದರು ಎಂಬುದನ್ನು ನಿಮ್ಮ ಮುದ್ದು ಮಕ್ಕಳಿಗೆ ತಿಳಿಯಪಡಿಸಬಹುದು.

ಚಾಮುಂಡಿ ಬೆಟ್ಟ

ಮೈಸೂರಿನ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಚಾಮುಂಡಿ ಬೆಟ್ಟವೂ ಒಂದು. ಇಲ್ಲಿ ತಾಯಿ ಚಾಮುಂಡೇಶ್ವರಿಯ ಪುರಾತನ ಭವ್ಯ ದೇವಾಲಯವಿದೆ. ಅಲ್ಲೇ ಪಕ್ಕದಲ್ಲಿ ಮಹಿಷಾಸುರ ಮತ್ತು ಜಗತ್ಪ್ರಸಿದ್ಧ ನಂದಿಯ ವಿಗ್ರಹವೂ ಇದೆ. ಚಾಮುಂಡಿ ಬೆಟ್ಟದಿಂದ ಕಾಣುವ ಮೈಸೂರು ನಗರದ ಮನೋಹರ ದೃಶ್ಯವನ್ನು ನೋಡಬಹುದು.

ಕಾರಂಜಿ ಕೆರೆ

ಕುಟುಂಬ ಸಮೇತ ದಸರಾ ನೋಡಲು ಬಂದವರು ಮೈಸೂರಿನ ಕಾರಂಜಿ ಕೆರೆ ವೀಕ್ಷಣೆಯನ್ನು ತಪ್ಪಿಸಿಬೇಡಿ. ಇಲ್ಲಿನ ಬೋಟಿಂಗ್‌ ಮಕ್ಕಳಿಗೆ ಹೊಸ ಅನುಭವ ಮತ್ತು ಉಲ್ಲಾಸ ತರುತ್ತದೆ. ಆದರೆ ನಿಮ್ಮ ಮಕ್ಕಳ ಕಾಳಜಿವಹಿಸುವುದನ್ನು ಮಾತ್ರ ಮರೆಯಬೇಡಿ.

ಮೈಸೂರು ಝೂ

ಭಾರತದ ಅಪರೂಪದ ಮೃಗಾಲಯಗಳಲ್ಲಿ ಒಂದಾದ ಮೈಸೂರು ಝೂ ಗೆ ಬೇಟಿ ನೀಡದಿದ್ದರೆ ನಿಮ್ಮ ಮೈಸೂರು ಪ್ರವಾಸ ಅಪೂರ್ಣ ಎಂದೇ ಹೇಳಬಹುದು. ಇಲ್ಲಿಯ ಪ್ರಾಣಿಗಳ ಪ್ರಪಂಚ ನಿಮ್ಮ ಮಕ್ಕಳಿಗೆ ಪ್ರಕೃತಿಯ ವಿಸ್ಮಯವನ್ನು ತೋರಿಸುತ್ತದೆ. ಅಷ್ಟೊಂದು ವಿಧದ ಪ್ರಾಣಿ ಪಕ್ಷಿಗಳನ್ನು ಒಂದೇ ಸ್ಥಳದಲ್ಲಿ ನೋಡಿದಾಗ ಮಕ್ಕಳಿಗೆ ಪ್ರಾಣಿ ಪ್ರಪಂಚದ ಅರಿವಾಗುತ್ತದೆ.

ರೈಲ್ವೆ ವಸ್ತು ಸಂಗ್ರಹಾಲಯ

ಇದೊಂದು ಅದ್ಭುತವಾದ ಸಂಗ್ರಹಾಲಯ. ದೇಶದಲ್ಲಿ ಬೆರಳೆಣಿಕೆಯಷ್ಟು ಮಾತ್ರ ಇರುವ ರೈಲ್ವೆ ಗಾಡಿಗಳ ವಸ್ತು ಸಂಗ್ರಹಾಲಯ. ಇಲ್ಲಿ ಸ್ವಾತಂತ್ರ್ಯ ಪೂರ್ವದ ರೈಲ್ವೆ ಗಾಡಿಗಳನ್ನು ಅಚ್ಚುಕಟ್ಟಾಗಿ ಜೋಡಿಸಿಡಲಾಗಿದೆ. ಭಾರತ ಪ್ರಮುಖ ಸಂಚಾರ ಸೇತುವಾದ ರೈಲ್ವೆ ಗಾಡಿಗಳು ಬೆಳೆದು ಬಂದ ಬಗೆಯ ಚಿತ್ರಣವನ್ನು ನಿಮ್ಮ ಮಕ್ಕಳಿಗೆ ಇಲ್ಲಿ ಕಟ್ಟಿಕೊಡಬಹುದು. ರೈಲ್ವೆಯ ಬಗ್ಗೆ ಮಕ್ಕಳಲ್ಲಿರುವ ಕುತೂಹಲಕ್ಕೆ ಇಲ್ಲಿ ಉತ್ತರಗಳು ಸಿಗುತ್ತವೆ.

ಸೇಂಟ್‌ ಫಿಲೋಮಿನಾ ಚರ್ಚ್‌

ಇದು ಮೈಸೂರಿನಲ್ಲಿರುವ ಅತ್ಯಂತ ಪ್ರಸಿದ್ಧ ಚರ್ಚ್‌. ಗೋಥಿಕ್‌ ವಾಸ್ತುಶಿಲ್ಪ ಮತ್ತು ಬಣ್ಣದ ಗಾಜಿನ ಕಿಟಕಿಗಳನ್ನು ಹೊಂದಿರುವ ಈ ಚರ್ಚ್‌ ಮೈಸೂರಿನಲ್ಲಿ ನೋಡಬಹುದಾದ ಉತ್ತಮ ಸ್ಥಳಗಳಲ್ಲಿ ಒಂದು.