ಬ್ರಹ್ಮಾವರ : ಕಳಪೆ ಗುಣಮಟ್ಟದ ಚಿನ್ನಾಭರಣ ಅಡಮಾನವಿಟ್ಟು ವಂಚನೆ

Brahmavara cooperative society cheating : ಕಷ್ಟಕಾಲದಲ್ಲಿ ಚಿನ್ನ ಅಡವಿಟ್ಟು ಸಾಲ ಪಡೆಯುವ ಅನೇಕರು ನಮ್ಮಲ್ಲಿದ್ದಾರೆ. ಆದರೆ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ಚಿನ್ನ ಅಡಮಾನವಿಟ್ಟ ವ್ಯಕ್ತಿಯೊಬ್ಬ ಸಾಲ ನೀಡಿದ ಸಹಕಾರಿ ಸಂಘಕ್ಕೆ ಮೋಸ ಮಾಡಿದ್ದಾರೆ.

ಈ ಸಂಬಂಧ ಉಡುಪಿ ಜಿಲ್ಲೆಯ ಬ್ರಹ್ಮಾವರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳಪೆ ಗುಣಮಟ್ಟದ ಚಿನ್ನಾಭರಣಗಳನ್ನು ಅಡಮಾನವಿಟ್ಟು ಸಾಲ ಪಡೆಯುವ ಮೂಲಕ ಈ ವ್ಯಕ್ತಿಯು ಸಹಕಾರಿ ಸಂಘಕ್ಕೆ ಮೋಸ ಮಾಡಿದ್ದಾನೆ ಎನ್ನಲಾಗಿದೆ.

ಕೊಕ್ಕರ್ಣೆ ಶಾಖೆಯ ಸಿಂಡಿಕೇಟ್​ ರೈತರ ಸೇವಾ ಸಹಕಾರಿ ಸಂಘದಲ್ಲಿ ಈ ಪ್ರಕರಣ ಸಂಭವಿಸಿದೆ. ಮೋಸ ಮಾಡಿರುವ ಆರೋಪಿಯನ್ನು ಯಶವಂತ್​ಕುಮಾರ್​ ಎಂದು ಗುರುತಿಸಲಾಗಿದೆ. ಈ ಘಟನೆ ಸಂಬಂಧ ಸಹಕಾರಿ ಸಂಘದ ವ್ಯವಸ್ಥಾಪಕ ನಿರ್ದೇಶಕಿ ಸುರೇಖಾ ಕುಮಾರಿ ಬ್ರಹ್ಮಾವರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಏನಿದು ಪ್ರಕರಣ..?

ಯಶವಂತ್​ ಕುಮಾರ್​ 2025ರ ಜುಲೈ 24ರಂದು ಕೊಕ್ಕರ್ಣೆಯ ಸಿಂಡಿಕೇಟ್​ ಸೇವಾ ಸಹಕಾರಿ ಸಂಘಕ್ಕೆ ಭೇಟಿ ನೀಡಿ ಬಳೆ ಹಾಗೂ ಚಿನ್ನದ ಸರ ಸೇರಿದಂತೆ ಒಟ್ಟೂ 69.40 ಗ್ರಾಂ ತೂಕದ ಚಿನ್ನಾಭರಣಗಳನ್ನು ಅಡವಿಟ್ಟು ಸಂಘದಿಂದ ಸಾಲಕ್ಕೆ ಮನವಿ ಮಾಡಿದ್ದ.

ಈ ಸಂದರ್ಭದಲ್ಲಿ ಸಂಘದ ಅಪ್ರೈಸರ್ ಕೆ. ಭಾಸ್ಕರ ಆಚಾರ್ಯ ಆಭರಣಗಳನ್ನು ಪರಿಶೀಲಿಸಿ ₹5,20,500 ರಷ್ಟು ಸಾಲ ನೀಡಬಹುದೆಂದು ದೃಢೀಕರಿಸಿದ್ದರು. ಅದರ ಆಧಾರದ ಮೇಲೆ ₹4,60,000 ಸಾಲವನ್ನು ಯಶವಂತ್​ಗೆ ನೀಡಲಾಗಿತ್ತು.

ಕೆಲವು ದಿನಗಳ ಬಳಿಕ ಸಂಘದ ಅಪ್ರೈಸರ್ ಕೆ. ಭಾಸ್ಕರ ಆಚಾರ್ಯ ​ ಚಿನ್ನದ ಗುಣಮಟ್ಟವನ್ನು ಮರುಪರಿಶೀಲನೆ ಮಾಡಿದ ಸಂದರ್ಭದಲ್ಲಿ ಆಭರಣಗಳಲ್ಲಿ ಚಿನ್ನದ ಗುಣಮಟ್ಟ ಕಡಿಮೆಯಿದೆ ಎಂದು ತಿಳಿದುಬಂದಿದೆ.

ಈ ಸಂಬಂಧ ಮಾಹಿತಿ ನೀಡಲು ಸಂಘದಿಂದ ಯಶವಂತ್​ಗೆ ಕರೆ ಮಾಡಿದರೆ ಅವರು ಸಂಘದ ಸಂಪರ್ಕಕ್ಕೆ ಸಿಗದೇ ವಂಚಿಸಿದ್ದಾರೆ ಎನ್ನಲಾಗಿದೆ. ಸಾಕಷ್ಟು ಪ್ರಯತ್ನದ ಬಳಿಕವೂ ಯಶವಂತ್​ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಸಿಂಡಿಕೇಟ್​ ರೈತರ ಸಹಕಾರಿ ಸಂಘದ ವತಿಯಿಂದ ಬ್ರಹ್ಮಾವರ ಪೊಲೀಸ್​ ಠಾಣೆಯಲ್ಲಿ ದೂರು ನೀಡಲಾಗಿದೆ.

ಈ ದೂರಿನಲ್ಲಿ ಉಮಾನಾಥ ಶೆಟ್ಟಿ ಎಂಬವರ ಮೇಲೂ ಗುಮಾನಿ ವ್ಯಕ್ತಪಡಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಬ್ರಹ್ಮಾವರ ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದಾರೆ.

brahmavara cooperative society cheating gold loan

Exit mobile version