ಉಡುಪಿ (udupi New) : ಫ್ರೆಂಡ್‌ಶಿಪ್ ಕ್ಲಬ್ (Friendship Club) ಸದಸ್ಯತ್ವ ಕೊಡಿಸುವುದಾಗಿ ನಂಬಿಸಿ 66 ವರ್ಷದ ವೃದ್ದರಿಗೆ ಸುಮಾರು 5 ಲಕ್ಷಕ್ಕೂ ಅಧಿಕ ಹಣ ವಂಚನೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೈಬರ್ ಖದೀಮರಿಂದ ವಂಚನೆಗೆ ಒಳಗಾಗಿರುವವರನ್ನು ಉಸ್ಮಾನ್ ಸಾಹೇಬ್ ( 66 ವರ್ಷ) ಎಂದು ಗುರುತಿಸಲಾಗಿದೆ. ಉಡುಪಿ ಕಡಿಯಾಳಿಯ ನಿವಾಸಿಯಾಗಿರುವ ಉಸ್ಮಾನ್ ಸಾಹೇಬ್ ಅವರಿಗೆ ಫ್ರೆಂಡ್‌ಶಿಪ್ ಕ್ಲಬ್‌ನ ಸದಸ್ಯತ್ವ ಕೊಡಿಸುವ ಆಮಿಷವೊಡ್ಡಲಾಗಿತ್ತು. ಇದೇ ಕಾರಣದಿಂದ ಕ್ಲಬ್‌ನ ಸದಸ್ಯತ್ವಕ್ಕೆ ಅಂತಾ ಆರಂಭದಲ್ಲಿ 29 ಸಾವಿರ ರೂಪಾಯಿ ಹಣವನ್ನು ಗೂಗಲ್ ಪೇನಲ್ಲಿ ಹಾಕಿಸಿಕೊಂಡಿದ್ದರು.
ಸೈಬರ್ ಖದೀಮರ ಆಮಿಷಕ್ಕೆ ಒಳಗಾದ ಉಸ್ಮಾನ್ ಸಾಹೇಬ್ ಅವರು ತಮ್ಮ ಸೇವಿಂಗ್ಸ್ ಬ್ಯಾಂಕ್ ಖಾತೆಯಿಂದ ಗೂಗಲ್ ಪೇ (Google Pay), QR ಕೋಡ್ ಸ್ಕ್ಯಾನ್ ಹಾಗೂ ನೇರ ಬ್ಯಾಂಕ್ ಖಾತೆ ವರ್ಗಾವಣೆ ಮೂಲಕ ಹಣವನ್ನು ಕಳುಹಿಸಿದ್ದಾರೆ. ಜೂನ್ 27 2026ರಂದು 29,000 ರೂಪಾಯಿ ಹಣ ವರ್ಗಾವಣೆ ಮಾಡಲಾಗಿತ್ತು. ನಂತರ ಜುಲೈ 09ರಂದು 84,882 ರೂಪಾಯಿ, 99,000 ರೂಪಾಯಿ, 09 ಜುಲೈ 2026, ಜುಲೈ 14ರಂದು 2,00,000 ರೂಪಾಯಿ ಸೇರಿದಂತೆ ಒಟ್ಟು 5,11,882 ಹಣವನ್ನು ವರ್ಗಾವಣೆ ಮಾಡಲಾಗಿತ್ತು.
5 ಲಕ್ಷ ರೂಪಾಯಿಗೂ ಅಧಿಕ ಹಣ ವರ್ಗಾವಣೆ ಮಾಡಿದ ಬಳಿಕವೂ ಕ್ಲಬ್‌ನ ಸದಸ್ಯತ್ವ ನೀಡದ ಹಿನ್ನೆಲೆಯಲ್ಲಿ ತಾನು ಮೋಸ ಹೋಗಿರುವುದು ಬಯಲಾಗಿತ್ತು. ಈ ಹಿನ್ನೆಲೆಯಲ್ಲಿ ಉಸ್ಮಾನ್ ಸಾಹೇಬ್ ಅವರು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಏನಿದು ‘ಫ್ರೆಂಡ್‌ಶಿಪ್ ಕ್ಲಬ್’ (Friendship Club)?
ಒಂಟಿತನದಿಂದ ಬೇಸತ್ತಿರುವ ಯುವಕರು, ವೃದ್ದರು ಹಾಗೂ ಆನ್‌ಲೈನ್‌ನಲ್ಲಿ ಸುಲಭವಾಗಿ ಹಣ ಸಂಪಾದನೆಯ ದಾರಿ ಹುಡುಕುತ್ತಿರುವವರನ್ನು ಗುರಿಯಾಗಿಸಿಕೊಂಡು, ಸೈಬರ್ ಖದೀಮರು ಹಣೆಯುವ ಜಾಲ. ಸೈಬರ್ ವಂಚಕರು ನಿಮ್ಮ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್, ವಾಟ್ಸಾಪ್ ಅಥವಾ ಫೇಸ್‌ಬುಕ್, ಇನ್‌ಸ್ಟಾಗ್ರಾಂಗಳಲ್ಲಿ ಜಾಹೀರಾತು ನೀಡ್ತಾರೆ. ನಂತರ ಹೈ ಪ್ರೋಫೈಲ್ ಮಹಿಳೆಯ ಜೊತೆಗೆ ಸ್ನೇಹ ಬೆಳೆಸಿ, ವಿಐಪಿ ಡೇಟಿಂಗ್ ಕ್ಲಬ್ ಸೇರಿ ಸಾವಿರಾರು ರೂಪಾಯಿ ಸಂಪಾದಿಸಿ ಎಂದು ಮೆಸೇಜ್ ಕಳುಹಿಸುತ್ತಾರೆ.
ವಂಚನೆಗೆ ಒಳಗಾಗುವವರಿಗೆ ನಂಬಿಕೆ ಬರಬೇಕು ಅನ್ನೋ ಕಾರಣಕ್ಕೆ ಆಕರ್ಷಕವಾಗಿರುವ ಮಹಿಳೆಯರ ಪೋಟೋಗಳನ್ನು ಕಳುಹಿಸಿ ನಂಬಿಕೆ ಹುಟ್ಟಿಸುತ್ತಾರೆ. ಒಂದೊಮ್ಮೆ ನೀವು ಆಸಕ್ತಿ ತೋರಿ ಕರೆ ಮಾಡಿದ್ರೆ ಅಥವಾ ಮೆಸೇಜ್ ಮಾಡಿದ್ರೆ ನೋಂದಣಿ ಶುಲ್ಕವನ್ನು ಪಡೆದುಕೊಳ್ಳುತ್ತಾರೆ. ನೀವು ವಂಚನೆಯ ಜಾಲಕ್ಕೆ ಸಿಲುಕಿದ್ರೆ, ನಿಮ್ಮಿಂದ ಹಂತ ಹಂತವಾಗಿ ಹಣ ಪಿಕೀಸುತ್ತಾರೆ.
ಸಂತ್ರಸ್ತರು ಇನ್ನೇನು ಹಣ ನೀಡುವುದಕ್ಕೆ ಸಾಧ್ಯವಿಲ್ಲ, ತಮ್ಮ ಬಳಿ ಹಣ ಖಾಲಿ ಆಗಿದೆ ಅನ್ನೋದು ಗೊತ್ತಾದ್ರೆ, ಮೊಬೈಲ್ ನಂಬರ್ ಸ್ವಿಚ್ ಆಫ್ ಮಾಡುತ್ತಾರೆ. ಒಂದೊಮ್ಮೆ ಹಣ ಕೊಡದೇ ಇದ್ರೆ, ನಿಮ್ಮ ಕುಟುಂಬಕ್ಕೆ, ಸಮಾಜಕ್ಕೆ ನಿಮ್ಮ ರಹಸ್ಯ ವಿಚಾರ ತಿಳಿಸುತ್ತೇವೆ ಎಂದು ಬ್ಲಾಕ್‌ಮೇಲ್ ಮಾಡಿ ಮತ್ತಷ್ಟು ಹಣ ಪೀಕಿಸುತ್ತಾರೆ.
ಸಾರ್ವಜನಿಕ ಜಾಗೃತಿ : ಅನಾಮಧೇಯ ಫ್ರೆಂಡ್‌ಶಿಪ್ ಕ್ಲಬ್, ಡೇಟಿಂಗ್ ಆಪ್ ಅಥವಾ ಉದ್ಯೋಗದ ಆಮಿಷ ಒಡ್ಡುವ ಲಿಂಕ್‌ಗಳನ್ನು ನಂಬಿ ಹಣ ವರ್ಗಾಯಿಸಬೇಡಿ. ಆನ್‌ಲೈನ್ ವಂಚನೆಗೆ ಒಳಗಾದರೆ ತಕ್ಷಣ ಸೈಬರ್ ಕ್ರೈಮ್ ಸಹಾಯವಾಣಿ 1930 ಅಥವಾ cybercrime.gov.in ಗೆ ದೂರು ನೀಡಿ.
udupi 5 lakh scam Kannada News
