ಉಡುಪಿ : ತಾಯಿಯ ಕೈ ಜಾರಿ ಬಾವಿಗೆ ಬಿದ್ದು ಒಂದೂವರೆ ವರ್ಷದ ಮಗು ಸಾವು

Udupi Kinnimulki : ಉಡುಪಿ: ಬಾವಿಯ ನೀರು ಸೇದುವಾಗ ತಾಯಿಯ ಕೈಯಲ್ಲಿದ್ದ ಒಂದೂವರೆ ವರ್ಷದ ಮಗು ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಸಾವನ್ನಪ್ಪಿರುವ ಮಗುವನ್ನು ಕೀರ್ತನ ಎಂದು ಗುರುತಿಸಲಾಗಿದೆ.

ಉಡುಪಿ ನಗರದ ಕಿನ್ನಿಮೂಲ್ಕಿ ನಿವಾಸಿ ಆಗಿರುವ ನಯನಾ ಕರ್ಕಡ ಎಂಬವರು ಮನೆಯ ಬಾವಿಯಿಂದ ನೀರು ಸೇದುವ ವೇಳೆಯಲ್ಲಿ ಈ ಘಟನೆ ಸಂಬಂವಿಸಿದೆ. ನಯನಾ ಕರ್ಕಡ ಅವರು ಮಗುವನ್ನು ಕೈಯಲ್ಲಿ ಎತ್ತಿಕೊಂಡು ನೀರು ಸೇದುತ್ತಿದ್ದರು. ಆಕಸ್ಮಿಕವಾಗಿ ಮಗು ತಾಯಿ ಕೈ ಜಾರಿ ಬಾವಿಗೆ ಬಿದ್ದಿದೆ.

ಮಗು ಬಾವಿಗೆ ಬೀಳುತ್ತಿದ್ದಂತೆಯೇ ತಾಯಿ ನಯನಾ ಕರ್ಕಡ ಕೂಡ ಮಗುವಿನ ರಕ್ಷಣೆಗಾಗಿ ಯೋಚನೆ ಮಾಡದೇ ಬಾವಿಗೆ ಧುಮುಕಿದ್ದಾರೆ. ಆದರೆ ಮಗುವಿನ ರಕ್ಷಣೆ ಮಾಡುವ ಮೊದಲೇ ಮಗು ಸಾವನ್ನಪ್ಪಿದೆ.

ತಾಯಿಯ ಆಕ್ರಂದನ ಮುಗಿಲುಮುಟ್ಟಿತ್ತು. ಈ ದಾರುಣ ಘಟನೆಯಿಂದ ಸ್ಥಳೀಯರೆಲ್ಲರೂ ದುಃಖಿತರಾಗಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಉಡುಪಿ ನಗರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ ಮತ್ತು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Udupi Kinnimulki Child Dies After Slipping from Mothers Hands and Falling into a Well

Exit mobile version