ದೇಹವೆಲ್ಲಾ ಉರಿಯುವ ವಿಚಿತ್ರ ಕಾಯಿಲೆಯಿಂದಾಗಿ ಮನೆಯಲ್ಲೇ ಇರಲಾಗದೆ, ದಿನದ 24 ಗಂಟೆಯೂ ಕೆರೆಯ ನೀರಿನಲ್ಲೇ ವಾಸಿಸುತ್ತಿದ್ದ ಪಶ್ಚಿಮ ಬಂಗಾಳದ ಬಡ ಬಾಲಕನ ನೆರವಿಗೆ ರಿಲಯನ್ಸ್ ಇಂಡಸ್ಟ್ರೀಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಅನಂತ್ ಅಂಬಾನಿ (Anant Ambani) ಧಾವಿಸಿದ್ದಾರೆ.
ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಬೆಲ್ದಂಗಾ ಗ್ರಾಮದ ಬಾಲಕ 'ಇಕ್ಬಾಲ್', ಕಳೆದ ಹಲವು ದಿನಗಳಿಂದ ಕೆರೆಯ ನೀರಿನಲ್ಲೇ ಹಗಲು-ರಾತ್ರಿ ಕಳೆಯುತ್ತಿದ್ದನು. ನೀರಿನಿಂದ ಹೊರಬಂದರೆ ಇಡೀ ದೇಹದಲ್ಲಿ ತೀವ್ರವಾದ ಉರಿ ಮತ್ತು ಸೂಜಿ ಚುಚ್ಚಿದಂತಹ ನೋವು ಕಾಣಿಸಿಕೊಳ್ಳುತ್ತಿತ್ತು. ಹೀಗಾಗಿ, ನೋವಿನಿಂದ ತಪ್ಪಿಸಿಕೊಳ್ಳಲು ಆತ ಕೆರೆಯ ನೀರಿನಲ್ಲೇ ಮುಳುಗಿರಬೇಕಿತ್ತು. ಇತ್ತೀಚೆಗೆ ಆತ ಕೆರೆಯಲ್ಲೇ ಕುಳಿತು ತಿಂಡಿ ತಿನ್ನುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಬಡತನದಲ್ಲಿದ್ದ ಕುಟುಂಬಕ್ಕೆ ಹೆಚ್ಚಿನ ಚಿಕಿತ್ಸೆ ಕೊಡಿಸಲು ಸಾಧ್ಯವಾಗಿರಲಿಲ್ಲ.
ಸಾಮಾಜಿಕ ಜಾಲತಾಣಗಳಲ್ಲಿ ಬಾಲಕನ ದಯನೀಯ ಸ್ಥಿತಿಯ ವಿಡಿಯೋ ಕಂಡ ಅನಂತ್ ಅಂಬಾನಿ, ತಕ್ಷಣವೇ ಕಾರ್ಯಪ್ರವೃತ್ತರಾದರು. ಮುಂಬೈನಿಂದ ವಿಶೇಷ ವೈದ್ಯರ ತಂಡದ ಜೊತೆ ವಿಮಾನದ ವ್ಯವಸ್ಥೆ (Airlift) ಮಾಡಿ, ಬಾಲಕನನ್ನು ಮುಂಬೈಗೆ ಕರೆಸಿಕೊಂಡಿದ್ದಾರೆ.
ಇಕ್ಬಾಲ್‌ನನ್ನು ಮುಂಬೈನ ‘ಸರ್ ಎಚ್.ಎನ್. ರಿಲಯನ್ಸ್ ಫೌಂಡೇಶನ್ ಆಸ್ಪತ್ರೆ’ಗೆ (Sir HN Reliance Foundation Hospital) ದಾಖಲಿಸಲಾಗಿದೆ. ಬಾಲಕನ ಎಲ್ಲಾ ಪರೀಕ್ಷೆಗಳು ಹಾಗೂ ದೀರ್ಘಾವಧಿಯ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ತಾವೇ ಭರಿಸುವುದಾಗಿ ಅನಂತ್ ಅಂಬಾನಿ ತಿಳಿಸಿದ್ದಾರೆ.
ಚರ್ಮರೋಗ ತಜ್ಞರ ಪ್ರಕಾರ, ನಿರಂತರವಾಗಿ ನೀರಿನಲ್ಲೇ ಇರುವುದರಿಂದ ಚರ್ಮಕ್ಕೆ ಗಂಭೀರ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರ ಸೋಂಕು ತಗುಲುವ ಅಪಾಯವಿತ್ತು. ಇದೀಗ ಮುಂಬೈನ ಉನ್ನತ ವೈದ್ಯರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ಆರಂಭವಾಗಿದ್ದು, ಬಾಲಕ ಶೀಘ್ರ ಗುಣಮುಖನಾಗುವ ಭರವಸೆ ಮೂಡಿದೆ. ಬಡ ಬಾಲಕನ ಜೀವ ಉಳಿಸಲು ಮುಂದಾದ ಅನಂತ್ ಅಂಬಾನಿ ಅವರ ಈ ಮಾನವೀಯ ಕಾರ್ಯಕ್ಕೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ.