News Next Kannada

viral news

ಪೋಷಕರೇ ಎಚ್ಚರ: ನೀವು  ಕಷ್ಟಪಟ್ಟು ಗಳಿಸಿದ ಆಸ್ತಿಯೇ ನಿಮ್ಮ  ಮಕ್ಕಳ ಭವಿಷ್ಯಕ್ಕೆ ಅಡ್ಡಿಯಾಗುತ್ತಿದೆಯಾ ?

ಪ್ರೇಮ್ ಸೋನಿ ಎಂಬುವವರು ಸಾಮಾಜಿಕ ಜಾಲತಾಣ 'X' ನಲ್ಲಿ ಹಂಚಿಕೊಂಡ ಪೋಸ್ಟ್ ಶ್ರೀಮಂತ ಭಾರತೀಯ ಕುಟುಂಬಗಳ ಮಕ್ಕಳ ಜೀವನಶೈಲಿ ಅವರ ಉದ್ಯೋಗದ ಮನಸ್ಥಿತಿಯ ಕುರಿತು ಹೊಸ ಪ್ರಶ್ನೆಗಳನ್ನು ಎತ್ತಿದೆ.

By Meghana Pranuth | ಮೇಘನಾ ಪ್ರಣೂತ್‌
Photo: Gemini_Generated

‘ನಮ್ಮ ಮಕ್ಕಳು ನಾವು ಅನುಭವಿಸಿದ ಕಷ್ಟಗಳನ್ನು ಅನುಭವಿಸಬಾರದು, ಅವರು ಆರಾಮವಾಗಿರಬೇಕು’ ಎಂಬುದು ಪ್ರತಿಯೊಬ್ಬ ಪೋಷಕರ ಹಾರೈಕೆ. ಆದರೆ, ಪೋಷಕರು ಕಷ್ಟಪಟ್ಟು ಗಳಿಸಿದ ಆಸ್ತಿ ಮತ್ತು ಆರ್ಥಿಕ ಭದ್ರತೆಯೇ ಇಂದಿನ ಯುವಜನತೆಯ (Gen Z) ಮಹತ್ವಾಕಾಂಕ್ಷೆ ಹಾಗೂ ಸ್ವಾವಲಂಬನೆಗೆ ಮುಳ್ಳಾಗುತ್ತಿದೆಯಾ? ಇಂತಹುದೊಂದು ಗಂಭೀರ ಚರ್ಚೆ ಈಗ ಸಾಮಾಜಿಕ ಜಾಲತಾಣಗಳಲ್ಲಿ  ಚರ್ಚೆಗೆ ಕಾರಣವಾಗಿದೆ.

ಪ್ರೇಮ್ ಸೋನಿ ಎಂಬುವವರು ಸಾಮಾಜಿಕ ಜಾಲತಾಣ 'X' (ಟ್ವಿಟರ್)ನಲ್ಲಿ ಹಂಚಿಕೊಂಡ ಪೋಸ್ಟ್ ಒಂದು ಶ್ರೀಮಂತ ಭಾರತೀಯ ಕುಟುಂಬಗಳ (HNI) ಮಕ್ಕಳ ಜೀವನಶೈಲಿ ಮತ್ತು ಅವರ ಉದ್ಯೋಗದ ಮನಸ್ಥಿತಿಯ ಕುರಿತು ಹೊಸ ಪ್ರಶ್ನೆಗಳನ್ನು ಎತ್ತಿದೆ. ಪೋಷಕರಿಂದ ಸಿಗುವ ತಲೆಯಿಲ್ಲದ ಆರ್ಥಿಕ ಬೆಂಬಲ, ಆಸ್ತಿ ಅಥವಾ ನಿಷ್ಕ್ರಿಯ ಆದಾಯ (Passive Income) ಇರುವುದರಿಂದ ಇಂದಿನ ಯುವಕರಿಗೆ ಸ್ವತಃ ಸಂಪಾದನೆ ಮಾಡುವ ತುರ್ತು ಅಥವಾ ಅನಿವಾರ್ಯತೆ ಅನಿಸುತ್ತಿಲ್ಲ ಎಂದು ಸೋನಿ ವಾದಿಸಿದ್ದಾರೆ.

Photo Desk/News Next Kannada

ವಿಶೇಷವಾಗಿ ಟೈಯರ್-1 ಮತ್ತು ಟೈಯರ್-2 ನಗರಗಳಲ್ಲಿ ತಿಂಗಳಿಗೆ ₹30,000 ಸಂಬಳ ಸಿಗುವ ಆರಂಭಿಕ ಹಂತದ ಕೆಲಸಗಳು ಈ ಯುವಕರಿಗೆ ಆಕರ್ಷಕವಾಗಿ ಕಾಣುತ್ತಿಲ್ಲ. ದುಬಾರಿ ಜೀವನಶೈಲಿಗೆ ಈ ಸಂಬಳ ಸಾಲದು ಎಂಬ ಭಾವನೆ ಅವರಲ್ಲಿದೆ. ಮತ್ತೊಂದೆಡೆ, ಮಾರಾಟ (Sales), ಸೇವಾ ಕ್ಷೇತ್ರ ಅಥವಾ ಬ್ಲೂ-ಕಾಲರ್ ಉದ್ಯೋಗಗಳನ್ನು ಮಾಡುವುದು ತಮ್ಮ ಸಾಮಾಜಿಕ ಅಂತಸ್ತಿಗೆ (Social Status) ಕುಂದು ತರುತ್ತದೆ ಎಂಬ ಹಿಂಜರಿಕೆಯೂ ಕಾಣಿಸುತ್ತಿದೆ.

ಪೋಷಕರು ನೀಡುವ ಸೌಕರ್ಯ ಒಳ್ಳೆಯದೇ ಆದರೂ, ಅತಿಯಾದ ಆರ್ಥಿಕ ಬೆಂಬಲವು ಮಕ್ಕಳಲ್ಲಿ ಜವಾಬ್ದಾರಿ, ಸ್ವತಂತ್ರ ನಿರ್ಧಾರ ತಳೆಯುವ ಸಾಮರ್ಥ್ಯ ಹಾಗೂ ಕೆಲಸದ ಅನುಭವ ಪಡೆಯುವ ಆಸಕ್ತಿಯನ್ನೇ ಕುಗ್ಗಿಸುತ್ತಿದೆ ಎಂಬ ವಾದಗಳು ಕೇಳಿಬಂದಿವೆ.

ಆದರೆ, ಈ ವಾದಕ್ಕೆ ಭಿನ್ನ ಅಭಿಪ್ರಾಯಗಳೂ ವ್ಯಕ್ತವಾಗಿವೆ. ಕುಟುಂಬದ ಆರ್ಥಿಕ ಭದ್ರತೆ ಇರುವ ಯುವಕರು ಸಾಮಾನ್ಯ ಕೆಲಸ ಮಾಡುವ ಬದಲು ಉದ್ಯಮಶೀಲತೆ (Startups), ಸೃಜನಶೀಲ ಕ್ಷೇತ್ರ (Creative Fields) ಅಥವಾ ಸಾಮಾಜಿಕ ಸೇವೆಯತ್ತ ಮುಖ ಮಾಡುತ್ತಿದ್ದಾರೆ. ಪೋಷಕರು ಕಷ್ಟಪಟ್ಟು ಸಂಪಾದಿಸಿದ ಸಂಪತ್ತನ್ನು ಮಕ್ಕಳು ಅನುಭವಿಸುವುದರಲ್ಲಿ ತಪ್ಪೇನಿದೆ ಎಂಬ ಪ್ರಶ್ನೆಯನ್ನೂ ಕೆಲವರು ಎತ್ತಿದ್ದಾರೆ.

ಸಂಪತ್ತು ಯುವಕರಿಗೆ ಹೊಸ ಅವಕಾಶಗಳ ಬಾಗಿಲು ತೆರೆಯಬಹುದು. ಆದರೆ, ಹಣದ ಮೌಲ್ಯ, ಶ್ರಮ ಮತ್ತು ಸ್ವಾವಲಂಬನೆಯನ್ನು ಮಕ್ಕಳಿಗೆ ಕಲಿಸದಿದ್ದರೆ ಆ ಸಂಪತ್ತೇ ಅವರ ಉಜ್ವಲ ಭವಿಷ್ಯಕ್ಕೆ ಮುಳ್ಳಾಗಬಹುದು ಎಂಬುದು ನೆಟ್ಟಿಗರ ಒಟ್ಟಾರೆ ಅಭಿಪ್ರಾಯ.