ಆಂಧ್ರಪ್ರದೇಶ: ಕಳ್ಳತನ ಮಾಡಿದ ಮೇಲೆ ಸಿಕ್ಕಿಬೀಳಬಾರದೆಂದು ಓಡಿಹೋಗುವುದು ಮಾಮೂಲಿ. ಆದರೆ, ಕಳ್ಳತನ ಮಾಡಿ 15 ದಿನಗಳ ಬಳಿಕ ಪಶ್ಚಾತ್ತಾಪ ಪಟ್ಟು, ಕದ್ದ ಬಹುಪಾಲು ಮಾಲನ್ನು ವಾಪಸ್ ತಂದುಕೊಟ್ಟು 'ಕ್ಷಮಿಸಿ' ಎಂದು ಪತ್ರ ಬರೆದಿರುವ ಅಪರೂಪದ ಘಟನೆಯೊಂದು ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯಲ್ಲಿ ನಡೆದಿದೆ.
ಕಾಕಿನಾಡ ಜಿಲ್ಲೆಯ ಕರಪ ಮಂಡಲದ ರಾಮಕಂಚಿರಾಜು ನಗರದ ನಿವಾಸಿ ನಾಮಲ ಗಣೇಶ್ ಅವರ ಮನೆಯಲ್ಲಿ ಈ ಘಟನೆ ನಡೆದಿದೆ. ಜುಲೈ 18 ಗಣೇಶ್ ಅವರು ಕುಟುಂಬ ಸಮೇತ ಸ್ವಗ್ರಾಮಕ್ಕೆ ತೆರಳಿದ್ದಾಗ ಹೊಂಚು ಹಾಕಿದ್ದ ಕಳ್ಳರು, ಮನೆಯ ಬೀಗ ಒಡೆದು ಒಳನುಗ್ಗಿದ್ದರು. ಸುಮಾರು ₹6.50 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ₹50,000 ನಗದು ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ಗಣೇಶ್ ಅವರು ಕರಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪೊಲೀಸರು ಕಳ್ಳರ ಪತ್ತೆಗೆ ತನಿಖೆ ನಡೆಸುತ್ತಿರುವಾಗಲೇ, ಆಗಸ್ಟ್ 02ರ ಮುಂಜಾನೆ ಗಣೇಶ್ ಅವರ ಮನೆಯ ಆವರಣದಲ್ಲಿ ರಹಸ್ಯ ಬ್ಯಾಗ್ ಒಂದು ಪತ್ತೆಯಾಗಿತ್ತು. ಸಂಶಯಗೊಂಡು ಬ್ಯಾಗ್ ತೆರೆದು ನೋಡಿದ ಮನೆಮಾಲೀಕನಿಗೆ ಆಶ್ಚರ್ಯ ಕಾದಿತ್ತು. ಕಳುವಾಗಿದ್ದ ಬಹುಪಾಲು ಚಿನ್ನಾಭರಣ ಹಾಗೂ ನಗದು ಆ ಬ್ಯಾಗ್‌ನಲ್ಲಿ ಸುರಕ್ಷಿತವಾಗಿತ್ತು.
ಕದ್ದ ಮಾಲಿನ ಜೊತೆಗೆ ಕಳ್ಳರು ಒಂದು ಭಾವನಾತ್ಮಕ ಕೈಬರಹದ ಪತ್ರವನ್ನು (Sorry Note) ಬಿಟ್ಟು ಹೋಗಿದ್ದರು. "ನಾವು ಮಾಡಿದ್ದು ದೊಡ್ಡ ತಪ್ಪು, ದಯವಿಟ್ಟು ನಮ್ಮನ್ನು ಕ್ಷಮಿಸಿ. ಕದ್ದ ಹಣದಲ್ಲಿ ನಾವು ಈಗಾಗಲೇ ₹22,000 ಖರ್ಚು ಮಾಡಿದ್ದೇವೆ. ಆ ಹಣವನ್ನು ಮಾತ್ರ ನಮಗೆ ಮರಳಿಸಲು ಸಾಧ್ಯವಾಗುತ್ತಿಲ್ಲ. ಉಳಿದ ಎಲ್ಲಾ ಚಿನ್ನಾಭರಣ ಮತ್ತು ಹಣವನ್ನು ವಾಪಸ್ ನೀಡುತ್ತಿದ್ದೇವೆ. ವೆರಿ ಸಾರಿ..."
ತಮ್ಮ ಇಡೀ ಜೀವನದ ಗಳಿಕೆಯಾಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳು ವಾಪಸ್ ಸಿಕ್ಕಿದ್ದನ್ನು ಕಂಡು ಮಾಲೀಕ ಗಣೇಶ್ ನಿಟ್ಟುಸಿರು ಬಿಟ್ಟಿದ್ದಾರೆ. ₹22 ಸಾವಿರ ನಷ್ಟವಾದರೂ, ಚಿನ್ನ ಸುರಕ್ಷಿತವಾಗಿ ತಲುಪಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಸಾಮಾನ್ಯವಾಗಿ ಕಳ್ಳತನದ ನಂತರ ಕದ್ದ ಮಾಲನ್ನು ಮಾರಿ ಮಜಾ ಮಾಡುವ ಕಾಲದಲ್ಲಿ, ಪಶ್ಚಾತ್ತಾಪ ಪಟ್ಟು ಮಾಲನ್ನು ವಾಪಸ್ ನೀಡಿದ ಈ 'ಸಭ್ಯ' ಕಳ್ಳರ ಕಥೆ ಈಗ ಆಂಧ್ರಪ್ರದೇಶದಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ. ಪ್ರಸ್ತುತ ಪೊಲೀಸರು ಈ ಪಶ್ಚಾತ್ತಾಪ ಪಟ್ಟ ಕಳ್ಳರು ಯಾರೆಂಬುದನ್ನು ಹುಡುಕಲು ತನಿಖೆ ಮುಂದುವರಿಸಿದ್ದಾರೆ.