ಹಿಂದೂಗಳು ತಮ್ಮ ಪೂರ್ವಜರನ್ನು ನೆನಪಿಸಿಕೊಂಡು ಅವರಿಗೆ ಗೌರವ ಸಲ್ಲಿಸಲು ಪಿತೃ ಪಕ್ಷವನ್ನು ಆಚರಿಸುತ್ತಾರೆ. ಒಂದು ಪಕ್ಷ ಅಂದರೆ 15 ದಿನಗಳಲ್ಲಿ ಕುಟುಂಬದವರು ತಮ್ಮ ಪೂರ್ವಜರನ್ನು ಸ್ಮರಿಸಿ ಶ್ರಾದ್ಧ, ತರ್ಪಣ ಮತ್ತು ದಾನಧರ್ಮಗಳನ್ನು ಮಾಡುತ್ತಾರೆ. ಧಾರ್ಮಿಕ ನಂಬಿಕೆಯ ಪ್ರಕಾರ ಈ ಆಚರಣೆಯು ಪಿತೃಗಳಿಗೆ ಶಾಂತಿಯನ್ನು ತರಲು ಸಹಾಯ ಮಾಡುತ್ತದೆ. ಪಿತೃಪಕ್ಷವನ್ನು ಆಚರಿಸುವುದರಿಂದ ಪಿತೃ ದೋಷ ಕಡಿಮೆಯಾಗುತ್ತದೆ. ಕುಟುಂಬಕ್ಕೆ ಹಿರಿಯರ ಆಶೀರ್ವಾದ ದೊರೆಯುತ್ತದೆ. ಶ್ರಾದ್ಧ, ದಾನ ಮಾಡುವುದರಿಂದ ಭವಿಷ್ಯದ ದಿನಗಳಲ್ಲಿ ಶುಭವಾಗಲಿದೆ ಎಂದು ಪರಿಗಣಿಸಲಾಗಿದೆ.
ಪಿತೃ ಪಕ್ಷ ಯಾವಾಗ ಪ್ರಾರಂಭ?
ಹಿಂದೂ ಪಂಚಾಂಗದ ಪ್ರಕಾರ ಈ ವರ್ಷ ಪಿತೃ ಪಕ್ಷವು ಸೆಪ್ಟೆಂಬರ್ 26, 2026 ಶನಿವಾರದಿಂದ ಪ್ರಾರಂಭವಾಗುತ್ತದೆ. ಇದು ಅಕ್ಟೋಬರ್ 10, 2026, ಸರ್ವ ಪಿತೃ ಅಮಾವಸ್ಯೆಯಂದು ಸಮಾಪ್ತವಾಗುತ್ತದೆ. ಮರಣ ದಿನಾಂಕ ಗೊತ್ತಿರದ ಅಥವಾ ನಿರ್ದಿಷ್ಟ ದಿನದಂದು ಶ್ರಾದ್ಧ ಮಾಡಲು ಸಾಧ್ಯವಾಗದ ಪೂರ್ವಜರಿಗೆ ಶ್ರಾದ್ಧ ಮಾಡಲು ಸರ್ವ ಪಿತೃ ಅಮಾವಾಸ್ಯೆಯು ಅತ್ಯುತ್ತಮ ದಿನವೆಂದು ಪರಿಗಣಿಸಲಾಗಿದೆ.
ಪಿತೃ ಪಕ್ಷದ ಸಮಯದಲ್ಲಿ ಏನು ಮಾಡಬಾರದು?
ಹಿಂದೂ ಧರ್ಮದಲ್ಲಿ ಪಿತೃ ಪಕ್ಷದ ಸಮಯದಲ್ಲಿ ಕೆಲವು ಚಟುವಟಿಕೆಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ. ಏಕೆಂದರೆ ಅದರಿಂದ ಪಿತೃ ದೋಷವುಂಟಾಗಬಹುದು ಎಂದು ಹೇಳಲಾಗಿದೆ. ಶಾಸ್ತ್ರಗಳ ಪ್ರಕಾರ ಪತೃ ಪಕ್ಷ ಅಥವಾ ಶ್ರಾದ್ಧದ ಸಮಯದಲ್ಲಿ ಕೂದಲು, ಗಡ್ಡ ಅಥವಾ ಉಗುರುಗಳನ್ನು ಕತ್ತರಿಸುವುದನ್ನು ಮಾಡಬಾರದು. ಈ ಸಮಯದಲ್ಲಿ ತಾಮಸಿಕ ಆಹಾರಗಳನ್ನು ಸೇವಿಸಬಾರದು. ಹೊಸ ಬಟ್ಟೆ, ಆಸ್ತಿ ಅಥವಾ ವಸ್ತುಗಳನ್ನು ಖರೀದಿಸುವುದನ್ನು ಮಾಡಬಾರದು. ಮದುವೆ, ನಿಶ್ಚಿತಾರ್ಥ, ಜವಳ, ಗೃಹಪ್ರವೇಶದಂತಹ ಶುಭ ಸಮಾರಂಭ ಮಾಡಬಾರದು. ಹೊಸ ವ್ಯಾಪರ–ವ್ಯವಹಾರಗಳನ್ನು ಸಹ ಮಾಡಬಾರದು.
ಪಿತೃ ಪಕ್ಷದಲ್ಲಿ ಏನು ಮಾಡಬೇಕು?
ಈ ಸಮಯದಲ್ಲಿ ಪ್ರಾಣಿಗಳಿಗೆ, ಕಾಗೆ, ಪಕ್ಷಿಗಳಿಗೆ ಆಹಾರ ನೀಡಿ. ಇದರಿಂದ ಪೂರ್ವಜರು ಸಂತುಷ್ಟರಾಗಿ ಸಂತಾನ ಪ್ರಾಪ್ತಿಯಾಗುತ್ತದೆ. ಬಡತನ ನಿವಾರಣೆಯಾಗುತ್ತದೆ. ಆರ್ಥಿಕ ಸಮೃದ್ಧಿ ದೊರೆಯುತ್ತದೆ.