ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಖರೀದಿಸುವವರಿಗೆ ಬಂಪರ್ ಆಫರ್; ಆರಂಭಿಕ ಬೆಲೆ ಭಾರೀ ಇಳಿಕೆ

ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಖರೀದಿಸುವವರಿಗೆ ಕಂಪನಿಯು ಹೊಸ ಬ್ಯಾಟರಿ ಸಬ್ಸ್ಕ್ರಿಪ್ಷನ್ ಯೋಜನೆ ಪರಿಚಯಿಸಿದೆ. ಇದರಿಂದ ಆರಂಭಿಕ ಬೆಲೆ ಗಣನೀಯವಾಗಿ ಇಳಿಕೆಯಾಗಿದ್ದು, ಗ್ರಾಹಕರಿಗೆ ಕೈಗೆಟುಕುವ ಆಯ್ಕೆಯಾಗಿದೆ.

ಎಲೆಕ್ಟ್ರಿಕ್ ವಾಹನ ಖರೀದಿಸಲು ಯೋಜಿಸುತ್ತಿರುವವರಿಗೆ ಹ್ಯುಂಡೈ ಮೋಟಾರ್ ಇಂಡಿಯಾ ಹೊಸ ಅವಕಾಶ ನೀಡಿದೆ. ಕಂಪನಿಯ ಜನಪ್ರಿಯ ಕ್ರೆಟಾ ಎಲೆಕ್ಟ್ರಿಕ್ ಎಸ್‌ಯುವಿಗೆ ಹೊಸ ಬ್ಯಾಟರಿ ಆಸ್ ಎ ಸರ್ವೀಸ್ (BaaS) ಯೋಜನೆಯನ್ನು ಪರಿಚಯಿಸಿದ್ದು, ಇದರ ಮೂಲಕ ವಾಹನದ ಆರಂಭಿಕ ಖರೀದಿ ವೆಚ್ಚವನ್ನು ಗಮನಾರ್ಹವಾಗಿ ಕಡಿಮೆ ಮಾಡಿದೆ.

ಹೊಸ ಯೋಜನೆಯಡಿ ಬ್ಯಾಟರಿಯನ್ನು ಪ್ರತ್ಯೇಕವಾಗಿ ಸಬ್ಸ್ಕ್ರಿಪ್ಷನ್ ಮಾದರಿಯಲ್ಲಿ ಪಡೆಯಬಹುದಾಗಿದೆ. ಇದರಿಂದ ಬ್ಯಾಟರಿಯ ಸಂಪೂರ್ಣ ವೆಚ್ಚವನ್ನು ಒಮ್ಮೆಲೇ ಪಾವತಿಸುವ ಅಗತ್ಯ ಇರುವುದಿಲ್ಲ. ಪರಿಣಾಮವಾಗಿ, ಕ್ರೆಟಾ ಎಲೆಕ್ಟ್ರಿಕ್‌ನ ಎಕ್ಸ್‌ಶೋರೂಂ ಆರಂಭಿಕ ಬೆಲೆ ₹18.03 ಲಕ್ಷದಿಂದ ಇಳಿದು ₹10.99 ಲಕ್ಷಕ್ಕೆ ಬಂದಿದೆ.

ಈ ಯೋಜನೆಯಲ್ಲಿ ಗ್ರಾಹಕರು ಬಳಸಿದ ಪ್ರತಿ ಕಿಲೋಮೀಟರ್‌ಗೆ ₹3.90 ಪಾವತಿಸಬೇಕು. ಇದರ ಪರಿಣಾಮ ಆರಂಭಿಕ ಖರೀದಿಯಲ್ಲೇ ಸುಮಾರು ₹7.04 ಲಕ್ಷದವರೆಗೆ ಉಳಿತಾಯವಾಗುತ್ತದೆ. ಜೊತೆಗೆ, ಹೆಚ್ಚುವರಿ ಅನುಕೂಲಕ್ಕಾಗಿ ಇಂಟಿಗ್ರೇಟೆಡ್ ಸೈಡ್ ಫುಟ್‌ಸ್ಟೆಪ್‌ನ್ನೂ ಕಂಪನಿ ಸೇರಿಸಿದೆ.

ಕಾರಿನ ವೈಶಿಷ್ಟ್ಯಗಳ ವಿಷಯಕ್ಕೆ ಬಂದರೆ, 42kWh ಹಾಗೂ 51.4kWh ಬ್ಯಾಟರಿ ಆಯ್ಕೆಗಳು ಲಭ್ಯವಿದ್ದು, ಒಂದೇ ಚಾರ್ಜ್‌ನಲ್ಲಿ ಗರಿಷ್ಠ 510 ಕಿಲೋಮೀಟರ್‌ವರೆಗೆ ಸಂಚರಿಸಬಹುದಾಗಿದೆ. ಡಿಸಿ ಫಾಸ್ಟ್ ಚಾರ್ಜರ್ ಬಳಿಸಿದರೆ ಕೇವಲ 39 ನಿಮಿಷಗಳಲ್ಲಿ 10ರಿಂದ 80 ಶೇಕಡಾ ಬ್ಯಾಟರಿ ಚಾರ್ಜ್ ಮಾಡಬಹುದು.

ಒಳಾಂಗಣದಲ್ಲಿ ಡ್ಯುಯಲ್ 10.25 ಇಂಚಿನ ಡಿಜಿಟಲ್ ಡಿಸ್ಪ್ಲೇ, ವೆಂಟಿಲೇಟೆಡ್ ಸೀಟುಗಳು, 360 ಡಿಗ್ರಿ ಕ್ಯಾಮೆರಾ, ಲೆವೆಲ್-2 ADAS ಸುರಕ್ಷತಾ ವ್ಯವಸ್ಥೆ, ಕನೆಕ್ಟೆಡ್ ಕಾರ್ ತಂತ್ರಜ್ಞಾನ ಹಾಗೂ ಬೋಸ್ ಸೌಂಡ್ ಸಿಸ್ಟಮ್ ಸೇರಿದಂತೆ ಹಲವು ಪ್ರೀಮಿಯಂ ಸೌಲಭ್ಯಗಳನ್ನು ನೀಡಲಾಗಿದೆ.

ಎಲೆಕ್ಟ್ರಿಕ್ ಎಸ್‌ಯುವಿ ಖರೀದಿಸಲು ಯೋಚಿಸುತ್ತಿರುವವರಿಗೆ ಈ ಹೊಸ BaaS ಯೋಜನೆ ಹೆಚ್ಚು ಕೈಗೆಟುಕುವ ಆಯ್ಕೆಯಾಗಲಿದೆ. ಯೋಜನೆಯ ಸಂಪೂರ್ಣ ಮಾಹಿತಿ ಹಾಗೂ ಲಭ್ಯವಿರುವ ಆಫರ್‌ಗಳಿಗಾಗಿ ಸಮೀಪದ ಹ್ಯುಂಡೈ ಶೋರೂಮ್‌ಗೆ ಭೇಟಿ ನೀಡಿ ವಿವರ ತಿಳಿದುಕೊಳ್ಳಬಹುದು.

Exit mobile version