ರೈತರಿಗೆ ಗುಡ್‌ ನ್ಯೂಸ್: ಕಿಸಾನ್ ಕ್ರೆಡಿಟ್ ಕಾರ್ಡ್ ನಿಯಮಗಳಲ್ಲಿ ಭಾರಿ ಬದಲಾವಣೆ

Kisan Credit Card rules: ದೇಶದ ರೈತರ ಆರ್ಥಿಕ ಸಬಲೀಕರಣಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್ (RBI), ಕಿಸಾನ್ ಕ್ರೆಡಿಟ್ ಕಾರ್ಡ್ (KCC) ಯೋಜನೆಯಲ್ಲಿ ಮಹತ್ವದ ಬದಲಾವಣೆಗಳನ್ನು ತರಲು ಮುಂದಾಗಿದೆ. ಕೃಷಿ ಸಾಲ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸುವ ಮತ್ತು ರೈತರಿಗೆ ಹೆಚ್ಚಿನ ನಮನೀಯತೆ ನೀಡುವ ಉದ್ದೇಶದಿಂದ ಹೊಸ ಕರಡು ನಿಯಮಗಳನ್ನು ಸಿದ್ಧಪಡಿಸಿದೆ.

ಈ ಯೋಜನೆಯಲ್ಲಿ ಆಗಲಿರುವ 5 ಪ್ರಮುಖ ಬದಲಾವಣೆಗಳು ಇಲ್ಲಿವೆ:

ಏಕರೂಪದ ಹೊಸ ಚೌಕಟ್ಟು

ಈ ಹಿಂದೆ ಕೃಷಿ ಮತ್ತು ಅದರ ಪೂರಕ ಚಟುವಟಿಕೆಗಳಿಗೆ ಬೇರೆ ಬೇರೆ ನಿಯಮಗಳಿದ್ದವು. ಈಗ ಆರ್‌ಬಿಐ ಎಲ್ಲವನ್ನೂ ಒಳಗೊಂಡ ಒಂದೇ ಸುಗಮ ಚೌಕಟ್ಟನ್ನು ಪ್ರಸ್ತಾವಿಸಿದೆ. ಇದು ವಾಣಿಜ್ಯ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಮತ್ತು ಸಹಕಾರಿ ಬ್ಯಾಂಕುಗಳಿಗೂ ಅನ್ವಯಿಸಲಿದೆ.

ಬೆಳೆ ಹಂಗಾಮುಗಳ ಪ್ರಮಾಣೀಕರಣ

ಸಾಲ ಮರುಪಾವತಿಯಲ್ಲಿನ ಗೊಂದಲ ನಿವಾರಿಸಲು ಆರ್‌ಬಿಐ ಬೆಳೆ ಹಂಗಾಮುಗಳನ್ನು ಪ್ರಮಾಣೀಕರಿಸಲು ನಿರ್ಧರಿಸಿದೆ.

ಸಾಲದ ಅವಧಿ ಆರು ವರ್ಷಕ್ಕೆ ಏರಿಕೆ

ರೈತರಿಗೆ ಅನುಕೂಲವಾಗುವಂತೆ ಕೆಸಿಸಿ ಸಾಲದ ಅವಧಿಯನ್ನು 6 ವರ್ಷಗಳವರೆಗೆ ವಿಸ್ತರಿಸಲು ಪ್ರಸ್ತಾವಿಸಲಾಗಿದೆ. ವಿಶೇಷವಾಗಿ ದೀರ್ಘಾವಧಿ ಬೆಳೆಗಳನ್ನು ಬೆಳೆಯುವ ರೈತರಿಗೆ ಇದು ವರದಾನವಾಗಲಿದ್ದು, ಅವರ ಆದಾಯದ ಹರಿವಿಗೆ ಅನುಗುಣವಾಗಿ ಮರುಪಾವತಿ ಮಾಡಲು ಅವಕಾಶ ಸಿಗಲಿದೆ.

ನೈಜ ಕೃಷಿ ವೆಚ್ಚಕ್ಕೆ ಅನುಗುಣವಾಗಿ ಸಾಲದ ಮಿತಿ

ಇನ್ಮುಂದೆ ರೈತರಿಗೆ ಸಿಗುವ ಸಾಲದ ಮಿತಿಯು ಆಯಾ ಬೆಳೆಯ ನೈಜ ಕೃಷಿ ವೆಚ್ಚವನ್ನು ಆಧರಿಸಿರುತ್ತದೆ. ಇದರಿಂದ ರೈತರಿಗೆ ಅಗತ್ಯವಿರುವಷ್ಟು ಹಣ ಸಕಾಲದಲ್ಲಿ ಸಿಗಲಿದ್ದು, ಹಣಕಾಸಿನ ಕೊರತೆ ಎದುರಾಗುವುದಿಲ್ಲ.

ಆಧುನಿಕ ಕೃಷಿ ವೆಚ್ಚಗಳಿಗೂ ವ್ಯಾಪ್ತಿ ವಿಸ್ತರಣೆ

ಕೇವಲ ಬಿತ್ತನೆಗೆ ಮಾತ್ರವಲ್ಲದೆ, ಆಧುನಿಕ ಕೃಷಿ ಪದ್ಧತಿಗಳಿಗೂ ಕೆಸಿಸಿ ಹಣ ಬಳಸಬಹುದು.

ಸಾರ್ವಜನಿಕರ ಸಲಹೆಗೆ ಅವಕಾಶ:
ಆರ್‌ಬಿಐ ಈ ಕರಡು ನಿಯಮಗಳ ಕುರಿತು ಸಾರ್ವಜನಿಕರಿಂದ ಮತ್ತು ತಜ್ಞರಿಂದ ಪ್ರತಿಕ್ರಿಯೆಗಳನ್ನು ಆಹ್ವಾನಿಸಿದೆ. ಆಸಕ್ತರು ಮಾರ್ಚ್ 6, 2026ರೊಳಗೆ ಆರ್‌ಬಿಐ ವೆಬ್‌ಸೈಟ್ ಅಥವಾ ಇಮೇಲ್ ಮೂಲಕ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದು. ನಂತರ ಈ ನಿಯಮಗಳು ಅಧಿಕೃತವಾಗಿ ಜಾರಿಗೆ ಬರಲಿವೆ.

Exit mobile version