ಕೇಂದ್ರ ಸರ್ಕಾರದ ವಿಶೇಷ ಹಣ ದುರ್ಬಳಕೆ : ರಾಜ್ಯ ಸರ್ಕಾರದ ವಿರುದ್ಧ ವಿಜಯೇಂದ್ರ ಆರೋಪ
ಬೆಂಗಳೂರು : ಕೇಂದ್ರ ಸರ್ಕಾರದ ವಿಶೇಷ ಅನುದಾನಕ್ಕೆ ನಕಲಿ ಬಳಕೆ ಪ್ರಮಾಣಪತ್ರ ನೀಡಿ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಮುಖ್ಯ ಮಂತ್ರಿ ಉತ್ತರ ನೀಡಬೇಕಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಗಂಭೀರ ಆರೋಪ ಮಾಡಿದ್ದಾರೆ.
ರಾಜ್ಯ ಸರ್ಕಾರಕ್ಕೆ ೧೦೦೦ ದಿನ ತುಂಬಿದ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ೧೩೨೩ ಕೋಟಿ ರೂ. ಮೊತ್ತದ ಕೇಂದ್ರದ ವಿಶೇಷ ಅನುದಾನಕ್ಕೆ ನಕಲಿ ಅಥವಾ ಒತ್ತಾಯದ ಬಳಕೆ ಪ್ರಮಾಣ ಪತ್ರ ಕೊಟ್ಟು ಹಣ ದುರ್ಬಳಕೆ ಮಾಡಿಕೊಳ್ಳಲಾಗಿದೆ.
ಈಹಣ ಎಲ್ಲಿ ಹೋಯ್ತು ? ಇದು ಕೂಡಾ ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾದರಿಯ ಅವ್ಯವಹಾರ ಎಂದು ಗಂಭೀರ ಆರೋಪ ಮಾಡಿದ್ದಾರೆ. [ ] ಸಣ್ಣನೀರಾವರಿ, ಕಾವೇರಿ ಹಾಗೂ ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ಹಣಕಾಸು ಇಲಾಖೆ ಅಧಿಕಾರಿಗಳೇ ನಿರ್ದೇಶನ ನೀಡಿ ಈ ನಕಲಿ ಬಳಕೆ ಪ್ರಮಾಣ ಪತ್ರ ಪಡೆದುಕೊಂಡಿದ್ದಾರೆ. ಇದು ನಿಯಮ ಬಾಹಿರ.
ಕೇಂದ್ರ ಸರ್ಕಾರದ ವಿರುದ್ಧ ಪ್ರತಿ ದಿನ ಆರೋಪ ಮಾಡುವ ರಾಜ್ಯ ಸರ್ಕಾರ ಈಗ ಕೇಂದ್ರದ ಹಣವನ್ನು ದುರ್ಬಳಕೆ ಮಾಡಿಕೊಂಡಿದೆ. ಇದಕ್ಕೆ ಸಿಎಂ ಹಾಗೂ ಡಿಸಿಎಂ ಇಬ್ಬರೂ ಉತ್ತರ ನೀಡಬೇಕಾಗುತ್ತದೆ. ಇಲ್ಲವಾದರೆ ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಬೇಕೆಂದು ಆಗ್ರಹಿಸುತ್ತೇನೆ ಎಂದರು.
ಇದನ್ನೂ ಓದಿ: ಜಿಲ್ಲಾ ವೈದ್ಯಾಧಿಕಾರಿಯನ್ನು ಅಬಕಾರಿ ಇಲಾಖೆಗೆ ವರ್ಗಾಯಿಸಿದ ರಾಜ್ಯ ಸರ್ಕಾರ : ಶಾಸಕ ವಿ.ಸುನೀಲ್ ಕುಮಾರ್ ಗರಂ
ಗೃಹ ಲಕ್ಷ್ಮಿ ಯೋಜನೆಯ 5೦೦೦ ಕೋಟಿ ರೂ. ಹಣ ಎಲ್ಲಿ ಹೋಯ್ತು ಎಂಬುದಕ್ಕೂ ಸರ್ಕಾರ ಉತ್ತರಿಸಿಲ್ಲ. ೧೦೦೦ ದಿನದಲ್ಲಿ ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ೨೫ ವರ್ಷ ಹಿಂದಕ್ಕೆ ಕೊಂಡೊಯ್ದಿದೆ ಎಂದು ಆಪಾದಿಸಿದ್ದಾರೆ.



