ಬಾವಿಗೆ ಬಿದ್ದಿದ್ದ ಕಾಡಾನೆಯನ್ನು ಯಶಸ್ವಿಯಾಗಿ ರಕ್ಷಿಸಿದ ಘಟನೆ ಇಂದು ಬೆಳಿಗ್ಗೆ ಸುಳ್ಯ ತಾಲೂಕಿನ ಕಲ್ಚೆರ್ಪೆ ಗ್ರಾಮದಲ್ಲಿ ನಡೆದಿದೆ.. ಬಾವಿಗೆ ಬಿದ್ದಿದ್ದ ಕಾಡಾನೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಯಶಸ್ವಿಯಾಗಿ ರಕ್ಷಿಸಿದ್ದಾರೆ.
ನಿನ್ನೆ ರಾತ್ರಿ ಪ್ರಜ್ವಲ್ ಎಂಬವರ ಬಾವಿಗೆ ಕಾಡಾನೆ ಬಿದ್ದಿರುವ ಮಾಹಿತಿ ದೊರಕುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ ಕಾರ್ಯಾಚರಣೆ ಆರಂಭಿಸಿದ್ದರು. ಇಂದು ಬೆಳಿಗ್ಗೆ ಸುಮಾರು 8 ಗಂಟೆಗೆ ಜೆಸಿಬಿ ಯಂತ್ರದ ಸಹಾಯದಿಂದ ಬಾವಿಯ ಬಳಿ ಅಗೆದು ತೋಡುವ ಕಾರ್ಯ ಆರಂಭಿಸಲಾಯಿತು.
ಇದನ್ನೂ ಓದಿ : ಕರಾವಳಿಯಲ್ಲಿ ಬಿಸಿಲಧಗೆ ಮತ್ತಷ್ಟು ಹೆಚ್ಚಳ..! ಉತ್ತರ ಕರ್ನಾಟಕದಲ್ಲಿಯೂ ಶಾಖದ ಅಲೆ..!
ಸುಮಾರು ಮಧ್ಯಾಹ್ನ 12.50ರ ವೇಳೆಗೆ ಕಾಡಾನೆಯನ್ನು ಬಾವಿಯಿಂದ ಮೇಲಕ್ಕೆ ಎತ್ತಿ ರಕ್ಷಣೆ ಮಾಡಲಾಯಿತು. . ಈ ನಡುವೆ ಕಾಡಾನೆ ಬಾವಿಗೆ ಬಿದ್ದ ಸುದ್ದಿ ತಿಳಿದು ಗ್ರಾಮಸ್ಥರು ಗುಂಪು ಗುಂಪಾಗಿ ಸ್ಥಳಕ್ಕೆ ಆಗಮಿಸಿದ್ದರಿಂದ ಜನಸ್ತೋಮ ಹೆಚ್ಚಾಗಿತ್ತು. ನಂತರ ಆನೆ ಜನವಸತಿ ಪ್ರದೇಶದತ್ತ ಓಡಿದ್ದು, ಕೆಲಕಾಲ ಆತಂಕ ಮೂಡಿಸಿತು.
ರಕ್ಷಣಾ ಕಾರ್ಯಾಚರಣೆಯಲ್ಲಿ ಜೆಸಿಬಿ ಯಂತ್ರವನ್ನು ಲಕ್ಷ್ಮೀ ಪ್ರಸಾದ್ ತೊಡಿಕಾನ ಹಾಗೂ ತೇಜಸ್ ಚೆಮ್ನೂರು ನಿರ್ವಹಿಸಿದರು. ಅರಣ್ಯ ಇಲಾಖೆಯ ಸಿಸಿಎಫ್ ಕರಿಕಾಳನ್, ಡಿಎಫ್‌ಒ ಆಂಥೋನಿ ಎಸ್. ಮರಿಯಪ್ಪ, ಎಸಿಎಫ್ ಪ್ರಶಾಂತ್ ಪೈ, ಪುತ್ತೂರು ಎಸಿಎಫ್ ಸುಬ್ಬಯ್ಯ ನಾಯ್ಕ್, ರೇಂಜರ್‌ಗಳಾದ ಕಿರಣ್, ವಿಮಲ್ ಬಾಬು ಹಾಗೂ ಇತರ ಸಿಬ್ಬಂದಿಗಳು ಭಾಗವಹಿಸಿದ್ದರು. ಪೊಲೀಸ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳೂ ಸಹಕರಿಸಿದರು.
ಸ್ಥಳದಲ್ಲಿ ಜನರು ಎಚ್ಚರಿಕೆ ವಹಿಸುವಂತೆ ಅರಣ್ಯ ಇಲಾಖೆ ಮನವಿ ಮಾಡಿದ್ದು, ಕಾಡಾನೆ ಚಲನವಲನಗಳ ಮೇಲೆ ನಿಗಾ ವಹಿಸಲಾಗಿದೆ ಎಂದು ತಿಳಿಸಿದೆ.
