News Next Kannada

business

ಕೇವಲ 46 ಪೈಸೆಗೆ 1,200 ರೂ. ದಂಡ: ಹೆಚ್‌ಡಿಎಫ್‌ಸಿ ಬ್ಯಾಂಕ್ ನಡೆಗೆ ಗ್ರಾಹಕ ಆಕ್ರೋಶ!

ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಯಲ್ಲಿ ಕೇವಲ 46 ಪೈಸೆ ಕಡಿಮೆಯಾಗಿದೆ ಎಂಬ ಕಾರಣಕ್ಕೆ ಬ್ಯಾಂಕ್‌ವೊಂದು ಗ್ರಾಹಕನಿಗೆ 1,200 ರೂ.ಗೂ ಹೆಚ್ಚು ಲೇಟ್ ವಿಳಂಬ ಶುಲ್ಕ ವಿಧಿಸಿರುವ ಘಟನೆ ನಡೆದಿದೆ.

By Meghana Pranuth | ಮೇಘನಾ ಪ್ರಣೂತ್‌
Credit Card Late Fee

ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಯಲ್ಲಿ ಕೇವಲ 46 ಪೈಸೆ ಕಡಿಮೆಯಾಗಿದೆ ಎಂಬ ಕಾರಣಕ್ಕೆ ಬ್ಯಾಂಕ್‌ವೊಂದು ಗ್ರಾಹಕನಿಗೆ 1,200 ರೂಪಾಯಿಗೂ ಹೆಚ್ಚು ಲೇಟ್ ಫೀ (ವಿಳಂಬ ಶುಲ್ಕ) ವಿಧಿಸಿರುವ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಬಾಕಿ ಉಳಿಸಿಕೊಂಡ ಸಣ್ಣ ಮೊತ್ತಕ್ಕಿಂತ ಬರೋಬ್ಬರಿ 2,600 ಪಟ್ಟು ಹೆಚ್ಚು ದಂಡ ಹಾಕಿರುವ ಬ್ಯಾಂಕ್ ನಡೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಡಾ. ಸಮೀರ್ ಕಾಗಲಕರ್ ಎಂಬ ಗ್ರಾಹಕರು ತಮಗೆ ಬಂದಿದ್ದ 10,649.46 ರೂಪಾಯಿ ಕ್ರೆಡಿಟ್ ಕಾರ್ಡ್ ಬಿಲ್ ಪೈಕಿ 10,649 ರೂಪಾಯಿಗಳನ್ನು ಪಾವತಿಸಿದ್ದರು. ಅಂದರೆ ಕೇವಲ 46 ಪೈಸೆ ಮಾತ್ರ ಬಾಕಿ ಉಳಿದಿತ್ತು. ಆದರೆ ಹೆಚ್‌ಡಿಎಫ್‌ಸಿ (HDFC) ಬ್ಯಾಂಕ್ ಈ 46 ಪೈಸೆಯನ್ನು ಬಾಕಿ ಎಂದು ಪರಿಗಣಿಸಿ, ಅವರಿಗೆ 1,200 ರೂಪಾಯಿಗೂ ಹೆಚ್ಚು ಲೇಟ್ ಪೇಮೆಂಟ್ ಚಾರ್ಜ್ ಹಾಗೂ ಇತರೆ ಶುಲ್ಕಗಳನ್ನು ವಿಧಿಸಿದೆ.

ಈ ಕುರಿತು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹೆಚ್‌ಡಿಎಫ್‌ಸಿ ಬ್ಯಾಂಕ್ ಅನ್ನು ಟ್ಯಾಗ್ ಮಾಡಿ ಆಕ್ರೋಶ ಹೊರಹಾಕಿರುವ ಸಮೀರ್, "ಕೇವಲ 46 ಪೈಸೆ ಬಾಕಿಗೆ 1,200 ರೂಪಾಯಿ ದಂಡ ವಿಧಿಸಿದ್ದೀರಾ? ತಕ್ಷಣವೇ ಈ ಚಾರ್ಜ್‌ಗಳನ್ನು ವಾಪಸ್ ಪಡೆಯಿರಿ (Reverse)" ಎಂದು ಆಗ್ರಹಿಸಿದ್ದಾರೆ.

BANK

ಆರ್‌ಬಿಐ (RBI) ನಿಯಮಗಳು ಹೇಳುವುದೇನು?

  •  ಆರ್‌ಬಿಐ ನಿಯಮಗಳ ಪ್ರಕಾರ, ಯಾವುದೇ ವಹಿವಾಟಿನಲ್ಲಿ 50 ಪೈಸೆಗಿಂತ ಕಡಿಮೆ ಇದ್ದರೆ ಅದನ್ನು ನಿರ್ಲಕ್ಷಿಸಿ ಹತ್ತಿರದ ರೂಪಾಯಿಗೆ ರೌಂಡ್ ಆಫ್ ಮಾಡಬೇಕು. ಈ ನಿಯಮದಂತೆ 10,649.46 ರೂಪಾಯಿಯನ್ನು 10,649 ರೂಪಾಯಿ ಎಂದೇ ಪರಿಗಣಿಸಬೇಕಿತ್ತು.

  • ಆರ್‌ಬಿಐ ನಿರ್ದೇಶನದಂತೆ, ಬಿಲ್ ಪಾವತಿ ದಿನಾಂಕ ಮುಗಿದು 3 ದಿನಗಳಿಗಿಂತ ಹೆಚ್ಚು ಕಾಲ ಬಾಕಿ ಇದ್ದರೆ ಮಾತ್ರ ಖಾತೆಯನ್ನು 'Past Due' ಎಂದು ಪರಿಗಣಿಸಿ ಲೇಟ್ ಫೀ ವಿಧಿಸಬೇಕು. ಅಲ್ಲದೆ, ಲೇಟ್ ಪೇಮೆಂಟ್ ಚಾರ್ಜ್ ಅನ್ನು ಇಡೀ ಬಿಲ್ ಮೊತ್ತದ ಮೇಲಲ್ಲ, ಬದಲಿಗೆ ಪಾವತಿಯಾಗದೆ ಬಾಕಿ ಉಳಿದಿರುವ ಮೊತ್ತದ (Outstanding Amount) ಮೇಲೆ ಮಾತ್ರ ವಿಧಿಸಬೇಕು.

ಸಮೀರ್ ಅವರ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಅನೇಕ ನೆಟ್ಟಿಗರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಬ್ಯಾಂಕ್ ಈ ಸಮಸ್ಯೆಯನ್ನು ಬಗೆಹರಿಸದಿದ್ದರೆ ಆರ್‌ಬಿಐನ 'ಬ್ಯಾಂಕಿಂಗ್ ಒಂಬುಡ್ಸ್‌ಮನ್' (Banking Ombudsman) ದೂರು ನೀಡುವಂತೆ ಬಳಕೆದಾರರು ಸಲಹೆ ನೀಡಿದ್ದಾರೆ.

 ಈ ಪ್ರಕರಣದಲ್ಲಿ ಬ್ಯಾಂಕ್ 46 ಪೈಸೆಗೆ ಇಷ್ಟೊಂದು ದೊಡ್ಡ ಮೊತ್ತದ ದಂಡ ವಿಧಿಸಿದ್ದು ಹೇಗೆ ಹಾಗೂ ಈ ಚಾರ್ಜ್ ಅನ್ನು ವಾಪಸ್ ಪಡೆಯುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.