RBI ಹೆಸರಿನಲ್ಲಿ ನಕಲಿ ಇಮೇಲ್ ಮತ್ತು ಮೆಸೇಜ್‌ಗಳು ವೈರಲ್! ಹೊಸ ಮೋಸದ ಜಾಲ

RBI ಹೆಸರಿನಲ್ಲಿ ಲಾಟರಿ ಮತ್ತು ಹಣ ಬಹುಮಾನ ನೀಡುವುದಾಗಿ ನಕಲಿ ಇಮೇಲ್‌ಗಳು ಹರಿದಾಡುತ್ತಿವೆ. ಜನರ ಬ್ಯಾಂಕ್ ಮಾಹಿತಿ ಕಳವು ಮಾಡಲು ಸೈಬರ್ ವಂಚಕರು ಹೊಸ ತಂತ್ರ ಬಳಸುತ್ತಿದ್ದಾರೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳು ಮತ್ತು ಇಮೇಲ್ ಮೂಲಕ ಹರಡುತ್ತಿರುವ ನಕಲಿ ಸಂದೇಶಗಳ ಬಗ್ಗೆ ಜನರಿಗೆ ಮಹತ್ವದ ಎಚ್ಚರಿಕೆ ನೀಡಲಾಗಿದೆ. “ಲಾಟರಿ ಗೆದ್ದಿದ್ದೀರಿ”, “ವಿರಾಳ ಕಾರ್ಯಕ್ರಮ 2026” ಅಥವಾ “ಬಹುಮಾನ ಹಣ ಪಡೆಯಿರಿ” ಎಂಬ ರೀತಿಯ ಮೆಸೇಜ್‌ಗಳು ಇದೀಗ ಹಲವರ ಮೊಬೈಲ್ ಹಾಗೂ ಇಮೇಲ್‌ಗೆ ಬರುತ್ತಿವೆ.

RBI ಹೆಸರಿನಲ್ಲಿ ಸಂದೇಶ ಬರುತ್ತಿರುವುದರಿಂದ ಅನೇಕರು ಇದನ್ನು ನಿಜ ಎಂದು ನಂಬಿ ಮೋಸಕ್ಕೆ ಒಳಗಾಗುವ ಅಪಾಯ ಹೆಚ್ಚಾಗಿದೆ.

RBI ಏನು ಹೇಳಿದೆ?

RBI ಹಾಗೂ PIB ಫ್ಯಾಕ್ಟ್ ಚೆಕ್ ತಂಡ ಸ್ಪಷ್ಟನೆ ನೀಡಿದ್ದು, RBI ಯಾವುದೇ ಲಾಟರಿ ಯೋಜನೆ ಅಥವಾ ಬಹುಮಾನ ವಿತರಣೆ ಕಾರ್ಯಕ್ರಮ ಆರಂಭಿಸಿಲ್ಲ ಎಂದು ತಿಳಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಇಮೇಲ್‌ಗಳು ಸಂಪೂರ್ಣ ನಕಲಿ ಎಂದು ಹೇಳಿರುವ ಅಧಿಕಾರಿಗಳು, ಜನರಿಂದ ಹಣ ಅಥವಾ ಬ್ಯಾಂಕ್ ಮಾಹಿತಿ ಕಸಿದುಕೊಳ್ಳಲು ಈ ರೀತಿಯ ಮೋಸ ನಡೆಯುತ್ತಿದೆ ಎಂದು ಎಚ್ಚರಿಸಿದ್ದಾರೆ.

ಹೇಗೆ ಮೋಸ ಮಾಡುತ್ತಾರೆ?

ನಕಲಿ ಇಮೇಲ್‌ಗಳಲ್ಲಿ ಮೊದಲು ಸಣ್ಣ ಪ್ರಮಾಣದ “ಪ್ರೊಸೆಸಿಂಗ್ ಫೀ” ಅಥವಾ “ರಿಜಿಸ್ಟ್ರೇಶನ್ ಚಾರ್ಜ್” ಪಾವತಿಸಲು ಕೇಳಲಾಗುತ್ತದೆ.

ನಂತರ ದೊಡ್ಡ ಮೊತ್ತದ ಬಹುಮಾನ ಅಥವಾ ಲಾಟರಿ ಹಣ ಸಿಗುತ್ತದೆ ಎಂದು ನಂಬಿಸಲಾಗುತ್ತದೆ. ಕೆಲವರು ಈ ಮಾತು ನಂಬಿ ತಮ್ಮ ಬ್ಯಾಂಕ್ ವಿವರಗಳು ಮತ್ತು ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ.

ಯಾವ ಮಾಹಿತಿ ಕೇಳುತ್ತಾರೆ?

ಸೈಬರ್ ವಂಚಕರು ಬ್ಯಾಂಕ್ ಖಾತೆ ಸಂಖ್ಯೆ, IFSC ಕೋಡ್, ಮೊಬೈಲ್ ಸಂಖ್ಯೆ, ವಾಟ್ಸಾಪ್ ಸಂಖ್ಯೆ, ವಿಳಾಸ ಮತ್ತು ಗುರುತಿನ ದಾಖಲೆಗಳ ಪ್ರತಿಗಳನ್ನು ಕೇಳುತ್ತಿದ್ದಾರೆ.

ಇಂತಹ ಮಾಹಿತಿಯನ್ನು ಅಪರಿಚಿತ ವ್ಯಕ್ತಿ ಅಥವಾ ಅನುಮಾನಾಸ್ಪದ ವೆಬ್‌ಸೈಟ್‌ಗಳಿಗೆ ನೀಡಬಾರದು ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಲಿಂಕ್ ಕ್ಲಿಕ್ ಮಾಡಬೇಡಿ

ನಕಲಿ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಿದರೆ ಮೊಬೈಲ್ ಅಥವಾ ಬ್ಯಾಂಕ್ ಖಾತೆಯ ಮಾಹಿತಿಗೆ ಅಪಾಯ ಉಂಟಾಗಬಹುದು. ವಿಶೇಷವಾಗಿ “ತಕ್ಷಣ ಹಣ ಪಡೆಯಿರಿ”, “ನಿಮ್ಮ ಬಹುಮಾನ ಸಿದ್ಧವಾಗಿದೆ” ಎಂಬ ಸಂದೇಶಗಳ ಬಗ್ಗೆ ಹೆಚ್ಚು ಎಚ್ಚರಿಕೆಯಿಂದ ಇರಬೇಕು.

ಸರ್ಕಾರದ ಅಧಿಕೃತ ಮಾಹಿತಿ ಯಾವಾಗಲೂ .gov.in ವೆಬ್‌ಸೈಟ್ ಅಥವಾ ಅಧಿಕೃತ ಪ್ರಕಟಣೆಗಳ ಮೂಲಕ ಮಾತ್ರ ಬರುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ದೂರು ಎಲ್ಲಿಗೆ ನೀಡಬೇಕು?

ಸರ್ಕಾರ ಅಥವಾ RBI ಹೆಸರಿನಲ್ಲಿ ನಕಲಿ ಮೆಸೇಜ್ ಬಂದರೆ PIB ಫ್ಯಾಕ್ಟ್ ಚೆಕ್‌ಗೆ ದೂರು ನೀಡಬಹುದು ಎಂದು ಸೂಚಿಸಲಾಗಿದೆ.

ಅಧಿಕೃತ WhatsApp ಸಂಖ್ಯೆ 8799711259ಗೆ ಮಾಹಿತಿ ಕಳುಹಿಸಬಹುದು ಅಥವಾ factcheck@pib.gov.in ಗೆ ಇಮೇಲ್ ಮಾಡಬಹುದು ಎಂದು ತಿಳಿಸಲಾಗಿದೆ.

Exit mobile version