Kannada News Next

business

ಗಗನಕ್ಕೇರಿದ ಈರುಳ್ಳಿ ಬೆಲೆ : ರೈತರ ಮೊಗದಲ್ಲಿ ಹರ್ಷ!

ರಾಜ್ಯದ ಪ್ರಮುಖ ಈರುಳ್ಳಿ ಮಾರುಕಟ್ಟೆಯಾದ ಬೆಳಗಾವಿ ಎಪಿಎಂಸಿಯಲ್ಲಿ ಈರುಳ್ಳಿ ಬೆಲೆಯು ಕ್ವಿಂಟಾಲ್‌ಗೆ ಬರೋಬ್ಬರಿ 4,500 ರೂಪಾಯಿಗಳವರೆಗೆ ತಲುಪಿದ್ದು, ಬೆಳೆಗಾರರಲ್ಲಿ ಹೊಸ ಭರವಸೆ ಮೂಡಿಸಿದೆ.

By ರಶ್ಮಿ ಎಸ್. | Rashmi S
onion price hike karnataka

ಕಳೆದ ಎರಡು-ಮೂರು ವರ್ಷಗಳಿಂದ ಸತತ ನಷ್ಟ, ಹವಾಮಾನ ವೈಪರೀತ್ಯ ಹಾಗೂ ಮಾರುಕಟ್ಟೆಯಲ್ಲಿನ ಬೆಲೆ ಕುಸಿತದಿಂದ ಕಂಗಾಲಾಗಿದ್ದ ರಾಜ್ಯದ ಈರುಳ್ಳಿ ಬೆಳೆಗಾರರಿಗೆ ಈ ಬಾರಿ ದರ ಏರಿಕೆಯು ಕೊಂಚ ನೆಮ್ಮದಿ ತಂದಿದೆ. ಮಾರುಕಟ್ಟೆಯಲ್ಲಿ ತರಕಾರಿ ಬೆಲೆಗಳು ಸದ್ಯ ಗ್ರಾಹಕರ ಕೈ ಸುಡುತ್ತಿರುವ ಹಾದಿಯಲ್ಲಿದ್ದರೂ, ರೈತರ ಪಾಲಿಗೆ ಇದು ಲಾಭದಾಯಕವಾಗಿ ಪರಿಣಮಿಸಿದೆ. ರಾಜ್ಯದ ಪ್ರಮುಖ ಈರುಳ್ಳಿ ಮಾರುಕಟ್ಟೆಯಾದ ಬೆಳಗಾವಿ ಎಪಿಎಂಸಿಯಲ್ಲಿ ಈರುಳ್ಳಿ ಬೆಲೆಯು ಕ್ವಿಂಟಾಲ್‌ಗೆ ಬರೋಬ್ಬರಿ 4,500 ರೂಪಾಯಿಗಳವರೆಗೆ ತಲುಪಿದ್ದು, ಬೆಳೆಗಾರರಲ್ಲಿ ಹೊಸ ಭರವಸೆ ಮೂಡಿಸಿದೆ.

ಕಳೆದ ಹದಿನೈದು ದಿನಗಳ ಹಿಂದೆಯಷ್ಟೇ ಕ್ವಿಂಟಾಲ್‌ಗೆ ಕೇವಲ 2,000 ರೂ.ನಿಂದ 2,500 ರೂ. ಆಸುಪಾಸಿನಲ್ಲಿದ್ದ ದರ, ಈಗ ದಿಢೀರನೆ 3,500 ರೂ.ನಿಂದ 4,500 ರೂ.ಗೆ ಜಿಗಿದಿದೆ. ಇದರ ನೇರ ಪರಿಣಾಮವಾಗಿ ಸಗಟು ಮಾರುಕಟ್ಟೆಯಲ್ಲೇ ಪ್ರತಿ ಕೆಜಿ ಈರುಳ್ಳಿ ಬೆಲೆಯು 35 ರಿಂದ 45 ರೂಪಾಯಿಗಳ ಗಡಿ ದಾಟಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ತೀವ್ರ ಮಳೆ ಕೊರತೆಯುಂಟಾಗಿ ಇಳುವರಿ ಕುಸಿದಿರುವುದೇ ಈ ಬೆಲೆ ಏರಿಕೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಉತ್ಪಾದನೆ ಕಡಿಮೆಯಾಗಿ ಮಾರುಕಟ್ಟೆಗೆ ಪೂರೈಕೆಯಾಗುವ ಈರುಳ್ಳಿ ಪ್ರಮಾಣ ಕುಸಿದಿದ್ದರೂ, ಮಾರುಕಟ್ಟೆಯಲ್ಲಿ ಬೇಡಿಕೆ ಯಥಾಸ್ಥಿತಿಯಲ್ಲಿದೆ. ಬೆಳಗಾವಿ ಮಾರುಕಟ್ಟೆಯಿಂದ ನೆರೆಯ ಗೋವಾ ಸೇರಿದಂತೆ ಇತರೆಡೆಗೂ ಭಾರಿ ಪ್ರಮಾಣದಲ್ಲಿ ಈರುಳ್ಳಿ ರಫ್ತಾಗುತ್ತಿರುವುದು ದರ ಏರಿಕೆಗೆ ಮತ್ತಷ್ಟು ವೇಗ ನೀಡಿದೆ.

ಆದರೆ, ಈ ಖುಷಿ ರೈತರಲ್ಲಿ ಹೆಚ್ಚು ದಿನ ಉಳಿಯುವ ಲಕ್ಷಣಗಳು ಕಾಣುತ್ತಿಲ್ಲ. ಗ್ರಾಹಕರಿಗೆ ಹೊರೆಯಾಗದಂತೆ ತಡೆಯಲು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸುತ್ತಿದ್ದಂತೆ, ಕಳೆದ ಒಂದು ವಾರದಲ್ಲೇ ಕ್ವಿಂಟಾಲ್‌ಗೆ ಸುಮಾರು 500 ರೂಪಾಯಿಗಳಷ್ಟು ದರ ಇಳಿಕೆಯಾಗಿದೆ. ಮಾರುಕಟ್ಟೆಯಲ್ಲಿ ಸದ್ಯ ಈರುಳ್ಳಿ ಬೆಲೆ ತೀವ್ರ ಏರಿಳಿತದ ಹಾದಿಯಲ್ಲಿದ್ದು, ರೈತರು ಮತ್ತೊಮ್ಮೆ ನಷ್ಟದ ಭೀತಿ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಲೆ ಸ್ಥಿರತೆಗಾಗಿ ಈರುಳ್ಳಿಗೂ ಕನಿಷ್ಠ ಬೆಂಬಲ ಬೆಲೆ ಅಥವಾ ಗರಿಷ್ಠ ಮಾರಾಟ ದರ ನಿಗದಿಪಡಿಸಬೇಕು ಎಂಬ ಒತ್ತಾಯ ರಾಜ್ಯದ ರೈತ ವಲಯದಿಂದ ಕೇಳಿಬಂದಿದೆ. ಬೆಲೆ ನಿಯಂತ್ರಣ ವ್ಯವಸ್ಥೆ ಜಾರಿಗೆ ಬಂದರೆ ಮಾತ್ರ ಭವಿಷ್ಯದಲ್ಲಿ ರೈತರು ಮತ್ತು ಗ್ರಾಹಕರಿಬ್ಬರ ಹಿತರಕ್ಷಣೆ ಸಾಧ್ಯವಾಗಲಿದೆ.