News Next Kannada

business

ಮಳೆ ಕೊರತೆ: ತರಕಾರಿ ಬೆಲೆ ಗಗನಕ್ಕೆ; ಗ್ರಾಹಕರು, ವ್ಯಾಪಾರಿಗಳು ಕಂಗಾಲು

ರಾಜ್ಯದಲ್ಲಿ ಎಲ್‌ನಿನೋ ಹೊಡೆತಕ್ಕೆ ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿದೆ. ಬಾರದ ಮಳೆಯಿಂದಾಗಿ ಬೆಳೆ ನಷ್ಟ ಅನುಭವಿಸಿ ಅನ್ನದಾತರು ಕಣ್ಣೀರಿಡುತ್ತಿದ್ದರೆ,

By Meghana Pranuth | ಮೇಘನಾ ಪ್ರಣೂತ್‌
VegetablePriceHike

ಬೆಂಗಳೂರು: ರಾಜ್ಯದಲ್ಲಿ ಎಲ್‌ನಿನೋ ಹೊಡೆತಕ್ಕೆ ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿದೆ. ಬಾರದ ಮಳೆಯಿಂದಾಗಿ ಬೆಳೆ ನಷ್ಟ ಅನುಭವಿಸಿ ಅನ್ನದಾತರು ಕಣ್ಣೀರಿಡುತ್ತಿದ್ದರೆ, ಇತ್ತ ಮಾರುಕಟ್ಟೆಗೆ ತರಕಾರಿ ಆವಕ ಕಡಿಮೆಯಾಗಿ ದರ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ₹30–₹40 ಇದ್ದ ಸಾಮಾನ್ಯ ತರಕಾರಿಗಳ ಬೆಲೆ ಇದೀಗ ₹60 ರಿಂದ ₹100ರ ಗಡಿ ದಾಟಿದ್ದು, ಜನಸಾಮಾನ್ಯರ ಕೈ ಹಾಗೂ ಜೇಬು ಎರಡನ್ನೂ ಸುಡುತ್ತಿದೆ

ಬೆಂಗಳೂರಿನಲ್ಲಿ ಇಂದಿನ ತರಕಾರಿ ದರಪಟ್ಟಿ (ಪ್ರತಿ ಕೆ.ಜಿ.ಗೆ)

ಬೆಳ್ಳುಳ್ಳಿ: ₹230 – ₹250

ಶುಂಠಿ: ₹120 – ₹130

ಬೀನ್ಸ್: ₹100 – ₹110

ನುಗ್ಗೆಕಾಯಿ: ₹90 – ₹100

ಹಸಿಬಟಾಣಿ / ಹಸಿಮೆಣಸಿನಕಾಯಿ: ₹80 – ₹90

ಕ್ಯಾಪ್ಸಿಕಂ / ಹೀರೆಕಾಯಿ: ₹70 – ₹80

ಕ್ಯಾರೆಟ್ / ಬೀಟ್‌ರೂಟ್: ₹60 – ₹70

ಈರುಳ್ಳಿ: ₹50 – ₹70

ಬೆಂಡೆಕಾಯಿ / ಬದನೆಕಾಯಿ / ಎಲೆಕೋಸು: ₹50 – ₹60

ಹಾಗಲಕಾಯಿ / ಹೂಕೋಸು / ಮೂಲಂಗಿ: ₹40 – ₹50

ಟೊಮೇಟೊ: ₹25 – ₹30

ಮಾರುಕಟ್ಟೆಯಲ್ಲಿ ಗ್ರಾಹಕರ, ವ್ಯಾಪಾರಿಗಳ ಪರದಾಟ

ಬೆಲೆ ಏರಿಕೆಯ ಬಿಸಿಗೆ ಹೆದರಿರುವ ಗ್ರಾಹಕರು ಹಿಂದೆ 1 ಕೆ.ಜಿ ಖರೀದಿಸುತ್ತಿದ್ದ ಜಾಗದಲ್ಲಿ ಈಗ ಅರ್ಧ ಅಥವಾ ಕಾಲು ಕೆ.ಜಿ ಖರೀದಿಸಿ ಸಮಾಧಾನಪಟ್ಟುಕೊಳ್ಳುತ್ತಿದ್ದಾರೆ.

ಬೆಲೆ ಏರಿಕೆಯಿಂದಾಗಿ ಗ್ರಾಹಕರು ಅಂಗಡಿಗಳತ್ತ ಮುಖ ಮಾಡದ ಕಾರಣ ಚಿಲ್ಲರೆ ಮಾರುಕಟ್ಟೆಯಲ್ಲಿ ವ್ಯಾಪಾರ ಸಂಪೂರ್ಣ ಮಂಕಾಗಿದೆ ಎಂದು ವ್ಯಾಪಾರಿಗಳು ಅಳಲು ತೋಡಿಕೊಂಡಿದ್ದಾರೆ.

ಬಡಾವಣೆಗಳ ಅಂಗಡಿಗಳಿಗೆ ಹೋಲಿಸಿದರೆ ಕೆ.ಆರ್. ಮಾರ್ಕೆಟ್‌ನಲ್ಲಿ ₹30 ರಿಂದ ₹40 ರಷ್ಟು ಕಡಿಮೆ ಬೆಲೆಗೆ ತಾಜಾ ತರಕಾರಿಗಳು ದೊರೆಯುತ್ತಿರುವುದರಿಂದ ಜನ ಸಗಟು ಮಾರುಕಟ್ಟೆಗೆ ಧಾವಿಸುತ್ತಿದ್ದಾರೆ.

ಒಟ್ಟಿನಲ್ಲಿ ಮುಂಗಾರು ಕೈಕೊಟ್ಟ ಪರಿಣಾಮ ಬಹುತೇಕ ಎಲ್ಲಾ ತರಕಾರಿಗಳು ಸೆಂಚುರಿ ಬಾರಿಸುವ ಹಂತಕ್ಕೆ ತಲುಪಿದ್ದು, ಜನಸಾಮಾನ್ಯರ ಮಾಸಿಕ ಬಜೆಟ್ ಸಂಪೂರ್ಣ ಬುಡಮೇಲಾಗಿದೆ.