ಕರ್ನಾಟಕದ ಹೆಮ್ಮೆಯ ನಟ, ದಿವಂಗತ ಪುನೀತ್ ರಾಜ್ಕುಮಾರ್ ಅವರ ಕಿರಿಯ ಪುತ್ರಿ ವಂದಿತಾ ರಾಜ್ಕುಮಾರ್ ಈಗ ಉದ್ಯಮ ರಂಗಕ್ಕೆ ಅಧಿಕೃತವಾಗಿ ಕಾಲಿಟ್ಟಿದ್ದಾರೆ. ತಂದೆಯಂತೆಯೇ ಉದ್ಯಮದ ಕಡೆಗೆ ಒಲವು ಹೊಂದಿರುವ ವಂದಿತಾ, ತಮಗಿದ್ದ ಬೇಕಿಂಗ್ ಹವ್ಯಾಸವನ್ನೇ ಈಗ ಲಾಭದಾಯಕ ಬ್ಯುಸಿನೆಸ್ ಆಗಿ ಬದಲಾಯಿಸಿಕೊಂಡಿದ್ದಾರೆ. ವಿಶೇಷವೆಂದರೆ, ಈ ಹೊಸ ಉದ್ಯಮಕ್ಕೆ ಅವರು ಇಟ್ಟಿರುವ ಹೆಸರು ಈಗ ಎಲ್ಲರ ಗಮನ ಸೆಳೆಯುತ್ತಿದೆ.
ವಂದಿತಾ ಆರಂಭಿಸಿರುವ ಈ ಹೊಸ ಬೇಕಿಂಗ್ ಉದ್ಯಮದ ಹೆಸರು ‘ನುಕಾಸ್ ಕೆಫೆ’ (Nuka’s Cafe). ಅಷ್ಟಕ್ಕೂ ಈ ‘ನುಕಾ’ ಎಂಬ ಹೆಸರಿನ ಹಿಂದೆ ಒಂದು ಅಪಾರವಾದ ಅಪ್ಪ-ಮಗಳ ಪ್ರೀತಿಯ ಕಥೆಯಿದೆ. ವಂದಿತಾ ಅವರನ್ನು ತಂದೆ ಪುನೀತ್ ರಾಜ್ಕುಮಾರ್ ಅವರು ಪ್ರೀತಿಯಿಂದ ‘ನುಕಾ’ ಎಂದು ಕರೆಯುತ್ತಿದ್ದರಂತೆ. ಈಗ ಅದೇ ಹೆಸರನ್ನು ತಮ್ಮ ಕನಸಿನ ಕೆಫೆಗೆ ಇಡುವ ಮೂಲಕ ವಂದಿತಾ ತಂದೆಯ ನೆನಪನ್ನು ಅಮರವಾಗಿಸಿದ್ದಾರೆ.
ಹಿಂದೊಮ್ಮೆ ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಅವರು, “ಬೇಕಿಂಗ್ ಉದ್ಯಮ ಆರಂಭಿಸುವಂತೆ ಅಪ್ಪು ನನಗೆ ಸದಾ ಹೇಳುತ್ತಿದ್ದರು” ಎಂದು ನೆನಪಿಸಿಕೊಂಡಿದ್ದರು. ಈಗ ಅಪ್ಪು ಅವರ ಮಾತನ್ನು ಸತ್ಯವಾಗಿಸುವಂತೆ ಅವರ ಸ್ವಂತ ಪುತ್ರಿಯೇ ಬೇಕಿಂಗ್ ಕ್ಷೇತ್ರಕ್ಕೆ ಧುಮುಕಿದ್ದಾರೆ. ದೊಡ್ಡಮ್ಮ ಗೀತಾ ಶಿವರಾಜ್ ಕುಮಾರ್ ಅವರಂತೆಯೇ ವಂದಿತಾ ಅವರಿಗೂ ಬೇಕಿಂಗ್ನಲ್ಲಿ ಅಪಾರ ಆಸಕ್ತಿ ಮತ್ತು ಅದ್ಭುತ ಕೌಶಲ್ಯವಿದೆ.
‘ನುಕಾಸ್ ಕೆಫೆ’ಯಲ್ಲಿ ಏನೆಲ್ಲಾ ಸಿಗುತ್ತೆ?
ಇದು ಸಂಪೂರ್ಣವಾಗಿ ಆನ್ಲೈನ್ ಆಧಾರಿತ ಹೋಮ್-ಬೇಕಿಂಗ್ ಬ್ಯುಸಿನೆಸ್ ಆಗಿದೆ. ವಂದಿತಾ ಅವರ ಕೆಫೆಯಲ್ಲಿ ಗ್ರಾಹಕರಿಗೆ ಬಾಯಲ್ಲಿ ನೀರೂರಿಸುವ ಹಲವು ಖಾದ್ಯಗಳು ಲಭ್ಯವಿವೆ:
- ತಿರಮಿಸು (Tiramisu)
- ಬಗೆಬಗೆಯ ಕೇಕ್ಗಳು & ಕಪ್ ಕೇಕ್ಗಳು
- ರುಚಿಕರವಾದ ಬ್ರೌನಿಗಳು
- ಚೀಸ್ ಕೇಕ್
- ಬಿಸ್ಕೆಟ್ ಹಾಗೂ ಬ್ರೆಡ್ಗಳು
ಗ್ರಾಹಕರು ವಂದಿತಾ ಅವರ ವಿಶೇಷ ವೆಬ್ಸೈಟ್ ಮೂಲಕ ತಮಗೆ ಬೇಕಾದ ಆರ್ಡರ್ಗಳನ್ನು ಬುಕ್ ಮಾಡಬಹುದಾಗಿದೆ. ಈ ಎಲ್ಲಾ ಖಾದ್ಯಗಳನ್ನು ವಂದಿತಾ ಅವರೇ ಖುದ್ದಾಗಿ ಮನೆಯಲ್ಲಿ ತಯಾರಿಸುವುದರಿಂದ, ಆರ್ಡರ್ಗಳು ಹೆಚ್ಚಾದಾಗ ಡೆಲಿವರಿ ಸ್ವಲ್ಪ ತಡವಾಗಬಹುದು. ಈ ಕುರಿತು ಅವರು ತಮ್ಮ ವೆಬ್ಸೈಟ್ನಲ್ಲಿ ಗ್ರಾಹಕರಿಗೆ ಮುಂಚಿತವಾಗಿಯೇ ಮಾಹಿತಿ ನೀಡುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.
ಇತ್ತೀಚೆಗಷ್ಟೇ ವಂದಿತಾ ಅವರ ಸಹೋದರ ವಿನಯ್ ರಾಜ್ಕುಮಾರ್ ನಟನೆಯ ‘ಗ್ರಾಮಾಯಣ’ ಸಿನಿಮಾದ ಗ್ಲಿಂಪ್ಸ್ ಬಿಡುಗಡೆಯಾದಾಗ, ವಂದಿತಾ ಅಣ್ಣನಿಗಾಗಿ ವಿಶೇಷವಾಗಿ ‘ಗ್ರಾಮಾಯಣ’ ಎಂದು ಬರೆದ ಕೇಕ್ ತಯಾರಿಸಿ ಶುಭ ಹಾರೈಸಿದ್ದರು. ಆಪ್ತರು ಹಾಗೂ ಸ್ನೇಹಿತರಿಗಾಗಿ ಕೇಕ್ ಮಾಡುತ್ತಿದ್ದ ವಂದಿತಾ, ಈಗ ಅದನ್ನೇ ವೃತ್ತಿಪರ ಬ್ಯುಸಿನೆಸ್ ಆಗಿ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಅಪ್ಪನ ಹೆಸರಿನಲ್ಲಿ ಆರಂಭವಾಗಿರುವ ಈ ಹೊಸ ಪ್ರಯತ್ನಕ್ಕೆ ಕನ್ನಡಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
