ಕನ್ನಡ ಚಿತ್ರರಂಗದ ಹಿರಿಯ ನಟ, ‘ಕರುನಾಡ ಚಕ್ರವರ್ತಿ’ ಡಾ. ಶಿವರಾಜ್ಕುಮಾರ್ ಅವರ ಹುಟ್ಟುಹಬ್ಬಕ್ಕೆ ಕ್ಷಣಗಣನೆ ಶುರುವಾಗಿದೆ. ನಾಳೆ (ಜುಲೈ 12) ಶಿವಣ್ಣ 64ನೇ ವಸಂತಕ್ಕೆ ಕಾಲಿಡುತ್ತಿದ್ದು, ರಾಜ್ಯಾದ್ಯಂತ ‘ಶಿವೋತ್ಸವ’ ಆಚರಿಸಲು ಅಭಿಮಾನಿ ದೇವರುಗಳು ಸಜ್ಜಾಗಿದ್ದಾರೆ. ಈ ಬಾರಿಯ ಬರ್ತ್ಡೇ ಶಿವಣ್ಣ ಹಾಗೂ ಅವರ ಕೋಟ್ಯಂತರ ಫ್ಯಾನ್ಸ್ಗೆ ಅತ್ಯಂತ ವಿಶೇಷ ಹಾಗೂ ಭಾವುಕ ಕ್ಷಣವಾಗಲಿದೆ.
ಅನಾರೋಗ್ಯದ ಕಾರಣ ಕಳೆದ ಮೂರು ವರ್ಷಗಳಿಂದ ಶಿವರಾಜ್ಕುಮಾರ್ ಅವರಿಗೆ ತಮ್ಮ ಅಭಿಮಾನಿಗಳನ್ನು ನೇರವಾಗಿ ಭೇಟಿಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ ಈಗ ಸಂಪೂರ್ಣ ಗುಣಮುಖರಾಗಿ, ಎಂದಿನ ಎನರ್ಜಿಯೊಂದಿಗೆ ವೃತ್ತಿಜೀವನದಲ್ಲಿ ಸಕ್ರಿಯರಾಗಿರುವ ಕರುನಾಡ ದೊರೆ, ಈ ಬಾರಿ ಅಭಿಮಾನಿಗಳ ಸಮ್ಮುಖದಲ್ಲೇ ಜನ್ಮದಿನ ಆಚರಿಸಿಕೊಳ್ಳಲಿದ್ದಾರೆ.
ತಮ್ಮನ್ನು ನೋಡಲು ಕಾತರದಿಂದ ಕಾಯುತ್ತಿರುವ ಅಭಿಮಾನಿಗಳಿಗೆ ಶಿವಣ್ಣ ಅವರೇ ಖುದ್ದಾಗಿ ಪ್ರೀತಿಯ ಆಮಂತ್ರಣ ನೀಡಿದ್ದಾರೆ. ಬೆಂಗಳೂರಿನ ನಾಗವಾರದಲ್ಲಿರುವ ಅವರ ‘ಶ್ರೀಮುತ್ತು’ ನಿವಾಸದಲ್ಲಿ ಈ ಬಾರಿ ಅದ್ದೂರಿ ಬರ್ತ್ಡೇ ಸೆಲೆಬ್ರೇಷನ್ ನಡೆಯಲಿದ್ದು, ಇಂದು ಮಧ್ಯರಾತ್ರಿಯಿಂದಲೇ ಫ್ಯಾನ್ಸ್ ಜಾತ್ರೆ ಶುರುವಾಗಲಿದೆ. ಮೂರು ವರ್ಷಗಳ ಬಳಿಕ ತಮ್ಮ ಪ್ರೀತಿಯ ನಟನನ್ನು ಕಣ್ಣುಂಬಿಕೊಳ್ಳಲು ಮತ್ತು ನೇರವಾಗಿ ಶುಭ ಹಾರೈಸಲು ಕರುನಾಡಿನ ಮೂಲೆ ಮೂಲೆಗಳಿಂದ ಅಭಿಮಾನಿಗಳು ರಾಜಧಾನಿಯತ್ತ ಹೆಜ್ಜೆ ಹಾಕುತ್ತಿದ್ದಾರೆ.
ಜುಲೈ 12ರಂದು ಅಧಿಕೃತವಾಗಿ ಹುಟ್ಟುಹಬ್ಬವಾದರೂ, ಇಂದಿನಿಂದಲೇ ಸೋಶಿಯಲ್ ಮೀಡಿಯಾದಲ್ಲಿ ಶಿವಣ್ಣ ಬರ್ತ್ಡೇ ಟ್ರೆಂಡ್ ಕ್ರಿಯೇಟ್ ಮಾಡಿದೆ. ಅಭಿಮಾನಿಗಳು ನೆಚ್ಚಿನ ನಟನ ಫೋಟೋ, ವಿಡಿಯೋ ಹಾಗೂ ಸ್ಪೆಷಲ್ ಸಿಡಿಪಿಗಳನ್ನು (CDP) ಹಂಚಿಕೊಳ್ಳುವ ಮೂಲಕ ಇಂಟರ್ನೆಟ್ ತುಂಬೆಲ್ಲಾ ‘ಕರುನಾಡ ಹಬ್ಬ’ದ ವಾತಾವರಣ ನಿರ್ಮಿಸಿದ್ದಾರೆ.
ಇನ್ನು ಚಿತ್ರರಂಗದ ಗಣ್ಯರು ಹಾಗೂ ಶಿವಣ್ಣ ನಟನೆಯ ಮುಂಬರುವ ಹೊಸ ಸಿನಿಮಾಗಳ ಚಿತ್ರತಂಡಗಳು ಇಂದು ರಾತ್ರಿಯಿಂದಲೇ ಸಾಲು ಸಾಲು ಸರ್ಪ್ರೈಸ್ ಅಪ್ಡೇಟ್ಗಳನ್ನು ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿವೆ.
