ಬೆಂಗಳೂರು: ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಆದ ಬಿಗ್ ಬಾಸ್ ಕನ್ನಡ ಸೀಸನ್ ಆರಂಭಕ್ಕೂ ಮುನ್ನವೇ ಸಂಭಾವ್ಯ ಸ್ಪರ್ಧಿಗಳ ಬಗ್ಗೆ ಬಗೆಬಗೆಯ ಚರ್ಚೆಗಳು ಶುರುವಾಗಿವೆ. ಅದರಲ್ಲೂ ಇತ್ತೀಚೆಗೆ ಯೂಟ್ಯೂಬ್ ಸಂದರ್ಶನವೊಂದರಲ್ಲಿ ತಮ್ಮ ವಿಶಿಷ್ಟ ಮಾತಿನ ಚಾತುರ್ಯ ಮತ್ತು ಕಟುಸತ್ಯದ ಮಾತುಗಳಿಂದಲೇ ಗಮನ ಸೆಳೆದಿರುವ ನಟಿ ಹಾಗೂ ಸೋಶಿಯಲ್ ಮೀಡಿಯಾ ಸೆನ್ಸೆಷನ್ ಅರ್ಚನಾ ಕೊಟ್ಟಿಗೆ (Archana Kottige) ಅವರು ಈ ಬಾರಿಯ ಶೋಗೆ ಬರಬೇಕು ಎಂಬ ಒತ್ತಾಯ ವೀಕ್ಷಕರಿಂದ ಜೋರಾಗಿ ಕೇಳಿಬರುತ್ತಿದೆ.
ಇತ್ತೀಚೆಗೆ ಪ್ರಸಾರವಾದ ಯೂಟ್ಯೂಬ್ ಸಂದರ್ಶನದಲ್ಲಿ ಅರ್ಚನಾ ಕೊಟ್ಟಿಗೆ ಅವರು ಮಾತನಾಡಿದ ರೀತಿ ಹಾಗೂ ಪ್ರತಿಯೊಂದು ವಿಷಯದ ಬಗ್ಗೆ ಅವರು ಇಟ್ಟ ಸ್ಪಷ್ಟ ಅಭಿಪ್ರಾಯಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿವೆ. ಇವರ ಬೋಲ್ಡ್ ಮತ್ತು ಇಂಪ್ರೆಸಿವ್ ಮಾತುಗಾರಿಕೆಯನ್ನು ನೋಡಿದ ಅಭಿಮಾನಿಗಳು, “ಅರ್ಚನಾ ರಿಯಾಲಿಟಿ ಶೋಗೆ ಹೇಳಿ ಮಾಡಿಸಿದ ಸ್ಪರ್ಧಿ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಾಮಾನ್ಯವಾಗಿ ಪ್ರತಿವರ್ಷದಂತೆ ಈ ಬಾರಿಯೂ ಸೆಪ್ಟೆಂಬರ್ ತಿಂಗಳಲ್ಲಿ ಬಿಗ್ ಬಾಸ್ ಕನ್ನಡ ಹೊಸ ಸೀಸನ್ ಆರಂಭವಾಗುವ ಸಾಧ್ಯತೆಯಿದೆ. ಪ್ರೇಕ್ಷಕರ ಈ ಭಾರೀ ಬೇಡಿಕೆ ಮತ್ತು ಟ್ರೆಂಡಿಂಗ್ ಇಷ್ಟೆಲ್ಲಾ ಇರುವುದರಿಂದ, ವಾಹಿನಿ ಕಡೆಯಿಂದ ಅರ್ಚನಾ ಅವರಿಗೆ ಬಿಗ್ ಬಾಸ್ ಸೀಸನ್ 13ರ ಆಫರ್ ಹೋಗಲಿದೆಯೇ ಎಂಬ ಚರ್ಚೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಗರಿಗೆದರಿದೆ.
ದೊಡ್ಮನೆ ಅಂಗಳಕ್ಕೆ ಕಾಲಿಡುತ್ತಾರಾ ನಟಿ?
ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರಿಟಿಗಳ ಹೆಸರುಗಳು ಹರಿದಾಡುವುದು ಸಾಮಾನ್ಯವಾದರೂ, ವೀಕ್ಷಕರು ಈ ಮಟ್ಟಿಗೆ ಒಬ್ಬರ ಹೆಸರನ್ನು ಮುಂಚೂಣಿಗೆ ತರುತ್ತಿರುವುದು ವಿಶೇಷ. ವೀಕ್ಷಕರ ಈ ಬಿರುಸಿನ ಬೇಡಿಕೆಗೆ ತಕ್ಕಂತೆ ಅರ್ಚನಾ ಕೊಟ್ಟಿಗೆ ನಿಜಕ್ಕೂ ಬಿಗ್ ಬಾಸ್ ಅಂಗಳಕ್ಕೆ ಕಾಲಿಡುತ್ತಾರಾ ಅಥವಾ ಇಲ್ಲವಾ ಎಂಬುದನ್ನು ಕಾದು ನೋಡಬೇಕಿದೆ.
