RCB Sold : ಕನ್ನಡಿಗ ಉದ್ಯಮಿ ಪಾಲಾಗುತ್ತಾ ಆರ್‌ಸಿಬಿ ? ರಾಯಲ್‌ ಚಾಲೆಂಜರ್ಸ್ ಇನ್ಮುಂದೆ ಕನ್ನಡಿಗರ ಸೊತ್ತು

RCB Sold : ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲೇ ಅತೀ ಹೆಚ್ಚು ಬೇಡಿಕೆಯನ್ನು ಹೊಂದಿರುವ ತಂಡ. ಅತ್ಯಧಿಕ ಅಭಿಮಾನಿಗಳನ್ನು ಹೊಂದಿರುವ ಆರ್‌ಸಿಬಿ, ಇನ್ಮುಂದೆ ಕನ್ನಡಿಗರ ಸೊತ್ತಾಗಿ ಉಳಿಯುತ್ತಾ ? ಯಾಕೆಂದ್ರೆ ಕನ್ನಡಿಗರ ನೆಚ್ಚಿನ ತಂಡವಾಗಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಸೇಲ್‌ ಆಗೋದು ಪಕ್ಕಾ. ಆದರೆ ಆರ್‌ಸಿಬಿ ಖರೀದಿಗೆ ಕನ್ನಡಿಗರೇ ಮುಂದಾಗಿರೋದು, ಅಭಿಮಾನಿಗಳಿಗೆ ಖುಷಿಕೊಟ್ಟಿದೆ.

ಐಪಿಎಲ್‌ನ 18 ವರ್ಷಗಳ ಇತಿಹಾಸದಲ್ಲಿ ಆರ್‌ಸಿಬಿ ಟ್ರೋಫಿ ಗೆದ್ದಿರುವುದು ಒಂದೇ ಒಂದು ಬಾರಿ. ಆದರೆ ಸತತ ಸೋಲನ್ನೇ ಕಂಡಿದ್ದರೂ ಕೂಡ ಆರ್‌ಸಿಬಿ ಅಭಿಮಾನಿಗಳ ಸಂಖ್ಯೆ ಅತೀ ಹೆಚ್ಚಿದೆ. ‌

2008ರಲ್ಲಿ ಕನ್ನಡಿಗ ವಿಜಯ ಮಲ್ಯ ಅವರ ಮಾಲೀಕತ್ವದ ಯುನೈಟೆಡ್‌ ಸ್ಪಿರಿಟ್ಸ್‌ ಕಂಪೆನಿ ಅತೀ ಹೆಚ್ಚು ಮೊತ್ತಕ್ಕೆ ಬೆಂಗಳೂರು ತಂಡವನ್ನು ಖರೀದಿ ಮಾಡಿತ್ತು. ಅಂದು 600 ರಿಂದ 700 ಕೋಟಿ ರೂಪಾಯಿಯನ್ನು ಆರ್‌ಸಿಬಿ ತಂಡಕ್ಕೆ ಮಲ್ಯ ವಿನಿಯೋಗಿಸಿದ್ದರು.

ವಿಜಯ್‌ ಮಲ್ಯ ಅವರ ಮಾಲೀಕತ್ವದಲ್ಲಿ ರಾಹುಲ್‌ ದ್ರಾವಿಡ್‌, ಅನಿಲ್‌ ಕುಂಬ್ಳೆ, ಕ್ರಿಸ್‌ಗೇಲ್‌ , ವಿರಾಟ್‌ ಕೊಹ್ಲಿ, ಎಬಿ ಡಿವಿಲಿಯರ್ಸ್‌ ಅವರಂತಹ ಘಟಾನುಘಟಿ ಆಟಗಾರರೇ ಇದ್ದರೂ ಕೂಡ ಆರ್‌ಸಿಬಿ ತಂಡಕ್ಕೆ ಟ್ರೋಫಿ ಗೆಲ್ಲುವುದಕ್ಕೆ ಸಾಧ್ಯವಾಗಲೇ ಇಲ್ಲ.

ಬರೋಬ್ಬರಿ 18 ವರ್ಷಗಳ ಬಳಿಕ ಅಂದ್ರೆ 2025ರಲ್ಲಿ ಆರ್‌ಸಿಬಿ ತಂಡ ಚೊಚ್ಚಲ ಬಾರಿಗೆ ಐಪಿಎಲ್‌ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು. ಚೊಚ್ಚಲ ಬಾರಿಗೆ ಐಪಿಲ್‌ ಟ್ರೋಫಿ ಗೆದ್ದ ಸಂಭ್ರಮದಲ್ಲಿದ್ದ ಅಭಿಮಾನಿಗಳಿಗೆ ಸಂಭ್ರಮಾಚರಣೆಯೇ ಮುಳುವಾಗಿ ಬಿಟ್ಟಿತ್ತು.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ಸಂಭ್ರಮಾಚರಣೆಯ ವೇಳೆಯಲ್ಲಿ ಕಾಲ್ತುಳಿತ ಉಂಟಾಗಿತ್ತು. ಘಟನೆಯಲ್ಲಿ 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, 11 ಮಂದಿ ಸಾವನ್ನಪ್ಪಿದ್ದರು.

ಐಪಿಎಲ್‌ ಟ್ರೋಫಿ ಗೆದ್ದ ಸಂಭ್ರಮದಲ್ಲಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿತ್ತು. ಅಂದಿನಿಂದ ಇಂದಿನವರೆಗೂ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಯಾವುದೇ ಕ್ರಿಕೆಟ್‌ ಪಂದ್ಯಾವಳಿ ಆಯೋಜನೆಗೆ ಸರಕಾ ಅವಕಾಶವನ್ನೇ ಕೊಟ್ಟಿಲ್ಲ. 2026ರ ಐಪಿಎಲ್‌ ಟ್ರೋಫಿಯಲ್ಲಿಯೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯೋದು ಅನುಮಾನ.

ವಿರಾಟ್‌ ಕೊಹ್ಲಿ ಸೇರಿದಂತೆ ನೆಚ್ಚಿನ ಆಟಗಾರರನ್ನು ಹತ್ತಿರದಿಂದಲೇ ಕಣ್ತುಂಬಿಕೊಳ್ತಿದ್ದ ಆರ್‌ಸಿಬಿ ಅಭಿಮಾನಿಗಳಿಗೆ ಇನ್ಮುದೆ ಈ ಅವಕಾಶ ಸಿಗೋದು ಅನುಮಾನ. ಮುಂದಿನ ವರ್ಷ ಆರ್‌ಸಿಬಿ ತನ್ನ ತವರು ಮೈದಾನವನ್ನು ಬೇರೆಡೆ ಶಿಫ್ಟ್‌ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿದೆ.

RCB Sold : ಆರ್‌ಸಿಬಿ ಮಾರಾಟಕ್ಕಿಟ್ಟಿದ್ಯಾಕೆ ಡಿಯಾಜಿಯೋ

ಇದರ ಬೆನ್ನಲ್ಲೇ ಮತ್ತೊಂದು ಸುದ್ದಿ ಹೊರಬಿದ್ದಿದ್ದು, ಆರ್‌ಸಿಬಿ ಮಾಲೀಕತ್ವ ಹೊಂದಿರುವ ಡಿಯಾಜಿಯೋ ಕಂಪೆನಿ ಆರ್‌ಸಿಬಿ ತಂಡವನ್ನು ಮಾರಾಟಕ್ಕಿಟ್ಟಿದೆ. ಆರ್‌ಸಿಬಿ ಸೇಲ್‌ ಆಗೋದು ಬಹುತೇಕ ಫಿಕ್ಸ್‌ ಆಗಿದ್ದು, ಮುಂದಿನ ಐಪಿಎಲ್‌ ಋತುವಿನಲ್ಲಿ ಆರ್‌ಸಿಬಿ ಹೊಸ ಮಾಲೀಕತ್ವದೊಂದಿಗೆ ಕಣಕ್ಕೆ ಇಳಿಯಲಿದೆ.

ಐಪಿಎಲ್‌ ತಂಡಗಳ ಪೈಕಿ ಆರ್‌ಸಿಬಿ ಅತ್ಯಧಿಕ ಬ್ರ್ಯಾಂಡ್‌ ಮೌಲ್ಯವನ್ನು ಹೊಂದಿರುವ ತಂಡ ಎನಿಸಿಕೊಂಡಿದೆ. ಈ ಹಿಂದೆ ಅತ್ಯಧಿಕ ಬ್ರ್ಯಾಂಡ್‌ ಮೌಲ್ಯ ಹೊಂದಿದ್ದ ಮುಂಬೈ ಇಂಡಿಯನ್ಸ್‌ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಆರ್‌ಸಿಬಿ 2025ರಲ್ಲಿ ಹಿಂದಿಕ್ಕಿದೆ.

ಅಮೇರಿಕಾದ ಹೂಡಿಕೆಯ ಬ್ಯಾಂಕ್‌ ಎನಿಸಿರುವ ಹೌಲಿಹಾನ್ ಲೋಕಿ ಪ್ರಕಟಿಸಿರುವ 2025ರ ಐಪಿಎಲ್‌ ತಂಡಗಳ ಬ್ರ್ಯಾಂಡ್‌ ಮೌಲ್ಯವನ್ನು ನೋಡೋದಾದ್ರೆ ರಾಯಲ್‌ ಚಾಲೆಂಜರ್ಸ್‌ ತಂಡ 269 ಮಿಲಿಯನ್‌ ಡಾಲರ್‌ ಮೌಲ್ಯವನ್ನು ಹೊಂದುವ ಮೂಲಕ ಅಗ್ರಸ್ಥಾನದಲ್ಲಿದೆ.

ಇದನ್ನೂ ಓದಿ : 17000 ಕೋಟಿಗೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಸೇಲ್‌

ನೀತು ಅಂಬಾನಿ ಮಾಲೀಕತ್ವದ ಮುಂಬೈ ಇಂಡಿಯನ್ಸ್‌ ತಂಡ 245 ಮಿಲಿಯನ್‌ ಡಾಲರ್‌ ಮೌಲ್ಯವನ್ನು ಹೊಂದಿ ಎರಡನೇ ಸ್ಥಾನದಲ್ಲಿದೆ. 235 ಮಿಲಿಯನ್‌ ಡಾಲರ್‌ ಮೌಲ್ಯವನ್ನು ಹೊಂದುವ ಮೂಲಕ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಮೂರನೇ ಸ್ಥಾನ ಪಡೆದುಕೊಂಡಿದೆ. ಉಳಿದಂತೆ ಕೋಲ್ಕತಾ ನೈಟ್‌ ರೈಡರ್ಸ್‌ 4ನೇ ಸ್ಥಾನದಲ್ಲಿದೆ.

ಸನ್‌ರೈಸರ್ಸ್‌ ಹೈದ್ರಾಬಾದ್‌ 5ನೇ ಸ್ಥಾನ, ದೆಹಲಿ ಕ್ಯಾಪಿಟಲ್ಸ್‌ 6ನೇ ಸ್ಥಾನದಲ್ಲಿದ್ರೆ, ರಾಜಸ್ಥಾನ ರಾಯಲ್ಸ್‌ ತಂಡ 7ನೇ ಸ್ಥಾನದಲ್ಲಿದೆ. ಪಂಜಾಬ್‌ ಕಿಂಗ್ಸ್‌ 8, ಲಕ್ನೋ ಸೂಪರ್‌ ಜೈಂಟ್ಸ್‌ 9 ಹಾಗೂ ಗುಜರಾತ್‌ ಟೈಟಾನ್ಸ್‌ ತಂಡ 10ನೇ ಅಂದ್ರೆ ಅತೀ ಕಡಿಮೆ ಬ್ರ್ಯಾಂಡ್‌ ಮೌಲ್ಯವನ್ನು ಹೊಂದಿದೆ.

ಮೊದಲ ಬಾರಿಗೆ ಐಪಿಎಲ್‌ ಟ್ರೋಫಿ ಗೆಲುವು ಕಂಡ ಬೆನ್ನಲ್ಲೇ ಆರ್‌ಸಿಬಿ ತಂಡದ ಬ್ರ್ಯಾಂಡ್‌ ಮೌಲ್ಯ ಅತೀ ಹೆಚ್ಚು ಏರಿಕೆಯನ್ನು ಕಂಡಿದೆ.

17 ಸಾವಿರ ಕೋಟಿಗೆ ಆರ್‌ಸಿಬಿ ಸೇಲ್‌

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಪಂದ್ಯಾವಳಿಯಲ್ಲಿ ಆರ್‌ಸಿಬಿ ಒಂದು ಬಾರಿ ಟ್ರೋಫಿಯನ್ನು ಗೆದ್ದಿದ್ರೆ, ನಾಲ್ಕು ಬಾರಿ ಫೈನಲ್‌ಗೆ ಪ್ರವೇಶಿಸಿತ್ತು. 2009, 2011, 2016 ಮತ್ತು 2025ರಲ್ಲಿ ಫೈನಲ್‌ಗೆ ಪ್ರವೇಶಿಸಿದ ಸಾಧನೆಯನ್ನು ಮಾಡಿದೆ.

ಕನ್ನಡಿಗರ ನೆಚ್ಚಿನ ತಂಡ ಅಂತ ಅನಿಸಿಕೊಂಡಿರುವ ಆರ್‌ಸಿಬಿಯನ್ನು ಡಿಯಾಜಿಯೋ ಇದೀಗ ಮಾರಾಟಕ್ಕಿಟ್ಟಿದೆ. ತಂಡ ಪ್ರಶಸ್ತಿ ಗೆದ್ದಿರುವ ಕಾರಣದಿಂದಲೇ ಆರ್‌ಸಿಬಿ ದಾಖಲೆಯ ಮೊತ್ತಕ್ಕೆ ಮಾರಾಟಕ್ಕೆ ಸಜ್ಜಾಗಿದೆ. ಬರೋಬ್ಬರಿ 2 ಬಿಲಿಯನ್‌ ಡಾಲರ್‌ ಅಂದ್ರೆ 17,587 ಕೋಟಿ ರೂಪಾಯಿಗೆ ಆರ್‌ಸಿಬಿ ತಂಡವನ್ನು ಮಾರಾಟಕ್ಕಿಟ್ಟಿದೆ.

ಇಷ್ಟೊಂದು ದೊಡ್ಡ ಮೊತ್ತಕ್ಕೆ ಐಪಿಎಲ್‌ ತಂಡವೊಂದು ಮಾರಾಟ ಆಗ್ತಾ ಇರೋದು ಐಪಿಎಲ್‌ ಇತಿಹಾಸದಲ್ಲಿಯೇ ಇದೇ ಮೊದಲು. ಈ ಹಿಂದೆ ದೆಹಲಿ ಕ್ಯಾಪಿಟಲ್ಸ್‌ ತಂಡವನ್ನು GMR ಗ್ರೂಪ್‌ನಿಂದ JSW ಗ್ರೂಪ್‌ ಶೇಕಡಾ 50ರಷ್ಟು ಪಾಲನ್ನು ಖರೀದಿ ಮಾಡಿತ್ತು.

ಇದನ್ನೂ ಓದಿ : ರಾಹುಲ್‌ ದ್ರಾವಿಡ್ ಪುತ್ರ ಅನ್ವಯ್‌ ದ್ರಾವಿಡ್‌ ಭಾರತ ತಂಡಕ್ಕೆ ಆಯ್ಕೆ ‌

2018ರಲ್ಲಿ ಈ ಡೀಲ್‌ಗಾಗಿ 1,100 ಕೋಟಿಯನ್ನು JSW ಗ್ರೂಪ್‌ ವಿನಿಯೋಗಿಸಿತ್ತು. ಇನ್ನು 2012ರಲ್ಲಿ ಡೆಕ್ಕನ್‌ ಚಾರ್ಜಸ್‌ ತಂಡವನ್ನು ಸನ್‌ ಟಿವಿ ನೆಟ್‌ವರ್ಕ್ಸ್‌ ವಾರ್ಷಿಕ 85 ಕೋಟಿ ರೂಪಾಯಿ ಖರೀದಿ ಮಾಡಿತ್ತು.

2021ರಲ್ಲಿ ಹೊಸದಾಗಿ ಸೇರ್ಪಡೆ ಆದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವನ್ನು ಆರ್‌ಪಿಎಸ್‌ಜಿ ಗ್ರೂಪ್‌ನ ಸಂಜೀವ್‌ ಗೋಯೆಂಕಾ 7,090 ಕೋಟಿ ರೂಪಾಯಿಗೆ ಖರೀದಿಸಿದ್ರೆ, ಸಿವಿಸಿ ಕ್ಯಾಪಿಟಲ್ಸ್‌ ಕಂಪೆನಿ 5,625 ಕೋಟಿ ರೂಪಾಯಿ ವಿನಿಯೋಗಿಸುವ ಮೂಲಕ ಗುಜರಾತ್‌ ಟೈಟಾನ್ಸ್‌ ತಂಡವನ್ನು ಖರೀದಿಸಿತ್ತು.

ಕನ್ನಡಿಗ ಬಿಲೇನಿಯರ್‌ ಪಾಲಾಗುತ್ತಾ ಆರ್‌ಸಿಬಿ ?

ಈ ಎಲ್ಲಾ ಡೀಲ್‌ಗಳನ್ನು ನೋಡಿದ್ರೆ ಆರ್‌ಸಿಬಿ ಇದೀಗ ಅತ್ಯಧಿಕ ಮೊತ್ತಕ್ಕೆ ಸೇಲ್‌ ಆಗ್ತಿದೆ. ಆರ್‌ಸಿಬಿ ತಂಡವನ್ನು ಮಾರಾಟಕ್ಕೆ ಇಡುತ್ತಿದ್ದಂತೆಯೇ ಹಲವು ಕಂಪೆನಿಗಳು ಕನ್ನಡಿಗರ ನೆಚ್ಚಿನ ತಂಡವನ್ನು ಖರೀದಿ ಮಾಡಲು ಮುಂದಾಗಿದೆ.

ಅದ್ರಲ್ಲೂ ಇಬ್ಬರು ಕನ್ನಡಿಗರು ಸೇರಿದಂತೆ ಸುಮಾರು 5 ಕಂಪೆನಿಗಳು ಆರ್‌ಸಿಬಿ ತಂಡವನ್ನು ತೆಕ್ಕೆಗೆ ಹಾಕಿಕೊಳ್ಳಲು ಕಾಯುತ್ತಾ ಇದ್ದರೆ. ಕನ್ನಡಿಗರಾದ ಝೀರೋಧಾ ಸಹ-ಸಂಸ್ಥಾಪಕರಾದ ನಿಖಿಲ್‌ ಕಾಮತ್‌, ಎಂಇಎಂಜಿ ಅಧ್ಯಕ್ಷರಾದ ರಂಜನ್‌ ಪೈ ಆರ್‌ಸಿಬಿ ಖರೀದಿಗೆ ಮನಸ್ಸು ಮಾಡಿದ್ದಾರೆ.

ಅದ್ರಲ್ಲೂ ಆರ್‌ಸಿಬಿ ರಂಜನ್‌ ಪೈ ಅವರೇ ಖರೀದಿ ಮಾಡ್ತಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಉಳಿದಂತೆ ಸೀರಮ್‌ ಇನ್ಸ್ಟಿಟ್ಯೂಟ್‌ ಆಫ್‌ ಇಂಡಿಯಾದ ಆದರ್‌ ಪೂನಾವಾಲ, ಅದಾನಿ ಗ್ರೂಫ್‌, ಜೆಎಸ್‌ಡಬ್ಲ್ಯೂ ಗ್ರೂಪ್‌ ಕೂಡ ಆರ್‌ಸಿಬಿ ಖರೀದಿಗೆ ಪೈಪೋಟಿಗೆ ಇಳಿದಿದೆ.

ಒಂದೊಮ್ಮೆ ಕನ್ನಡಿಗರೇ ಆರ್‌ಸಿಬಿ ತಂಡವನ್ನು ಖರೀದಿ ಮಾಡಿದ್ರೆ ಕನ್ನಡಿಗರ ತಂಡವಾಗಿಯೇ ಉಳಿದುಕೊಳ್ಳಲಿದೆ. ಇಲ್ಲವಾದ್ರೆ ಹೊರ ರಾಜ್ಯದವರ ಪಾಲಾಗುವ ಸಾಧ್ಯತೆಯಿದೆ. ಕನ್ನಡಿಗರನ್ನು ಹೊರತು ಪಡಿಸಿ ಇತರರು ತಂಡವನ್ನು ಖರೀದಿಸಿದ್ರೆ ತಂಡ ಹೆಸರು ಬದಲಾಗುವ ಸಾಧ್ಯತೆಯೂ ಇದೆ.

ಈ ಹಿಂದೆ ಡೆಕ್ಕನ್‌ ಚಾರ್ಜಸ್‌ ತಂಡ ಸನ್‌ ರೈಸಸ್‌ ಹೈದ್ರಾಬಾದ್‌ ಆಗಿ ಬದಲಾಗಿತ್ತು. ಕನ್ನಡಿಗ ವಿಜಯ್‌ ಮಲ್ಯ ಆರಂಭಿಸಿದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಕನ್ನಡಿಗರೇ ಖರೀದಿಸಲಿ ಅನ್ನೋ ಅಭಿಪ್ರಾಯ ಕರ್ನಾಟಕದಲ್ಲಿ ವ್ಯಕ್ತವಾಗುತ್ತಿದೆ. ಆರ್‌ಸಿಬಿಯ ಕೋಟ್ಯಾಂತರ ಅಭಿಮಾನಿಗಳು ಮುಂದಿನ ಋತುವಿನಲ್ಲಿ ಆರ್‌ಸಿಬಿ ತಂಡವನ್ನೇ ಅಂಗಳದಲ್ಲಿ ನೋಡಲು ಕಾತರರಾಗಿದ್ದಾರೆ.

RCB Sold Buy Kannadiga Business man

Exit mobile version