ಭಾರತೀಯ ಹವಾಮಾನ ಇಲಾಖೆ (IMD) ತಮಿಳುನಾಡಿನಲ್ಲಿ ಬುಧವಾರ (ಅಕ್ಟೋಬರ್ 21) ಭಾರೀ ಮಳೆಯ ಮುನ್ಸೂಚನೆ ನೀಡಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ನಾಲ್ಕು ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ನಿರಂತರ ಮಳೆ ಹಾಗೂ ಹವಾಮಾನ ಇಲಾಖೆಯ ಎಚ್ಚರಿಕೆಯ ಹಿನ್ನೆಲೆಯಲ್ಲಿ ಚೆನ್ನೈ, ತಿರುವಳ್ಳೂರು, ಚೆಂಗಲ್ಪಟ್ಟು ಮತ್ತು ಕಾಂಚೀಪುರಂ ಜಿಲ್ಲೆಗಳಲ್ಲಿ ಬುಧವಾರ ಶಾಲೆಗಳನ್ನು ಮುಚ್ಚಲಾಗಿತ್ತು.
ಈ ಪ್ರದೇಶಗಳಲ್ಲಿ ಸತತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತಗಳು ರಜೆ ಘೋಷಿಸಿವೆ. IMD ನೀಡಿರುವ ಎಚ್ಚರಿಕೆಯ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಚೆನ್ನೈನ ಎಲ್ಲಾ ಶಾಲೆಗಳಿಗೆ ಒಂದು ದಿನದ ರಜೆ ನೀಡಲಾಗಿದೆ ಎಂದು ಚೆನ್ನೈ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಅದೇ ರೀತಿ, ತಿರುವಳ್ಳೂರು, ಚೆಂಗಲ್ಪಟ್ಟು ಮತ್ತು ಕಾಂಚೀಪುರಂ ಜಿಲ್ಲೆಗಳಲ್ಲಿಯೂ ನಿರಂತರ ಮಳೆ ಹಾಗೂ ಮುಂದಿನ ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ.
ಭಾರತೀಯ ಹವಾಮಾನ ಇಲಾಖೆ (IMD) ಮಂಗಳವಾರ ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿ ಹಳದಿ (Yellow Alert) ಮತ್ತು ಕಿತ್ತಳೆ (Orange Alert) ಎಚ್ಚರಿಕೆಗಳನ್ನು ನೀಡಿದೆ.
ಮುಂದಿನ 24 ಗಂಟೆಗಳಲ್ಲಿ ನೈರುತ್ಯ ಬಂಗಾಳ ಕೊಲ್ಲಿ ಮತ್ತು ತಮಿಳುನಾಡು ಕರಾವಳಿ ಭಾಗಕ್ಕೆ ಹೊಂದಿಕೊಂಡ ಪ್ರದೇಶದಲ್ಲಿ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಪ್ರಾದೇಶಿಕ ಹವಾಮಾನ ಇಲಾಖೆಯು ಮಂಗಳವಾರ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಸೋಮವಾರ ಉತ್ತರ ತಮಿಳುನಾಡು ಕರಾವಳಿ ಸಮೀಪದ ನೈರುತ್ಯ ಬಂಗಾಳ ಕೊಲ್ಲಿಯಲ್ಲಿ ಕಂಡುಬಂದಿದ್ದ ಚಂಡಮಾರುತದ ಪರಿಣಾಮ ಮುಂದಿನ 24 ಗಂಟೆಗಳಲ್ಲಿ ಅದೇ ಪ್ರದೇಶದಲ್ಲಿ ವಾಯುಭಾರ ಕುಸಿತವಾಗಿ ತೀವ್ರಗೊಳ್ಳುವ ಸಾಧ್ಯತೆಯಿದೆ.
IMD ಮುನ್ಸೂಚನೆಯ ಪ್ರಕಾರ, ಅಕ್ಟೋಬರ್ 26ರವರೆಗೆ ತಮಿಳುನಾಡು, ಪುದುಚೇರಿ ಮತ್ತು ಕಾರೈಕಾಲ್‌ನಲ್ಲಿ ಭಾರೀ ಅಥವಾ ಅತಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ಇದಲ್ಲದೆ, ಅಕ್ಟೋಬರ್ 22ರಿಂದ 26ರವರೆಗೆ ಲಕ್ಷದ್ವೀಪ, ಅಕ್ಟೋಬರ್ 20ರಿಂದ 26ರವರೆಗೆ ಕೇರಳ ಮತ್ತು ಮಾಹೆ, ಅಕ್ಟೋಬರ್ 21ರಿಂದ 24ರವರೆಗೆ ದಕ್ಷಿಣ ಒಳನಾಡು ಕರ್ನಾಟಕ ಹಾಗೂ ಅಕ್ಟೋಬರ್ 20 ಮತ್ತು 21ರಂದು ಕರಾವಳಿ ಆಂಧ್ರಪ್ರದೇಶ, ಯಾನಂ ಮತ್ತು ರಾಯಲಸೀಮೆಯ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು IMD ತಿಳಿಸಿದೆ.
ಭಾರತೀಯ ಹವಾಮಾನ ಇಲಾಖೆ (IMD) ತಮಿಳುನಾಡಿನ ರಾಮನಾಥಪುರಂ, ತಿರುವಾರೂರು, ತಂಜಾವೂರು, ನಾಗಪಟ್ಟಣಂ, ಮೈಲಾಡುತುರೈ, ವಿಲ್ಲುಪುರಂ, ಚೆಂಗಲ್ಪಟ್ಟು, ಚೆನ್ನೈ, ತಿರುವಳ್ಳೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಣೆ ಮಾಡಿದೆ.
ಇನ್ನು ಕನ್ಯಾಕುಮಾರಿ, ತೂತುಕುಡಿ ಮತ್ತು ದಿಂಡಿಗಲ್ ಸೇರಿದಂತೆ ಹಲವು ಜಿಲ್ಲೆಗಳಿಗೆ ಹಳದಿ ಎಚ್ಚರಿಕೆ (Yellow Alert) ನೀಡಲಾಗಿದೆ.
ಇದಲ್ಲದೆ, ರಾಣಿಪೇಟೆ, ಕಾಂಚೀಪುರಂ, ಕಲ್ಲಾಕುರಿಚಿ, ತಿರುಚಿರಾಪಳ್ಳಿ, ಅರಿಯಲೂರು, ಪೆರಂಬಲೂರು, ಪುದುಕ್ಕೊಟ್ಟೈ, ಶಿವಗಂಗೈ, ತೆನ್‌ಕಾಶಿ ಮತ್ತು ತಿರುನೆಲ್ವೇಲಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.