ಬೆಂಗಳೂರು : ದೇಶಾದ್ಯಂತ ಶಾಲಾ ಮಕ್ಕಳ ಪೌಷ್ಟಿಕಾಂಶ ಮತ್ತು ಆಹಾರದ ಆಯ್ಕೆಗಳ ಕುರಿತು ಧಾರ್ಮಿಕ ಹಾಗೂ ರಾಜಕೀಯ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಕರ್ನಾಟಕ ಸರ್ಕಾರವು ತನ್ನ ಬಿಸಿಯೂಟ ಯೋಜನೆಯ (Karnataka mid day meal ) ಮೂಲಕ ದೇಶಕ್ಕೇ ಹೊಸ ದಾರಿಯೊಂದನ್ನು ತೋರಿಸಿಕೊಟ್ಟಿದೆ.
ಪ್ರಸ್ತುತ ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಕಲಿಯುತ್ತಿರುವ ಸುಮಾರು 47 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಪೈಕಿ ಶೇಕಡಾ 65 ರಷ್ಟು ಮಕ್ಕಳು ಬಿಸಿಯೂಟದ ಜೊತೆಗೆ ಮೊಟ್ಟೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಇನ್ನುಳಿದ ಸಸ್ಯಾಹಾರಿ ಮಕ್ಕಳ ಆಹಾರದ ಹಕ್ಕನ್ನು ಗೌರವಿಸಿರುವ ಸರ್ಕಾರ, ಅವರಿಗೆ ಮೊಟ್ಟೆಯ ಬದಲಾಗಿ ಪೌಷ್ಟಿಕಾಂಶಯುಕ್ತ ಬಾಳೆಹಣ್ಣು ಅಥವಾ ಶೇಂಗಾ ಚಿಕ್ಕಿಯನ್ನು ನೀಡುವ ಮೂಲಕ ಯಾವುದೇ ಹೇರಿಕೆಯಿಲ್ಲದ ಸಮಾನ ವ್ಯವಸ್ಥೆಯನ್ನು ಕಲ್ಪಿಸಿದೆ.
ಆರಂಭದಲ್ಲಿ ಕೇವಲ ಎರಡು ದಿನಗಳಿದ್ದ ಈ ಯೋಜನೆಯನ್ನು 2024 ರಿಂದ ಆರು ದಿನಗಳಿಗೆ ವಿಸ್ತರಿಸಲಾಗಿದ್ದು, ಇದಕ್ಕೆ ಅಜೀಂ ಪ್ರೇಮ್‌ಜಿ ಫೌಂಡೇಶನ್ ದೊಡ್ಡ ಮಟ್ಟದ ಆರ್ಥಿಕ ಬೆಂಬಲ ನೀಡಿದೆ. ಮುಂಬರುವ ಮೂರು ವರ್ಷಗಳ ಅವಧಿಗೆ ಹೆಚ್ಚುವರಿ ನಾಲ್ಕು ದಿನಗಳ ಮೊಟ್ಟೆ ವಿತರಣೆಗಾಗಿ ಈ ಸಂಸ್ಥೆಯು ಬರೋಬ್ಬರಿ 1,500 ಕೋಟಿ ರೂಪಾಯಿಗಳ ಅನುದಾನವನ್ನು ಒದಗಿಸಿದೆ.
ಈ ಯೋಜನೆಯು ಕೇವಲ ಮಕ್ಕಳ ಆರೋಗ್ಯ ಸುಧಾರಣೆಗೆ ಮಾತ್ರ ಸೀಮಿತವಾಗಿರದೆ, ಶಾಲಾ ಹಾಜರಾತಿಯಲ್ಲೂ ಅಭೂತಪೂರ್ವ ಬದಲಾವಣೆ ತಂದಿದೆ. ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಮೊಟ್ಟೆ ತಿಂದ ಹೆಣ್ಣುಮಕ್ಕಳ ತೂಕದಲ್ಲಿ ಗಣನೀಯ ಏರಿಕೆ ಕಂಡುಬಂದಿರುವುದು ವೈಜ್ಞಾನಿಕವಾಗಿ ದೃಢಪಟ್ಟಿದೆ.
ಇದರ ಬೆನ್ನಲ್ಲೇ, ಶಾಲೆಗಳಲ್ಲಿ ವಾರ ಪೂರ್ತಿ ಮೊಟ್ಟೆ ನೀಡಲು ಆರಂಭಿಸಿದ ನಂತರ ಮಕ್ಕಳ ಹಾಜರಾತಿ ಪ್ರಮಾಣವು ಶೇಕಡಾ 93.5 ರಿಂದ ಶೇಕಡಾ 98.9 ರಷ್ಟು ದಾಖಲೆಯ ಮಟ್ಟಕ್ಕೆ ಜಿಗಿದಿದೆ. ಕೋವಿಡ್ ನಂತರದ ದಿನಗಳಲ್ಲಿ ಮಕ್ಕಳಲ್ಲಿ ಕಾಣಿಸಿಕೊಂಡಿದ್ದ ಅಪೌಷ್ಟಿಕತೆಯ ನಿವಾರಣೆಗೆ ಈ ಯೋಜನೆ ಒಂದು ಸಂಜೀವಿನಿಯಂತೆ ಕೆಲಸ ಮಾಡುತ್ತಿದೆ. ಸದ್ಯ ಮೊಟ್ಟೆ ಸೇವಿಸುವ ವಿದ್ಯಾರ್ಥಿಗಳ ಪ್ರಮಾಣವನ್ನು ಶೇಕಡಾ 85 ರಷ್ಟು ಹೆಚ್ಚಿಸುವ ಗುರಿಯನ್ನು ಶಿಕ್ಷಣ ಇಲಾಖೆ ಹೊಂದಿದ್ದು, ಪೋಷಕರಲ್ಲಿ ಈ ಬಗ್ಗೆ ನಿರಂತರವಾಗಿ ಜಾಗೃತಿ ಮೂಡಿಸುತ್ತಿದೆ.
Karnataka mid day meal egg scheme success story
