Big shock for Crazy Star fans: Eswari Productions halts the re-release of 'Shanthi Kranthi'.

ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಅವರ ನಿರ್ದೇಶನದಲ್ಲಿ ಮೂಡಿಬಂದಿದ್ದ ‘ಶಾಂತಿ ಕ್ರಾಂತಿ’ ಮರುಬಿಡುಗಡೆಯಾಗಲಿದೆ ಎಂಬ ಸುದ್ದಿಯಿಂದ ಸಂಭ್ರಮದಲ್ಲಿದ್ದ ಅಭಿಮಾನಿಗಳಿಗೆ ಈಗ ಭಾರಿ ನಿರಾಸೆಯಾಗಿದೆ.

By Meghana Pranuth | ಮೇಘನಾ ಪ್ರಣೂತ್‌

1 min read

WhatsAppPost
SHATHI KRATHI
SHATHI KRATHI

ಸ್ಯಾಂಡಲ್‌ವುಡ್‌ನ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಅವರ ನಿರ್ದೇಶನದಲ್ಲಿ ಮೂಡಿಬಂದಿದ್ದ ಬಿಗ್ ಬಜೆಟ್ ಚಿತ್ರ ‘ಶಾಂತಿ ಕ್ರಾಂತಿ’ ಮರುಬಿಡುಗಡೆಯಾಗಲಿದೆ ಎಂಬ ಸುದ್ದಿಯಿಂದ ಸಂಭ್ರಮದಲ್ಲಿದ್ದ ಅಭಿಮಾನಿಗಳಿಗೆ ಈಗ ಭಾರಿ ನಿರಾಸೆಯಾಗಿದೆ. ಈ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ಮತ್ತೆ ಕಣ್ಣುಂಬಿಕೊಳ್ಳಲು ಕಾಯುತ್ತಿದ್ದ ಪ್ರೇಕ್ಷಕರ ನಿರೀಕ್ಷೆಗೆ ತಾಂತ್ರಿಕ ಕಾರಣಗಳಿಂದಾಗಿ ಸದ್ಯಕ್ಕೆ ದೊಡ್ಡ ಹಿನ್ನಡೆಯುಂಟಾಗಿದೆ.

ಈಶ್ವರಿ ಪ್ರೊಡಕ್ಷನ್ಸ್ ಸಂಸ್ಥೆಯ ಮಾಲೀಕರಾದ ಬಾಲಾಜಿ ವೀರಾಸ್ವಾಮಿ ಅವರು ಈ ವಿಷಯದ ಕುರಿತು ಅಧಿಕೃತ ಮಾಹಿತಿ ಹಂಚಿಕೊಂಡಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಚಿತ್ರದ ಮರುಬಿಡುಗಡೆ ಅಸಾಧ್ಯ ಎಂದಿದ್ದಾರೆ.

ವರ್ಷಗಳ ಹಿಂದೆ ಮದರಾಸಿನ ಪ್ರಸಾದ್ ಸ್ಟುಡಿಯೋ ಲ್ಯಾಬ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಈ ಚಿತ್ರದ ಮೂಲ ನೆಗೆಟಿವ್ ಮತ್ತು ಮದರ್ ಪ್ರಿಂಟ್ ಸಂಪೂರ್ಣವಾಗಿ ನಾಶವಾಗಿ ಹೋಗಿರುವುದು ಇದಕ್ಕೆ ಮುಖ್ಯ ಕಾರಣವಾಗಿದೆ. ಪ್ರಸ್ತುತ ಇಲಾಖೆಯ ಬಳಿ ಕೇವಲ ದೂರದರ್ಶನ ವಾಹಿನಿಗಳಿಗೆ ನೀಡಲಾಗಿದ್ದ ಎಚ್‌ಡಿ ಗುಣಮಟ್ಟದ ಪ್ರತಿಯೊಂದು ತುಣುಕು ಮಾತ್ರ ಉಳಿದುಕೊಂಡಿದೆ.

ಈ ಸೀಮಿತ ದೃಶ್ಯಾವಳಿಗಳನ್ನು ಬಳಸಿಕೊಂಡು ಇಂದಿನ ಆಧುನಿಕ ತಂತ್ರಜ್ಞಾನಕ್ಕೆ ಒಗ್ಗುವಂತೆ 4K ಅಥವಾ 8K ದೃಶ್ಯ ವೈಭವಕ್ಕೆ ಚಿತ್ರವನ್ನು ಪರಿವರ್ತಿಸುವುದು ತಾಂತ್ರಿಕವಾಗಿ ಅತ್ಯಂತ ಕಷ್ಟದ ಸವಾಲಾಗಿದೆ. ಸಿನಿಮಾ ಮರುಸೃಷ್ಟಿಯಾಗಬೇಕಾದರೆ ಡಿಐ ಕಲರಿಂಗ್, ಹೊಸ ಸೌಂಡ್ ಎಫೆಕ್ಟ್ಸ್ ಹಾಗೂ ಡಾಲ್ಬಿ ಅಟ್ಮೋಸ್ ಧ್ವನಿ ವ್ಯವಸ್ಥೆಯನ್ನು ಅಳವಡಿಸಬೇಕಾಗುತ್ತದೆ.

ಇಷ್ಟೆಲ್ಲಾ ಕೆಲಸಗಳ ಜೊತೆಗೆ ಮರು ಸೆನ್ಸಾರ್ ಪ್ರಕ್ರಿಯೆಯೂ ನಡೆಯಬೇಕಿದೆ. ತಾವು ಇಂದಿನಿಂದಲೇ ಕೆಲಸವನ್ನು ಆರಂಭಿಸಿದರೂ ಸಹ, ಇಡೀ ಪ್ರಕ್ರಿಯೆ ಮುಗಿದು ಸಿನಿಮಾ ತೆರೆಗೆ ಬರಲು ಕನಿಷ್ಠ ಎಂಟರಿಂದ ಹತ್ತು ತಿಂಗಳು ಅಥವಾ ಒಂದು ವರ್ಷಕ್ಕೂ ಅಧಿಕ ಸಮಯ ಹಿಡಿಯಲಿದೆ ಎಂದು ಬಾಲಾಜಿ ಸ್ಪಷ್ಟಪಡಿಸಿದ್ದಾರೆ.

ಹೀಗಾಗಿ ಮುಂಬರುವ ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಲ್ಲೇ ಚಿತ್ರ ಬಿಡುಗಡೆಯಾಗಲಿದೆ ಎಂಬ ವದಂತಿಗಳನ್ನು ಯಾರೂ ನಂಬಬಾರದು ಎಂದು ಮನವಿ ಮಾಡಲಾಗಿದೆ. ಚಿತ್ರಮಂಡಳಿಯು ಪರ್ಯಾಯ ಮೂಲಗಳಿಂದ ಒಳ್ಳೆಯ ಪ್ರಿಂಟ್ ಪಡೆಯಲು ಪ್ರಯತ್ನಿಸುತ್ತಿದ್ದು, ಅಧಿಕೃತ ಸುದ್ದಿ ಸಿಕ್ಕ ತಕ್ಷಣ ಅಭಿಮಾನಿಗಳಿಗೆ ತಿಳಿಸುವುದಾಗಿ ಭರವಸೆ ನೀಡಿದೆ.

Topics

ಸಂಬಂಧಿತ ಸುದ್ದಿಗಳು