ತಮ್ಮ ಮಧುರ ಕಂಠದಿಂದ ಕೋಟ್ಯಂತರ ಸಂಗೀತ ಪ್ರೇಮಿಗಳ ಹೃದಯ ಗೆದ್ದಿರುವ ಪ್ರಸಿದ್ಧ ಗಾಯಕ ಸೋನು ನಿಗಮ್, ಇತ್ತೀಚೆಗೆ ಹಂಚಿಕೊಂಡ ವೀಡಿಯೊವೊಂದು ಅಭಿಮಾನಿಗಳಲ್ಲಿ ಅಚ್ಚರಿ ಮತ್ತು ಆತಂಕವನ್ನು ಒಟ್ಟಿಗೆ ಮೂಡಿಸಿದೆ .ಸ್ವತಃ ಸೋನು ನಿಗಮ್ ಅವರೇ ಆಪರೇಷನ್ ಥಿಯೇಟರ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವಾಗ ಹಾಡು ಹಾಡಿರುವ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ .
ಸೋನು ನಿಗಮ್ ಅವರು ತಮ್ಮ ಎಡಗೈ ಉಂಗುರದ ಬೆರಳಿಗೆ ಶಸ್ತ್ರಚಿಕ್ತ್ಸೆ ಮಾಡಿಸಿಕೊಳ್ಳುವ ಸಂದರ್ಭದಲ್ಲಿ ದಿವಂಗತ ಹಿರಿಯ ಗಾಯಕ ಮೊಹಮ್ಮದ್ ರಫಿ ಗಾಯನದ ‘ದುಲಾರಿ’ (1949) ಸಿನಿಮಾದ ಅತ್ಯಂತ ಜನಪ್ರಿಯ ‘ಸುಹಾನಿ ರಾತ್ ಧಲ್ ಚುಕಿ’ ಹಾಡನ್ನು ಅತ್ಯಂತ ಸುಶ್ರಾವ್ಯವಾಗಿ ಹಾಡಿ ಅಲ್ಲಿದ್ದ ವೈದ್ಯರ ತಂಡವನ್ನು ರಂಜಿಸಿದ್ದಾರೆ.
ಈ ವೀಡಿಯೊ ವೈರಲ್ ಆಗುತ್ತಿದ್ದಂತೆ, ಅವರಿಗೆ ಏನಾಯಿತು ಎಂದು ಅಭಿಮಾನಿಗಳು ಕಳವಳ ವ್ಯಕ್ತಪಡಿಸಿದ್ದರು., ಶಸ್ತ್ರಚಿಕಿತ್ಸೆ ಮಾಡುವಾಗ ಹಾಡು ಹಾಡಿದ್ದೇಕೆ ಎಂಬುದನ್ನು ಅವರೇ ವಿವರಿಸಿದ್ದಾರೆ..
"ನನಗೆ ಶಸ್ತ್ರಚಿಕಿತ್ಸೆ ಮಾಡುತ್ತಿದ್ದ ಡಾ. ನೀಲೇಶ್ ಸತ್ಭಾಯಿ ಅವರು ನನ್ನ ದೊಡ್ಡ ಅಭಿಮಾನಿ. ಹೀಗಾಗಿ ಆಪರೇಷನ್ ವೇಳೆಯಲ್ಲಿ ನನ್ನ ಹಾಡುಗಳನ್ನೇ ಹಿನ್ನೆಲೆಯಲ್ಲಿ ಪ್ಲೇ ಮಾಡುತ್ತಿದ್ದರು. ಈ ವೇಳೆ ಮೊಹಮ್ಮದ್ ರಫಿ ಅವರ ಹಾಡಿನ ಕೇವಲ 'ಮ್ಯೂಸಿಕ್ ಟ್ರ್ಯಾಕ್' (Instrumental) ಪ್ಲೇ ಆಯಿತು. ಅದನ್ನು ಕೇಳಿ ತಡೆಯಲಾಗದೆ ನಾನೇ ಸ್ವತಃ ಹಾಡಲು ಪ್ರಾರಂಭಿಸಿದೆ" ಎಂದು ಸೋನು ನಿಗಮ್ ವಿವರಿಸಿದ್ದಾರೆ.
ವೈದ್ಯರಿಗಾಗಿ ಸುಮಾರು 2-3 ಹಾಡುಗಳನ್ನು ಹಾಡಿದ ಸೋನು, ಈ ನೆನಪನ್ನು ವೀಡಿಯೊ ರೆಕಾರ್ಡ್ ಮಾಡಿಕೊಳ್ಳುವಂತೆ ತಿಳಿಸಿದ್ದರು. ನಂತರ ವೈದ್ಯರು ಕಳುಹಿಸಿದ ಆ ವೀಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಇದೇ ಬೆರಳಿನ ಸಮಸ್ಯೆಗೆ ಸುಮಾರು ನಾಲ್ಕು ತಿಂಗಳ ಹಿಂದೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರೂ ಮತ್ತೆ ಸಮಸ್ಯೆ ಮರುಕಳಿಸಿದೆ ಎಂದು ಅವರು ತಿಳಿಸಿದ್ದಾರೆ."ಇದು ಬಹುಶಃ ನನ್ನ ಮೂಳೆಗಳಲ್ಲಿರುವ ಸಂಧಿವಾತ ಸಮಸ್ಯೆಗೆ ಸಂಬಂಧಿಸಿದ್ದಿರಬಹುದು. ಪ್ರಸ್ತುತ ಚಿಕಿತ್ಸೆ ಪೂರ್ಣಗೊಂಡಿದ್ದು, ಮುಂದಿನ ಹಂತದ ಚಿಕಿತ್ಸೆಯ ಬಗ್ಗೆ ಕಾದು ನೋಡಬೇಕಿದೆ" ಎಂದು ತಮ್ಮ ಪ್ರಸ್ತುತ ಆರೋಗ್ಯದ ಸ್ಥಿತಿಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.