ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನೀಟ್ ವಿದ್ಯಾರ್ಥಿಗಳ ಪರ ಕಾಕ್ರೋಚ್ ಸಂಘಟನೆಯ ಹೋರಾಟದ ಕಾವು ದಿನದಿಂದ ದಿನಕ್ಕೆ ಮಿತಿಮೀರುತ್ತಿದ್ದು, ಇದಕ್ಕೆ ಕೈ ಜೋಡಿಸಿರುವ ಕಾಂಗ್ರೆಸ್ ಹಿರಿಯ ನಾಯಕರು ಸದ್ಯ ಈ ಪ್ರತಿಭಟನೆಯಲ್ಲಿ ಬ್ಯುಸಿ ಇದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸಂಪುಟ ವಿಸ್ತರಣೆ ಪ್ರಕ್ರಿಯೆ ವಿಳಂಬ ಗತಿಯಲ್ಲಿ ಸಾಗಿದೆ.
ರಾಜಕೀಯ ಮೂಲಗಳ ಪ್ರಕಾರ, ರಾಜ್ಯದ ಪ್ರಮುಖ ನಾಯಕರು ಭಾನುವಾರ ದೆಹಲಿಗೆ ಪ್ರಯಾಣಿಸಲಿದ್ದಾರೆ ಎನ್ನಲಾಗಿದ್ದು, ಅದೇ ಸಂಪುಟ ವಿಸ್ತರಣೆಯ ಫೈನಲ್ ಪಟ್ಟಿಗೆ ಹೈಕಮಾಂಡ್ ಅಧಿಕೃತ ಮುದ್ರೆ ಬೀಳಲಿದೆ ಎನ್ನಲಾಗಿದೆ. ಅಂತೆಯೇ ಜುಲೈ 27 ಅಥವಾ 29 ರಂದು ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ನಡೆಯುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.
ಮುಂಬರುವ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಮತ್ತೊಬ್ಬ ಉಪಮುಖ್ಯಮಂತ್ರಿ ಹುದ್ದೆಯನ್ನು ಸೃಷ್ಟಿಸುವ ಕುರಿತು ಪಕ್ಷದ ವಲಯದಲ್ಲಿ ಗಂಭೀರ ಚಿಂತನೆಗಳು ನಡೆದಿವೆ. ಲಿಂಗಾಯತ ಅಥವಾ ಪರಿಶಿಷ್ಟ ಪಂಗಡದ ಸಮುದಾಯಕ್ಕೆ ಈ ಸ್ಥಾನವನ್ನು ನೀಡುವ ಸಾಧ್ಯತೆಯಿದ್ದು, ಪ್ರಮುಖ ನಾಯಕರಾದ ಸತೀಶ್ ಜಾರಕಿಹೊಳಿ ಅವರ ಹೆಸರು ಮುಂಚೂಣಿಯಲ್ಲಿದೆ. ದಲಿತ ಮತ್ತು ಲಿಂಗಾಯತ ಸಮುದಾಯಗಳನ್ನು ಒಟ್ಟಿಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಈ ತಂತ್ರಗಾರಿಕೆ ರೂಪಿಸಲಾಗುತ್ತಿದೆ ಎನ್ನಲಾಗಿದೆ.
ಇದೇ ವೇಳೆ, ಮಾಜಿ ಸಂಸದ ಸ್ಯಾಮ್ ಪಿತ್ರೋಡಾ ಅವರು ಆರತಿ ಕೃಷ್ಣ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಹೈಕಮಾಂಡ್ ಮಟ್ಟದಲ್ಲಿ ತೀವ್ರ ಲಾಬಿ ನಡೆಸುತ್ತಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಪ್ರಸ್ತುತ ಒಕ್ಕಲಿಗ ಕೋಟಾದಲ್ಲಿ ಸಚಿವ ಸ್ಥಾನಕ್ಕಾಗಿ ಅರತಿ ಕೃಷ್ಣ ಅವರ ಹೆಸರು ಕೇಳಿಬರುತ್ತಿದ್ದು, ಇದು ಪಕ್ಷದ ಆಂತರಿಕ ವಲಯದಲ್ಲಿ ಕುತೂಹಲ ಮೂಡಿಸಿದೆ.
ಸಂಭಾವ್ಯ ಸಚಿವರ ಪಟ್ಟಿಯಲ್ಲಿ ಲಕ್ಷ್ಮಣ ಸವದಿ, ಪುಟ್ಟರಂಗಶೆಟ್ಟಿ, ಸಲೀಂ ಅಹಮ್ಮದ್, ಎಂ. ಕೃಷ್ಣಪ್ಪ, ರಾಜುಗೌಡ ಪಾಟೀಲ್ ಹಾಗೂ ತನ್ವೀರ್ ಸೇಠ್ ಸೇರಿದಂತೆ ಒಟ್ಟು 19 ಪ್ರಮುಖ ನಾಯಕರ ಹೆಸರುಗಳು ಮುಂಚೂಣಿಯಲ್ಲಿವೆ. ಶಾಸಕರಲ್ಲಿನ ಅಸಮಾಧಾನವನ್ನು ಶಮನಗೊಳಿಸಿ, ಎಲ್ಲ ಪ್ರಮುಖ ಸಮುದಾಯಗಳಿಗೆ ಸಮಾನ ಪ್ರಾತಿನಿಧ್ಯ ನೀಡುವ ಉದ್ದೇಶದಿಂದ ಈ ಕಸರತ್ತು ನಡೆಯುತ್ತಿದೆ. ಭಾನುವಾರದ ದೆಹಲಿ ಭೇಟಿಯ ನಂತರ ನೂತನ ಸಚಿವರ ಅಧಿಕೃತ ಪಟ್ಟಿ ಪ್ರಕಟವಾಗುವ ನಿರೀಕ್ಷೆಯಿದೆ.
