ನವದೆಹಲಿ : ವಿಶ್ವದಾದ್ಯಂತ ಭೀತಿ ಸೃಷ್ಟಿಸಿದ್ದ ಕೊರೊನಾ ಮಹಾಮಾರಿ ಇದೀಗ ಚೀನಾದಲ್ಲಿ ಮತ್ತೊಮ್ಮೆ ಸದ್ದು ಮಾಡುತ್ತಿದೆ. ಕಳೆದ ಜೂನ್ ತಿಂಗಳಿನಿಂದೀಚೆಗೆ ಚೀನಾದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಅಲ್ಲಿನ ಅಧಿಕೃತ ದತ್ತಾಂಶಗಳ ಪ್ರಕಾರ, ಕೇವಲ ಒಂದು ತಿಂಗಳ ಅವಧಿಯಲ್ಲಿ ಸುಮಾರು 79,000 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಈ ಪೈಕಿ 130 ರೋಗಿಗಳು ತೀವ್ರ ನಿಗಾ ಘಟಕದಲ್ಲಿದ್ದರೆ, ಕೇವಲ ಒಂದು ಸಾವು ಸಂಭವಿಸಿದೆ ಎಂದು ಚೀನಾದ ಆರೋಗ್ಯ ಇಲಾಖೆ ವರದಿ ಮಾಡಿದೆ.
ಸದ್ಯ ಚೀನಾದಲ್ಲಿ ಒಮಿಕ್ರಾನ್‌ನ ಹೊಸ ಉಪ-ರೂಪಾಂತರಿಯಾದ ‘ಎನ್‌ಬಿ.1.8.1’ ತೀವ್ರವಾಗಿ ಹರಡುತ್ತಿದೆ. ಜುಲೈ ತಿಂಗಳ ಆರಂಭದಲ್ಲಿ ಶೇಕಡಾ 12 ರಷ್ಟಿದ್ದ ಕೋವಿಡ್ ಪಾಸಿಟಿವಿಟಿ ದರವು, ಇದೀಗ ಶೇಕಡಾ 16.3 ಕ್ಕೆ ಜಿಗಿದಿದೆ. ಪ್ರಸ್ತುತ ಚೀನಾದಲ್ಲಿ ಸಾಮಾನ್ಯ ಇನ್ಫ್ಲುಯೆಂಜಾ ಜ್ವರಕ್ಕಿಂತಲೂ ಕೋವಿಡ್ ವೈರಸ್ ವೇಗವಾಗಿ ಹರಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಬೇಸಿಗೆಯ ರಜಾದಿನಗಳಲ್ಲಿ ಜನರ ಪ್ರಯಾಣ ಹೆಚ್ಚಿರುವುದು ಹಾಗೂ ಜನರು ಅತಿಯಾಗಿ AC ಕೊಠಡಿಗಳಲ್ಲಿ ಕಾಲ ಕಳೆಯುತ್ತಿರುವುದು ಈ ಸೋಂಕು ಹರಡಲು ಪ್ರಮುಖ ಕಾರಣ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ಸೋಂಕಿನ ಪ್ರಮಾಣ ಹೆಚ್ಚಾಗಿದ್ದರೂ, 2020 ರ ವುಹಾನ್ ಮಾದರಿಯ ಗಂಭೀರ ಪರಿಸ್ಥಿತಿ ಮತ್ತೆ ಬರುವ ಸಾಧ್ಯತೆಯಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಹೊಸ ರೂಪಾಂತರಿಯಿಂದ ಬಾಧಿತರಾಗುತ್ತಿರುವ ಬಹುತೇಕ ರೋಗಿಗಳಲ್ಲಿ ಜ್ವರ, ಗಂಟಲು ನೋವು ಮತ್ತು ಶೀತದಂತಹ ಸೌಮ್ಯ ರೋಗಲಕ್ಷಣಗಳು ಮಾತ್ರ ಕಾಣಿಸಿಕೊಳ್ಳುತ್ತಿದ್ದು, ಐದರಿಂದ ಏಳು ದಿನಗಳಲ್ಲಿ ಸಂಪೂರ್ಣ ಗುಣಮುಖರಾಗುತ್ತಿದ್ದಾರೆ.
ಭಾರತೀಯರಿಗೆ ಈ ಹೊಸ ರೂಪಾಂತರಿಯಿಂದ ಸದ್ಯಕ್ಕೆ ಯಾವುದೇ ಆತಂಕವಿಲ್ಲ ಎಂದು ಆರೋಗ್ಯ ತಜ್ಞರು ಭರವಸೆ ನೀಡಿದ್ದಾರೆ. ಭಾರತದಲ್ಲಿ ಯಾವುದೇ ಅಸಾಮಾನ್ಯ ಹರಡುವಿಕೆ ಕಂಡುಬಂದಿಲ್ಲ. ಆದಾಗ್ಯೂ, ಹಿರಿಯ ನಾಗರಿಕರು, ಗರ್ಭಿಣಿಯರು, ಸಣ್ಣ ಮಕ್ಕಳು ಹಾಗೂ ರೋಗನಿರೋಧಕ ಶಕ್ತಿ ಕಡಿಮೆ ಇರುವವರು ಸಾರ್ವಜನಿಕ ಸ್ಥಳಗಳಲ್ಲಿ ಅಗತ್ಯ ಮುನ್ನೆಚ್ಚರಿಕೆಗಳನ್ನು ವಹಿಸುವುದು ಒಳಿತು ಎಂದು ಸಲಹೆ ನೀಡಲಾಗಿದೆ.
