ಬೆಂಗಳೂರು, ಜುಲೈ 22: ವಿದೇಶಕ್ಕೆ ಹೋಗಿ ಲಕ್ಷ ಲಕ್ಷ ಸಂಪಾದನೆ ಮಾಡಬೇಕು, ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಬೇಕು ಎಂಬುದು ಹಲವರ ಕನಸಾಗಿರುತ್ತದೆ. ಆದರೆ, ಇದೇ ಆಸೆಯನ್ನು ಬಂಡವಾಳ ಮಾಡಿಕೊಳ್ಳುತ್ತಿರುವ ಸೈಬರ್ ವಂಚಕರ ಜಾಲವೊಂದು ಸಕ್ರಿಯವಾಗಿದೆ. “ಕೈತುಂಬಾ ಸಂಬಳ, ಉಚಿತ ವೀಸಾ, ಉಚಿತ ಊಟ-ವಸತಿ” ಎಂದು ಆಮಿಷ ಒಡ್ಡಿ ವಿದೇಶಕ್ಕೆ ಕರೆಸಿಕೊಂಡು, ಅಲ್ಲಿ ನಿರುದ್ಯೋಗಿ ಯುವಕರಿಂದಲೇ ಅಕ್ರಮವಾಗಿ ಸೈಬರ್ ಕ್ರೈಮ್ (Cyber Crime) ಮಾಡಿಸುತ್ತಿರುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.
ವಿದೇಶದಲ್ಲಿ ಹೆಚ್ಚಿನ ಸಂಬಳದ ಕೆಲಸ ಕೊಡ್ತೀವಿ ಅಂತ ಆಮಿಷ ಒಡ್ಡಿ ಮಯನ್ಮಾರ್ನ ಚೀನಿ ಸೈಬರ್ ಗ್ಯಾಂಗ್ ಕೈಗೆ ಸಿಲುಕಿಸಲಾಗಿದ್ದ ಕರ್ನಾಟಕದ ಇಬ್ಬರು ಯುವಕರನ್ನು ಯಶಸ್ವಿಯಾಗಿ ರಕ್ಷಿಸಿ ತಾಯ್ನಾಡಿಗೆ ಕರೆತರಲಾಗಿದೆ.
ಕರ್ನಾಟಕ ಸೈಬರ್ ಕಮಾಂಡ್, ಸೈಬರ್ ಕ್ರೈಮ್ ಕೋ-ಆರ್ಡಿನೇಷನ್ ಸೆಂಟರ್ (I4C), ಜಾರಿ ನಿರ್ದೇಶನಾಲಯ (ED) ಹಾಗೂ ಮಯನ್ಮಾರ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಜಂಟಿ ಕಾರ್ಯಾಚರಣೆಯ ಮೂಲಕ ಈ ಬೃಹತ್ ರಕ್ಷಣಾ ಕಾರ್ಯ ನಡೆದಿದೆ.
ಕರ್ನಾಟಕದ ಯುವಕರಿಗೆ ಥೈಲ್ಯಾಂಡ್ನಲ್ಲಿ ಡೇಟಾ ಎಂಟ್ರಿ ಮತ್ತು ಕಂಪ್ಯೂಟರ್ ಸಂಬಂಧಿತ ಕೆಲಸ ನೀಡಿ, ಅತ್ಯುತ್ತಮ ಸಂಬಳ ಕೊಡುವುದಾಗಿ ಮಾನವ ಕಳ್ಳಸಾಗಣೆದಾರರು (Human Traffickers) ನಂಬಿಸಿದ್ದರು. ಆದರೆ ಥೈಲ್ಯಾಂಡ್ಗೆ ಕರೆದೊಯ್ದ ಬಳಿಕ, ಅಕ್ರಮವಾಗಿ ಗಡಿ ದಾಟಿಸಿ ಮಯನ್ಮಾರ್ನಲ್ಲಿದ್ದ ‘ಚೀನೀ ಸೈಬರ್ ಸ್ಕ್ಯಾಮ್’ ಕೇಂದ್ರಕ್ಕೆ ತಳ್ಳಲಾಗಿತ್ತು.
ಯುವಕರ ಪಾಸ್ಪೋರ್ಟ್ ಹಾಗೂ ದಾಖಲೆಗಳನ್ನು ಕಸಿದುಕೊಂಡಿದ್ದ ಸಶಸ್ತ್ರ ಸಿಬ್ಬಂದಿ, ಜಾಗತಿಕ ಮಟ್ಟದಲ್ಲಿ ಆನ್ಲೈನ್ ಸೈಬರ್ ವಂಚನೆ (Cyber Fraud) ಹಾಗೂ ಕ್ರಿಪ್ಟೋ ಸ್ಕ್ಯಾಮ್ಗಳನ್ನು ಮಾಡುವಂತೆ ಬೆದರಿಕೆ ಹಾಕುತ್ತಿದ್ದರು. ಕೆಲಸ ಮಾಡಲು ನಿರಾಕರಿಸಿದರೆ ತೀವ್ರ ಮಾನಸಿಕ ಹಾಗೂ ಶಾರೀರಿಕ ಕಿರುಕುಳ ನೀಡಲಾಗುತ್ತಿತ್ತು.
ಸಂತ್ರಸ್ತ ಯುವಕರು ರಹಸ್ಯವಾಗಿ ತಮ್ಮ ಕುಟುಂಬಸ್ಥರನ್ನು ಸಂಪರ್ಕಿಸಿ ತಮಗಾಗುತ್ತಿದ್ದ ನರಕಯಾತನೆಯನ್ನು ತಿಳಿಸಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಭಾರತೀಯ ರಾಯಭಾರ ಕಚೇರಿ (Indian Embassy), ವಿದೇಶಾಂಗ ಸಚಿವಾಲಯ (MEA), ಇಡಿ ನೀಡಿದ ನಿಖರ ಮಾಹಿತಿಯ ಆಧಾರದ ಮೇಲೆ ಕರ್ನಾಟಕ ಸೈಬರ್ ಕಮಾಂಡ್ ಸ್ಥಳೀಯ ಅಧಿಕಾರಿಗಳ ನೆರವಿನಿಂದ ಅತ್ಯಂತ ಕಡಿಮೆ ಅವಧಿಯಲ್ಲಿ ಯುವಕರನ್ನು ಸುರಕ್ಷಿತವಾಗಿ ಮುಕ್ತಗೊಳಿಸಿದೆ.
ವಿದೇಶಗಳಲ್ಲಿ ಆಕರ್ಷಕ ಸಂಬಳ ನೀಡುವ ನಕಲಿ ಉದ್ಯೋಗ ಜಾಹೀರಾತುಗಳು ಮತ್ತು ಏಜೆಂಟರ ಬಗ್ಗೆ ಯುವಜನರು ತೀವ್ರ ಎಚ್ಚರ ವಹಿಸಬೇಕು. ಅಧಿಕೃತ ಸಂಸ್ಥೆಗಳ ಮೂಲಕ ಮಾತ್ರ ಉದ್ಯೋಗ ಪರಿಶೀಲನೆ ನಡೆಸುವಂತೆ ಕರ್ನಾಟಕ ಸೈಬರ್ ಕಮಾಂಡ್ ಡಿಜಿಪಿ ಪ್ರಣಬ್ ಮೊಹಾಂತಿ ಮನವಿ ಮಾಡಿದ್ದಾರೆ.
