ರಾಜ್ಯ ಸರ್ಕಾರದ ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ಮಾಹಿತಿ ಪರಿಶೀಲನೆ ಕಾರ್ಯ ಆರಂಭವಾಗುತ್ತಿದ್ದಂತೆ ಬಾಡಿಗೆದಾರರಲ್ಲಿ ಹಲವು ಅನುಮಾನಗಳು ಮೂಡಿದ್ದವು. ವಿಶೇಷವಾಗಿ, ಹಳೆಯ ಬಾಡಿಗೆದಾರರ ಆಧಾರ್ ವಿವರಗಳ ಕಾರಣದಿಂದ ಉಚಿತ ವಿದ್ಯುತ್ ಯೋಜನೆ ಸ್ಥಗಿತಗೊಳ್ಳಬಹುದು ಎಂಬ ವದಂತಿಗಳು ಹರಿದಾಡುತ್ತಿದ್ದವು. ಈ ಬಗ್ಗೆ ಬೆಸ್ಕಾಂ ಇದೀಗ ಸ್ಪಷ್ಟನೆ ನೀಡಿ ಗೊಂದಲಕ್ಕೆ ತೆರೆ ಎಳೆದಿದೆ.
ಬೆಸ್ಕಾಂ ನೀಡಿರುವ ಮಾಹಿತಿಯಂತೆ, ಮನೆ-ಮನೆಗೆ ಭೇಟಿ ನೀಡುವ ಮೀಟರ್ ರೀಡರ್ ಹಾಗೂ ಸಿಬ್ಬಂದಿ ಹಳೆಯ ಬಾಡಿಗೆದಾರರ ಆಧಾರ್ ಮಾಹಿತಿಯನ್ನು ತೆಗೆದುಹಾಕಿ, ಪ್ರಸ್ತುತ ವಾಸಿಸುತ್ತಿರುವ ಬಾಡಿಗೆದಾರರ ಆಧಾರ್ ವಿವರಗಳನ್ನು ಮಾತ್ರ ದಾಖಲಿಸಲಿದ್ದಾರೆ. ಇದರಿಂದ ಗೃಹ ಜ್ಯೋತಿ ಯೋಜನೆಯ ಸೌಲಭ್ಯ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದು ತಿಳಿಸಲಾಗಿದೆ.
ಪ್ರಸ್ತುತ ಬಾಡಿಗೆದಾರರು ತಮ್ಮ ಮಾಹಿತಿಯನ್ನು ಬದಲಾಯಿಸಲು ಬೆಸ್ಕಾಂ ಕಚೇರಿಗೆ ತೆರಳುವ ಅಗತ್ಯವೂ ಇಲ್ಲ. ಸಮೀಕ್ಷೆ ವೇಳೆ ಸಿಬ್ಬಂದಿಯೇ ಮನೆಗೆ ಭೇಟಿ ನೀಡಿ ಆಧಾರ್ ವಿವರಗಳ ಜೊತೆಗೆ ಬಾಡಿಗೆ ಅಥವಾ ಲೀಸ್ ಒಪ್ಪಂದದ ಮಾಹಿತಿಯನ್ನು ದಾಖಲಿಸಲಿದ್ದಾರೆ. ಅಗತ್ಯ ದಾಖಲೆಗಳನ್ನು ಒದಗಿಸಿದರೆ ಸಾಕು.
ಈ ಪರಿಶೀಲನೆ ಕೇವಲ ಫಲಾನುಭವಿಗಳ ದಾಖಲೆಗಳನ್ನು ನವೀಕರಿಸುವ ಆಡಳಿತಾತ್ಮಕ ಪ್ರಕ್ರಿಯೆಯಾಗಿದ್ದು, ಫಲಾನುಭವಿಗಳು ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಬೆಸ್ಕಾಂ ಮನವಿ ಮಾಡಿದೆ. ಮನೆ ಮಾಲೀಕರು ಸಹ ತಮ್ಮ ಬಾಡಿಗೆದಾರರಿಗೆ ಈ ಪ್ರಕ್ರಿಯೆಯಲ್ಲಿ ಸಹಕರಿಸುವಂತೆ ಸೂಚಿಸಲಾಗಿದೆ.
ಇದರ ಜೊತೆಗೆ, ಗೃಹ ಜ್ಯೋತಿ ಸಮೀಕ್ಷೆಯಲ್ಲಿ ಫಲಾನುಭವಿಗಳಿಂದ ಜಾತಿ ಅಥವಾ ಪ್ರವರ್ಗದ ಮಾಹಿತಿ ಪಡೆಯುವುದನ್ನು ಕಡ್ಡಾಯಗೊಳಿಸಿಲ್ಲ. ಸಾರ್ವಜನಿಕರಿಂದ ವ್ಯಕ್ತವಾದ ಆಕ್ಷೇಪಣೆ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದೇ ವೇಳೆ, ಯೋಜನೆಯಡಿ 7ರಲ್ಲಿ 1 ದಾಖಲೆ ಸಲ್ಲಿಕೆ ಕಡ್ಡಾಯವಲ್ಲ ಎಂಬುದನ್ನೂ ಸರ್ಕಾರ ಮತ್ತೊಮ್ಮೆ ಸ್ಪಷ್ಟಪಡಿಸಿದೆ.
ಹೆಚ್ಚಿನ ಮಾಹಿತಿ ಅಥವಾ ಯಾವುದೇ ಗೊಂದಲಗಳಿದ್ದರೆ ಗ್ರಾಹಕರು ತಮ್ಮ ಸಮೀಪದ ಬೆಸ್ಕಾಂ ಉಪವಿಭಾಗ ಕಚೇರಿಯನ್ನು ಸಂಪರ್ಕಿಸಬಹುದು. ಅಲ್ಲದೆ, ಬೆಸ್ಕಾಂ ಸಹಾಯವಾಣಿ ಮತ್ತು ವಾಟ್ಸಾಪ್ ಸಂಖ್ಯೆಗಳ ಮೂಲಕವೂ ಮಾಹಿತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಬೆಸ್ಕಾಂ ಸಹಾಯವಾಣಿ:
- 1912
- WhatsApp: 9480816111, 9480816112, 9480816113, 9480816114
ಸಹಾಯವಾಣಿ ಸೇವೆ: ಪ್ರತಿದಿನ ಬೆಳಗ್ಗೆ 6:00 ರಿಂದ ರಾತ್ರಿ 10:00 ಗಂಟೆಯವರೆಗೆ ಲಭ್ಯ.
