ಬುರುಡೆ ಗ್ಯಾಂಗ್​ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್​.. ಚಿನ್ನಯ್ಯ ರಿಟ್​ ಅರ್ಜಿಯಲ್ಲಿ ಪ್ರಕಾಶ್​ ರಾಜ್​ ಹೆಸರು ಉಲ್ಲೇಖ

ಈ ಇಡೀ ಷಡ್ಯಂತ್ರದ ಹಿಂದೆ ಅಂತಾರಾಜ್ಯ ಮಟ್ಟದ ದೊಡ್ಡ ಜಾಲವೇ ಸಕ್ರಿಯವಾಗಿದೆ ಎಂಬ ಅನುಮಾನಗಳು ತೀವ್ರಗೊಂಡ ಬೆನ್ನಲ್ಲೇ, ಪ್ರಕರಣದ ಪ್ರಮುಖ ಆರೋಪಿಯಾದ ಬುರುಡೆ ಚಿನ್ನಯ್ಯ ಹೈಕೋರ್ಟ್‌ ಮೆಟ್ಟಿಲೇರಿದ್ದಾನೆ.

ಪವಿತ್ರ ಕ್ಷೇತ್ರ ಧರ್ಮಸ್ಥಳದ ಹೆಸರಿಗೆ ಕಳಂಕ ತರಲು ನಡೆದಿದೆ ಎನ್ನಲಾದ ‘ಬುರುಡೆ’ ಪ್ರಕರಣದಲ್ಲಿ ದಿನಕ್ಕೊಂದು ಸ್ಫೋಟಕ ತಿರುವುಗಳು ಸಿಗುತ್ತಿವೆ. ಈ ಇಡೀ ಷಡ್ಯಂತ್ರದ ಹಿಂದೆ ಅಂತಾರಾಜ್ಯ ಮಟ್ಟದ ದೊಡ್ಡ ಜಾಲವೇ ಸಕ್ರಿಯವಾಗಿದೆ ಎಂಬ ಅನುಮಾನಗಳು ತೀವ್ರಗೊಂಡ ಬೆನ್ನಲ್ಲೇ, ಪ್ರಕರಣದ ಪ್ರಮುಖ ಆರೋಪಿಯಾದ ಬುರುಡೆ ಚಿನ್ನಯ್ಯ ಹೈಕೋರ್ಟ್‌ ಮೆಟ್ಟಿಲೇರಿದ್ದಾನೆ. ಆತ ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ಹೆಸರನ್ನು ನೇರವಾಗಿ ಉಲ್ಲೇಖಿಸಿದ್ದು, ಇಡೀ ಪ್ರಕರಣಕ್ಕೆ ಈಗ ಹೊಸದೊಂದು ಆಯಾಮ ಸಿಕ್ಕಂತಾಗಿದೆ.

ಕ್ಷೇತ್ರದ ತೇಜೋವಧೆ ಮಾಡಲು ಬರೋಬ್ಬರಿ 200 ಕೋಟಿ ರೂಪಾಯಿಗಳ ಬಜೆಟ್ ಇಟ್ಟುಕೊಂಡು ದೊಡ್ಡ ಆರ್ಥಿಕ ವಹಿವಾಟು ನಡೆಸಲಾಗಿದೆ ಎಂದು ಚಿನ್ನಯ್ಯ ತನ್ನ ಅರ್ಜಿಯಲ್ಲಿ ಅತ್ಯಂತ ಗಂಭೀರವಾದ ಆರೋಪ ಮಾಡಿದ್ದಾನೆ. ಈ ಯೋಜಿತ ಸಂಚು ಯಶಸ್ವಿಯಾದರೆ ತನಗೆ 50 ಲಕ್ಷ ರೂಪಾಯಿ ಕೊಡುವ ಆಮಿಷವನ್ನು ಒಡ್ಡಲಾಗಿತ್ತು ಎಂದು ಆತ ಕೋರ್ಟ್‌ಗೆ ತಿಳಿಸಿದ್ದಾನೆ.

ಇದನ್ನೂ ಓದಿ : Thalapathy Vijay Kollur Visit: ತಮಿಳುನಾಡು ಸಿಎಂ ವಿಜಯ್ ಕೊಲ್ಲೂರು ಭೇಟಿಯ ಅಸಲಿ ರಹಸ್ಯ ಬಯಲು; ಮೂಕಾಂಬಿಕೆ ಸನ್ನಿಧಿಯಲ್ಲೇ ಯಾಕೆ ವಿಶೇಷ ಪೂಜೆ?

ಚಿನ್ನಯ್ಯನ ಅರ್ಜಿ ಪ್ರಕಾರ, ಒಂದು ದಿನ ರಾತ್ರಿ ಬುರುಡೆ ಗ್ಯಾಂಗ್​ ಮಾಸ್ಟರ್​ಮೈಂಡ್​ ಗಿರೀಶ್ ಮಟ್ಟಣ್ಣವರ್, ನಟ ಪ್ರಕಾಶ್ ರಾಜ್ ಅವರಿಗೆ ಕರೆ ಮಾಡಿ ತನಗೆ ಫೋನ್ ನೀಡಿದ್ದನು. ಆ ವೇಳೆ ತಮಿಳಿನಲ್ಲಿ ಮಾತನಾಡಿದ ಪ್ರಕಾಶ್ ರಾಜ್, ತನಿಖಾ ಅಧಿಕಾರಿಗಳ ಮುಂದೆ ಗಿರೀಶ್ ಮಟ್ಟಣ್ಣವರ್ ಸೂಚಿಸಿದಂತೆಯೇ ಹೇಳಿಕೆ ನೀಡುವಂತೆ ತನಗೆ ಒತ್ತಡ ಹೇರಿದ್ದರು. ಅವರು ಹೇಳಿದಂತೆ ಕೇಳಿದರೆ ಜೂನ್ 29 ರಂದು ಖುದ್ದಾಗಿ ಬಂದು ಅಪ್ಪಿಕೊಳ್ಳುವುದಾಗಿ ನಟ ಭರವಸೆ ನೀಡಿದ್ದರು ಎಂದು ಚಿನ್ನಯ್ಯ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾನೆ.

ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ವಿಠಲಗೌಡ ಹಾಗೂ ಜಯಂತ್ ಅವರೇ ಈ ಇಡೀ ಸಂಚಿನ ಮುಖ್ಯ ರೂವಾರಿಗಳು ಎಂದು ಆತ ಹೆಸರಿಸಿದ್ದಾನೆ. ಇಷ್ಟೆಲ್ಲಾ ಸತ್ಯ ಸಂಗತಿಗಳನ್ನು ಮತ್ತು ನಿಜವಾದ ಆರೋಪಿಗಳ ಹೆಸರನ್ನು ಬಹಿರಂಗಪಡಿಸಿದರೂ ವಿಶೇಷ ತನಿಖಾ ತಂಡ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಚಿನ್ನಯ್ಯ ಹೈಕೋರ್ಟ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾನೆ. ಪ್ರಕರಣದ ಗಾಂಭೀರ್ಯತೆಯನ್ನು ಗಮನಿಸಿರುವ ಹೈಕೋರ್ಟ್, ಇದರ ಮುಂದಿನ ವಿಚಾರಣೆಯನ್ನು ಜೂನ್ 29ಕ್ಕೆ ಮುಂದೂಡಿದೆ.

Exit mobile version