ಮಂತ್ರಾಲಯಕ್ಕೆ ತೆರಳುತ್ತಿದ್ದವರ ಕಾರು ಭೀಕರ ಅಪಘಾತ; ನಾಲ್ವರು ದುರ್ಮರಣ

ಕೊಪ್ಪಳ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂತ್ರಾಲಯಕ್ಕೆ ತೆರಳುತ್ತಿದ್ದ ಕುಟುಂಬದ ಓಮ್ನಿ ವಾಹನಕ್ಕೆ ಭಾರೀ ವಾಹನ ಡಿಕ್ಕಿ ಹೊಡೆದು ನಾಲ್ವರು ಮೃತಪಟ್ಟಿದ್ದಾರೆ. ಮಕ್ಕಳೂ ಸೇರಿ ಹಲವರು ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.

ಕೊಪ್ಪಳ: ಮಂತ್ರಾಲಯಕ್ಕೆ ತೀರ್ಥಯಾತ್ರೆಗೆ ತೆರಳುತ್ತಿದ್ದ ಕುಟುಂಬದ ಪ್ರಯಾಣ ದುರಂತದಲ್ಲಿ ಅಂತ್ಯಗೊಂಡಿದೆ. ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು, ಮಕ್ಕಳೂ ಸೇರಿ ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಇಬ್ಬರ ಸ್ಥಿತಿ ಆತಂಕಕಾರಿ ಎಂದು ತಿಳಿದುಬಂದಿದೆ.

ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಭಾನಾಪೂರ ಸಮೀಪ ಈ ಅಪಘಾತ ನಡೆದಿದೆ. ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಕಬ್ಬಾರ್ ಗ್ರಾಮದವರು ಓಮ್ನಿ ವಾಹನದಲ್ಲಿ ಮಂತ್ರಾಲಯದತ್ತ ತೆರಳುತ್ತಿದ್ದ ವೇಳೆ, ಎದುರು ದಿಕ್ಕಿನಿಂದ ಬಂದ ಭಾರೀ ವಾಹನ ಡಿವೈಡರ್ ದಾಟಿ ನೇರವಾಗಿ ಡಿಕ್ಕಿ ಹೊಡೆದಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಡಿಕ್ಕಿಯ ತೀವ್ರತೆಗೆ ಓಮ್ನಿ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಪ್ರಯಾಣಿಸುತ್ತಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಕೆಂಚಮ್ಮ ಬಾಳೆಕಾಯಿ (35), ಅಮೃತಾ ಕೋಟ್ಯಾಳ್ (25), ರಮೇಶ್ ಬಳ್ಳಾರಿ (45) ಹಾಗೂ ಪ್ರವೀಣ್ (23) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಹಾವೇರಿ ಜಿಲ್ಲೆಯ ಕಬ್ಬಾರ್ ಗ್ರಾಮದ ನಿವಾಸಿಗಳಾಗಿದ್ದಾರೆ.

ಅಪಘಾತದಲ್ಲಿ ನಾಲ್ಕು ಮಕ್ಕಳು ಸೇರಿದಂತೆ ಆರು ಮಂದಿ ಗಾಯಗೊಂಡಿದ್ದಾರೆ. ಅವರನ್ನು ತಕ್ಷಣವೇ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರ ಮಾಹಿತಿ ಪ್ರಕಾರ, ಗಾಯಾಳುಗಳಲ್ಲಿ ಇಬ್ಬರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.

ಘಟನೆ ನಡೆದ ಮಾಹಿತಿ ತಿಳಿಯುತ್ತಿದ್ದಂತೆ ಕುಕನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ನಿಖರ ಕಾರಣ ಏನು ಎಂಬುದರ ಕುರಿತು ತನಿಖೆ ಮುಂದುವರಿದಿದ್ದು, ಭಾರೀ ವಾಹನದ ಚಾಲಕನ ನಿರ್ಲಕ್ಷ್ಯ, ವೇಗ ಅಥವಾ ನಿಯಂತ್ರಣ ಕಳೆದುಕೊಂಡಿರುವ ಅಂಶಗಳನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಈ ದುರಂತದ ಸುದ್ದಿ ಕಬ್ಬಾರ್ ಗ್ರಾಮದಲ್ಲಿ ಶೋಕದ ವಾತಾವರಣ ಸೃಷ್ಟಿಸಿದೆ. ಧಾರ್ಮಿಕ ಯಾತ್ರೆಗೆ ಹೊರಟಿದ್ದ ಒಂದೇ ಗ್ರಾಮದ ನಾಲ್ವರು ಪ್ರಾಣ ಕಳೆದುಕೊಂಡಿರುವುದು ಕುಟುಂಬಸ್ಥರು ಮತ್ತು ಗ್ರಾಮಸ್ಥರನ್ನು ಕಂಬನಿ ಮಿಡಿಯುವಂತೆ ಮಾಡಿದೆ.

Exit mobile version