S Janaki : ಗಾನಕೋಗಿಲೆ ಎಸ್.‌ ಜಾನಕಿ ವಿಧಿವಶ

ಎಸ್. ಜಾನಕಿ ಅವರಿಗೆ ಕನ್ನಡಿಗರ ಮತ್ತು ಕನ್ನಡ ಚಿತ್ರರಂಗದ ಮೇಲೆ ವಿಶೇಷ ಪ್ರೀತಿ. ಕನ್ನಡ ಭಾಷೆಯನ್ನು ಅತ್ಯಂತ ಸ್ಪಷ್ಟವಾಗಿ ಉಚ್ಚರಿಸುತ್ತಾ ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಕನ್ನಡಿಗರ ಮನಸ್ಸಿನಲ್ಲಿ ಹಸಿರಾಗಿವೆ.

ಬೆಂಗಳೂರು : ಕನ್ನಡ ಗಾನಕೋಗಿಲೆ ಎಂದೇ ಖ್ಯಾತಿ ಪಡೆದಿರುವ ಎಸ್.‌ ಜಾನಕಿ ( S Janaki)  ಅವರು ವಿಧಿವಶರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿದ್ದು, ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಆದರೆ ಇಂದು ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಎಂಬ ಹಳ್ಳಿಯಲ್ಲಿ 1938 ರ ಏಪ್ರಿಲ್ 23 ರಂದು ಸಿಸ್ತ್ಲಾ ಜಾನಕಿ ಜನಿಸಿದರು. ಬಾಲ್ಯದಿಂದಲೇ ಸಂಗೀತದ ಕಡೆಗೆ ಹೆಚ್ಚಿನ ಒಲವು ಹೊಂದಿದ್ದ ಎಸ್‌. ಜಾನಕಿ ಅವರು ಜಾನಿನಾಥನ್‌ ಎಂಬ ಗುರುಗಳ ಬಳಿಯಲ್ಲಿ ಶಾಸ್ತ್ರೀಯ ಸಂಗೀತದ ಆರಂಭಿಕ ಪಾಠಗಳನ್ನು ಕಲಿತವರು. ನಂತರ ಆಕಾಶವಾಣಿ ನಡೆಸಿದ್ದ ಸ್ಪರ್ಧೆಯೊಂದರ ಗೆಲುವು ಅವರ ಬದುಕಿಗೆ ದೊಡ್ಡ ತಿರುವು ನೀಡಿತ್ತು. ಚೆನ್ನೈನ ಪ್ರಖ್ಯಾತ ಎವಿಎಂ ಸ್ಟುಡಿಯೋಸ್‌ನಲ್ಲಿ ಗಾಯಕಿಯಾಗಿ ವೃತ್ತಿ ಜೀವನ ಆರಂಭಿಸಲು ಅವರ ಸಹೋದರ ಮಾವ ಸಾಕಷ್ಟು ಪ್ರೋತ್ಸಾಹವನ್ನು ನೀಡಿದ್ದರು.

22 ಭಾಷೆಗಳು, 48,000ಕ್ಕೂ ಹೆಚ್ಚು ಗೀತೆಗಳು

ತಮಿಳಿನಲ್ಲಿ 1957 ರಲ್ಲಿ ‘ವಿಧಿಯಿನ್ ವಿಲಾಯಟ್ಟು’ ಅನ್ನೋ ಸಿನಿಮಾದ ಮೂಲಕ ಗಾಯನ ಪಯಣ ಆರಂಭಿಸಿದ್ದ ಎಸ್‌. ಜಾನಕಿ ಅವರು ಮೊದಲ ಸಿನಿಮಾದಿಂದಲೇ ಹಿಂದಿರುಗಿ ನೋಡಿದ್ದೇ ಇಲ್ಲ. ಕನ್ನಡ, ತೆಲುಗು, ತಮಿಳು, ಮಲಯಾಲಂ, ಹಿಂದಿ ಸೇರಿದಂತೆ ಸುಮಾರು 22 ಭಾಷೆಗಳಲ್ಲಿ 48000 ಕ್ಕೂ ಅಧಿಕ ಹಾಡುಗಳನ್ನು ಹಾಡುವ ಮೂಲಕ ಭಾರತೀಯ ಚಿತ್ರ ಸಂಗೀತ ಕ್ಷೇತ್ರದಲ್ಲಿ ಐತಿಹಾಸಿಕ ಸಾಧನೆಯನ್ನು ಮಾಡಿದ್ದಾರೆ.

ಸುಮಧುರ ಕಂಠದ ಮೂಲಕವೇ ಜಾನಕಿಯಮ್ಮ ಭಾರತದಾದ್ಯಂತ ಮನೆ ಮಾತಾಗಿದ್ದರು. ಕಂದಮ್ಮನ ಲಾಲಿ ಹಾಡಿನಿಂದ ಹಿಡಿದು, ಆಧ್ಯಾತ್ಮಿಕ ಭಕ್ತಿಗೀತೆ, ರೋಮ್ಯಾಟಿಂಕ್‌ ಹಾಡುಗಳಿಗೂ ಅದ್ಬುತವಾಗಿ ಜೀವ ತುಂಬುವ ಸಾಮರ್ಥ್ಯ ಅವರ ಧ್ವನಿಯಲ್ಲಿತ್ತು.

ಅಣ್ಣಾವ್ರು ಮೆಚ್ಚಿದ ಜಾನಕಿಯಮ್ಮ

ಎಸ್. ಜಾನಕಿ ಅವರಿಗೆ ಕನ್ನಡಿಗರ ಮತ್ತು ಕನ್ನಡ ಚಿತ್ರರಂಗದ ಮೇಲೆ ವಿಶೇಷ ಪ್ರೀತಿ. ಕನ್ನಡ ಭಾಷೆಯನ್ನು ಅತ್ಯಂತ ಸ್ಪಷ್ಟವಾಗಿ ಉಚ್ಚರಿಸುತ್ತಾ ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಕನ್ನಡಿಗರ ಮನಸ್ಸಿನಲ್ಲಿ ಹಸಿರಾಗಿವೆ.

ಅಪ್ರತಿಮ ಜುಗಲ್‌ಬಂದಿ: ನಟ ಸಾರ್ವಭೌಮ ಡಾ. ರಾಜ್‌ಕುಮಾರ್, ಗಾನಗಂಧರ್ವ ಪಿ. ಬಿ. ಶ್ರೀನಿವಾಸ್ ಮತ್ತು ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರೊಂದಿಗೆ ಜಾನಕಿಯಮ್ಮ ಹಾಡಿದ ಯುಗಳ ಗೀತೆಗಳು ಕನ್ನಡ ಸಿನಿ ಸಂಗೀತ ಜಗತ್ತಿನ ಸುವರ್ಣ ಯುಗ ಎಂದೇ ಬಣ್ಣಿಸಲಾಗುತ್ತಿದೆ. ಅವರು ಹಾಡಿರುವ ‘ಬಾಳ ಬಂಗಾರ ನೀನು’, ‘ಜೊತೆಯಲಿ ಜೊತೆಯಲಿ’, ‘ಕಣ್ಣಲ್ಲಿದೆ ಸವಿನೆನಪು’, ‘ಆಡೋಣಾ ನೀನು ನಾನು’ ಅಂತಹ ನೂರಾರು ಗೀತೆಗಳು ಇಂದಿಗೂ ಅಜರಾಮರ.

ಸರಳತೆಯ ಸಾಕಾರ ಮೂರ್ತಿ ಜಾನಕಿಯಮ್ಮ

ದೇಶದ ಪ್ರತಿಷ್ಠಿತ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರೂ ಕೂಡ ಜಾನಕಿಯಮ್ಮ ಎಂದಿಗೂ ಅಹಂಕಾರವನ್ನು ತೋರಿಸಿದವರಲ್ಲ. ಅವರ ವೈಯಕ್ತಿಕ ಬದುಕು ಅತ್ಯಂತ ಸರಳವಾಗಿತ್ತು. ಜೊತೆಗೆ ಶಿಸ್ತು ಬದ್ದವಾಗಿತ್ತು. ವಿ. ರಾಮಪ್ರಸಾದ್ ಅವರ ಕೈ ಹಿಡಿದ ಎಸ್.‌ ಜಾನಕಿ ಅವರಿಗೆ ಸಂಗೀತ ವೃತ್ತಿಜೀವನಕ್ಕೆ ಅತಿ ದೊಡ್ಡ ಬೆಂಬಲವಾಗಿ ನಿಂತಿದ್ದವರು ಅವರ ಪತಿ ರಾಮಪ್ರಸಾದ್.‌ ಆದರೆ ದುರದೃಷ್ಟವಶಾತ್, 1992 ರಲ್ಲಿ ಪತಿ ರಾಮಪ್ರಸಾದ್ ಅವರು ಹೃದಯಾಘಾತದಿಂದ ನಿಧನರಾದರು. ಪತಿಯ ಅಗಲಿಕೆಯ ನಂತರ ಜಾನಕಿ ಅವರು ಕೆಲಕಾಲ ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿದ್ದರು.

ಎಸ್‌.ಜಾನಕಿ ಅವರಿಗೆ ಮುರಳಿ ಕೃಷ್ಣ ಎಂಬ ಒಬ್ಬನೇ ಮಗನಿದ್ದಾನೆ. ಮಗನ ಕುಟುಂಬದೊಂದಿಗೆ ಜಾನಕಿಯಮ್ಮ ಸದಾ ಸಂತಸದ ಸಮಯ ಕಳೆಯುತ್ತಾರೆ. ಪ್ರಸ್ತುತ ಅವರು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನೆಲೆಸಿದ್ದು, ಪ್ರಶಾಂತ ಜೀವನ ನಡೆಸುತ್ತಿದ್ದಾರೆ. ಜಾನಕಿ ಅವರ ಪ್ರತಿಭೆಗೆ 4 ರಾಷ್ಟ್ರ ಪ್ರಶಸ್ತಿಗಳು ಹಾಗೂ ವಿವಿಧ ರಾಜ್ಯ ಸರ್ಕಾರಗಳಿಂದ 33 ಕ್ಕೂ ಹೆಚ್ಚು ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಲಭಿಸಿವೆ.

ಪದ್ಮಭೂಷಣ ತಿರಸ್ಕರಿಸಿದ ಎಸ್‌ ಜಾನಕಿ

2013 ರಲ್ಲಿ ಕೇಂದ್ರ ಸರ್ಕಾರ ಅವರಿಗೆ ‘ಪದ್ಮಭೂಷಣ’ ಪ್ರಶಸ್ತಿ ಘೋಷಿಸಿದಾಗ, ಅವರು ಅದನ್ನು ವಿನಮ್ರವಾಗಿ ನಿರಾಕರಿಸಿದರು. “ದಕ್ಷಿಣ ಭಾರತದ ಕಲಾವಿದರನ್ನು ಕೇಂದ್ರ ಸರ್ಕಾರ ಗುರುತಿಸುವುದು ತಡವಾಯಿತು, ಆರು ದಶಕಗಳ ಸುದೀರ್ಘ ಸೇವೆಯ ನಂತರ ಈ ಪ್ರಶಸ್ತಿ ನೀಡುತ್ತಿರುವುದು ತಡವಾದ ನಿರ್ಧಾರ” ಎಂದು ನೇರವಾಗಿಯೇ ನುಡಿದು ತಮ್ಮ ಸ್ವಾಭಿಮಾನ ಮೆರೆದಿದ್ದರು.

2016 ರಲ್ಲಿ ತಮ್ಮ 78ನೇ ವಯಸ್ಸಿನಲ್ಲಿ ವಯೋಸಹಜ ಕಾರಣಗಳಿಂದಾಗಿ ಅವರು ಗಾಯನ ವೃತ್ತಿಗೆ ಅಧಿಕೃತವಾಗಿ ವಿದಾಯ ಘೋಷಿಸಿದರು. ಇಂದು ಅವರು ಭೌತಿಕವಾಗಿ ಮೈಕ್ ಮುಂದೆ ನಿಲ್ಲದಿದ್ದರೂ, ಅವರು ಹಾಡಿದ ಸಾವಿರಾರು ಹಾಡುಗಳ ಮೂಲಕ ಪ್ರತಿದಿನ ಕೋಟ್ಯಂತರ ಸಂಗೀತ ಪ್ರೇಮಿಗಳ ಹೃದಯದಲ್ಲಿ ಜೀವಂತವಾಗಿದ್ದಾರೆ.

indian playback singer S Janaki No More

Exit mobile version