Karnataka Cabinet Expansion : ಸಂಪುಟ ವಿಸ್ತರಣೆಗೂ ಕೊನೆಗೂ ಮುಹೂರ್ತ ಫಿಕ್ಸ್​ – ಇಂದು ರಾತ್ರಿ 8ಕ್ಕೆ ಫೈನಲ್​ ಮೀಟಿಂಗ್​

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಈಗಾಗಲೇ ಪ್ರಾಥಮಿಕ ಸುತ್ತಿನ ಸಮಾಲೋಚನೆ ನಡೆಸಿದ್ದಾರೆ.

ಬೆಂಗಳೂರು : ರಾಜ್ಯ ಸಚಿವ ಸಂಪುಟ ಭರ್ತಿ ಪ್ರಕ್ರಿಯೆಗೆ ಕೊನೆಗೂ ಚಾಲನೆ ಸಿಕ್ಕಿದ್ದು, ದೆಹಲಿಯಲ್ಲಿ ಮಹತ್ವದ ಹೈಕಮಾಂಡ್ ಸಭೆ ಆಯೋಜನೆಗೊಂಡಿದೆ. ಕಾಂಗ್ರೆಸ್ ಪ್ರಮುಖ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯಲಿರುವ ಈ ಉನ್ನತ ಮಟ್ಟದ ಸಭೆಯಲ್ಲಿ ನೂತನ ಸಚಿವರ ಹೆಸರುಗಳು ಅಂತಿಮಗೊಳ್ಳಲಿವೆ.

ಇದಕ್ಕಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಈಗಾಗಲೇ ಪ್ರಾಥಮಿಕ ಸುತ್ತಿನ ಸಮಾಲೋಚನೆ ನಡೆಸಿದ್ದಾರೆ.

ಸದ್ಯ ಖಾಲಿ ಇರುವ 20 ಸಚಿವ ಸ್ಥಾನಗಳ ಪೈಕಿ 18 ಸ್ಥಾನಗಳನ್ನು ಭರ್ತಿ ಮಾಡಲು ಹೈಕಮಾಂಡ್ ನಿರ್ಧರಿಸಿದೆ. ಇನ್ನುಳಿದ ಎರಡು ಸ್ಥಾನಗಳನ್ನು ಭವಿಷ್ಯದ ರಾಜಕೀಯ ಬೆಳವಣಿಗೆಗಳಿಗಾಗಿ ಕಾಯ್ದಿರಿಸಲಾಗುವುದು. ಮುಖ್ಯಮಂತ್ರಿಗಳು 18 ಸ್ಥಾನಗಳಿಗಾಗಿ 30 ಸಮರ್ಥ ಶಾಸಕರ ಹೆಸರಿರುವ ಪಟ್ಟಿಯನ್ನು ಸಿದ್ಧಪಡಿಸಿದ್ದು, ಪ್ರತಿಯೊಬ್ಬರಿಗೂ ಸಚಿವ ಸ್ಥಾನ ನೀಡಲು ಇರುವ ಪೂರಕ ಕಾರಣಗಳನ್ನು ಲಿಖಿತವಾಗಿ ಹೈಕಮಾಂಡ್‌ಗೆ ವಿವರಿಸಿದ್ದಾರೆ.

ಮತ್ತೊಂದೆಡೆ ಸಿದ್ದರಾಮಯ್ಯ ಅವರು ತಮ್ಮ ಆಪ್ತ ವಲಯದ 7 ರಿಂದ 8 ಜನರಿಗೆ ಸ್ಥಾನ ನೀಡಬೇಕೆಂದು ಪಟ್ಟು ಹಿಡಿದಿದ್ದು, ಸಭೆಯಲ್ಲಿ ಮೌಖಿಕವಾಗಿ ವಾದ ಮಂಡಿಸಲಿದ್ದಾರೆ. ಬಿ.ಕೆ. ಹರಿಪ್ರಸಾದ್ ಕೂಡ ಕೆಲವು ಹೆಸರುಗಳನ್ನು ಶಿಫಾರಸು ಮಾಡಲಿದ್ದಾರೆ.

ಹೈಕಮಾಂಡ್ ತನ್ನದೇ ಆದ ಆಂತರಿಕ ಮೂಲಗಳಿಂದ ಅರ್ಹರ ಪಟ್ಟಿಯೊಂದನ್ನು ಸಿದ್ಧಪಡಿಸಿಕೊಂಡಿದ್ದು, ರಾಜ್ಯ ನಾಯಕರ ಪ್ರಸ್ತಾಪಗಳೊಂದಿಗೆ ಅದನ್ನು ತುಲನೆ ಮಾಡಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ವರಿಷ್ಠರು ಈ ಬಾರಿ ಪ್ರಾದೇಶಿಕ ಸಮತೋಲನ, ಜಾತಿವಾರು ಪ್ರಾತಿನಿಧ್ಯ ಹಾಗೂ ಯುವ ಮುಖಗಳಿಗೆ ಆದ್ಯತೆ ನೀಡುವ ಚಿಂತನೆಯಲ್ಲಿದ್ದಾರೆ.

ಇಂದು ರಾತ್ರಿ ನಡೆಯಲಿರುವ ಈ ಸಭೆಯಲ್ಲಿ ಪಟ್ಟಿ ಅಂತಿಮವಾದರೆ, ಬಹುತೇಕ ಗುರುವಾರ ಸಂಜೆ ಬೆಂಗಳೂರಿನ ಲೋಕಭವನದಲ್ಲಿ ನೂತನ ಸಚಿವರ ಪ್ರಮಾಣವಚನ ಸಮಾರಂಭ ಜರುಗಲಿದೆ. ಪ್ರಸ್ತುತ ಮಧ್ಯಪ್ರದೇಶ ಪ್ರವಾಸದಲ್ಲಿರುವ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ದೆಹಲಿ ನಾಯಕರ ಹಸಿರು ನಿಶಾನೆ ಸಿಗುತ್ತಿದ್ದಂತೆಯೇ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ವಾಪಸಾಗಲು ಒಪ್ಪಿಗೆ ಸೂಚಿಸಿದ್ದಾರೆ.

ಜುಲೈ 30 ರಂದು ಸಿದ್ದರಾಮಯ್ಯ ಅವರ ದಿವಂಗತ ಪುತ್ರ ರಾಕೇಶ್ ಸಿದ್ದರಾಮಯ್ಯ ಅವರ 10ನೇ ವರ್ಷದ ಸ್ಮರಣೋತ್ಸವ ಕಾರ್ಯಕ್ರಮವಿದ್ದು, ಸಿದ್ದರಾಮಯ್ಯ ಮೈಸೂರಿಗೆ ಭೇಟಿ ನೀಡಿ ಬಳಿಕ ದೆಹಲಿ ಸಭೆಗೆ ಹಾಜರಾಗಲಿದ್ದಾರೆ. ಈ ಸಂಪುಟ ಪುನಾರಚನೆಯು ರಾಜ್ಯ ಕಾಂಗ್ರೆಸ್ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

 High Command final Meeting Tonight at 8 PM

Exit mobile version