ಬೆಂಗಳೂರು : ಕರ್ನಾಟಕ ರಾಜ್ಯದಲ್ಲಿ ಮುಂಗಾರು ಮಳೆ ಮತ್ತೆ ಚುರುಕಾಗಿದೆ. ಕರಾವಳಿ, ಮಲೆನಾಡು ಭಾಗಗಳಲ್ಲಿ ವರುಣ ಆರ್ಭಟ ಜೋರಾಗಿದೆ. ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ಮುನ್ಸೂಚನೆಯ ಪ್ರಕಾರ, ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಮುಂದಿನ 5 ದಿನಗಳ ಕಾಲ (ಜುಲೈ 22ರ ವರೆಗೆ) ಧಾರಾಕಾರ ಮಳೆ ( Heavy Rain) ಮುಂದುವರಿಯಲಿದೆ.
ಅಂಕೋಲ, ಮಂಗಳೂರಿನ ಶಕ್ತಿನಗರ, ಉಡುಪಿಯ ಕುಂದಾಪುರದಲ್ಲಿ ನಿನ್ನೆ ದಾಖಲೆಯ ಪ್ರಮಾಣದಲ್ಲಿ ಮಳೆಯಾಗಿದೆ. ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆಯಂತೆ ಕರ್ನಾಟಕದ ಕರಾವಳಿ ಭಾಗದಲ್ಲಿ ಇನ್ನೂ 5 ದಿನಗಳ ಕಾಲ ಧಾರಾಕಾರ ಮಳೆ ಸುರಿಯಲಿದೆಯಂತೆ.
ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯ ಹಿನ್ನೆಲೆಯಲ್ಲಿ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹವಾಮಾನ ಇಲಾಖೆಯು ಕಿತ್ತಳೆ (Orange Alert) ಮತ್ತು ಹಳದಿ (Yellow Alert) ಮುನ್ನೆಚ್ಚರಿಕೆಯನ್ನು ನೀಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜುಲೈ 18ರಂದು ಜಿಲ್ಲಾಡಳಿತ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ.
ಕಳೆದ 24 ಗಂಟೆಯಲ್ಲಿ ದಾಖಲೆಯ ಮಳೆ : ಅಂಕೋಲಾದಲ್ಲಿ 29 ಸೆಂ.ಮೀ ಮಳೆ
ಕರಾವಳಿಯ ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಮೇಘಸ್ಪೋಟದ ಸ್ಥಿತಿ ನಿರ್ಮಾಣವಾಗಿತ್ತು. ಜುಲೈ 17ರಂದು ಹವಾಮಾನ ಇಲಾಖೆಯ ವರದಿಯ ಪ್ರಕಾರ, ಉತ್ತರ ಕನ್ನಡ ಜಿಲ್ಲೆಯ ಅಂಕೋಲದಲ್ಲಿ ರಾಜ್ಯದಲ್ಲಿಯೇ ಅತ್ಯಂತ ಗರಿಷ್ಠ 29 ಸೆಂಟಿಮೀಟರ್ (290 mm) ಮಳೆ ದಾಖಲಾಗಿದೆ.
ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಮೂಲ್ಕಿ, ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ, ಉಡುಪಿ ಜಿಲ್ಲೆಯ ಕುಂದಾಪುರದಲ್ಲಿಯೂ ಮಳೆಯ ಆರ್ಭಟ ಜೋರಾಗಿತ್ತು. ನಿಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯ ಹಿನ್ನೆಲೆಯಲ್ಲಿ ಜೀವನದಿಗಳು ತುಂಬಿ ಹರಿಯುತ್ತಿವೆ.
24 ಗಂಟೆಗಳಲ್ಲಿ ರಾಜ್ಯದಲ್ಲಿ ದಾಖಲಾದ ಗರಿಷ್ಠ ಮಳೆ ವಿವರ (ಸೆಂ.ಮೀ )
ಪ್ರದೇಶ / ತಾಲೂಕು ಜಿಲ್ಲೆ ದಾಖಲಾದ ಮಳೆ (ಸೆಂ.ಮೀ)
ಅಂಕೋಲಾ ಉತ್ತರ ಕನ್ನಡ 29 ಸೆಂ.ಮೀ
ಗೋಕರ್ಣ ಉತ್ತರ ಕನ್ನಡ 21 ಸೆಂ.ಮೀ
ಶಕ್ತಿನಗರ ದಕ್ಷಿಣ ಕನ್ನಡ 19 ಸೆಂ.ಮೀ
ಮಂಗಳೂರು ದಕ್ಷಿಣ ಕನ್ನಡ 17 ಸೆಂ.ಮೀ
ಮೂಲ್ಕಿ ದಕ್ಷಿಣ ಕನ್ನಡ 17 ಸೆಂ.ಮೀ
ಗೇರುಸೊಪ್ಪ ಉತ್ತರ ಕನ್ನಡ 17 ಸೆಂ.ಮೀ
ಕುಮಟಾ / ಮಂಕಿ ಉತ್ತರ ಕನ್ನಡ 15 ಸೆಂ.ಮೀ
ಕುಂದಾಪುರ ಉಡುಪಿ 13 ಸೆಂ.ಮೀ
ಇನ್ನು ಎಷ್ಟು ದಿನ ಇರುತ್ತೆ ಮಳೆಯ ಆರ್ಭಟ ?
ಹವಾಮಾನ ತಜ್ಞರ ಪ್ರಕಾರ, ಕರ್ನಾಟಕದ ಕರಾವಳಿ ಭಾಗಗಳಲ್ಲಿ ಮುಂದಿನ 4-5 ದಿನಗಳ ಕಾಲ ಬಾರೀ ಮಳೆಯಾಗಲಿದೆ. ಅದ್ರಲ್ಲೂ ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಬಲವಾದ ಗಾಳಿ ಬೀಸುವ ಕಾರಣದಿಂದ ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಿ ಇರಲಿದೆ.
ಕರಾವಳಿ ಜಿಲ್ಲೆಗಳಲ್ಲಿ ಜುಲೈ 22ರವರೆಗೆ ಭಾರಿ ಮಳೆ ಎಚ್ಚರಿಕೆ
ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಜುಲೈ 17ರಿಂದ 22ರವರೆಗೆ ಕರಾವಳಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಸುರಿಯುವ ಕುರಿತು ಮುನ್ಸೂಚನೆಯನ್ನು ನೀಡಿತ್ತು. ಅದರಂತೆಯೇ ಜುಲೈ 17ರಿಂದಲೇ ಧಾರಾಕಾರ ಮಳೆಯಾಗುತ್ತಿದೆ. ಹಾಗಾದ್ರೆ ಕರ್ನಾಟಕದ ಯಾವ ಜಿಲ್ಲೆಗಳಲ್ಲಿ ಇನ್ನೆಷ್ಟು ದಿನ ಮಳೆ ಸುರಿಯುತ್ತೆ ಅನ್ನೋ ಕಂಪ್ಲೀಟ್ ಮಾಹಿತಿ ಇಲ್ಲಿದೆ.
- ಕರಾವಳಿ : ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಜುಲೈ 22ರ ವರೆಗೆ ಭಾರೀ ಮಳೆ.
- ಮಲೆನಾಡು : ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿಯೂ ಮಳೆಯ ಆರ್ಭಟ ಇರಲಿದ್ದು, ಘಾಟ್ ಪ್ರದೇಶದಲ್ಲಿ ಭೂಕುಸಿತ ಮುನ್ನೆಚ್ಚರಿಕೆ ನೀಡಲಾಗಿದೆ.
- ಉತ್ತರ ಮತ್ತು ದಕ್ಷಿಣ ಒಳನಾಡು: ಬೆಳಗಾವಿ, ಧಾರವಾಡ, ಹಾವೇರಿ ಹಾಗೂ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ.
Karnataka coastal heavy rain forecast 2026 IMD Report
