ಮತ್ತೆ ಕೊರೊನಾ ಆತಂಕ : ಬೆಂಗಳೂರಿನಲ್ಲಿ ಮತ್ತೆ ನಾಲ್ವರಿಗೆ ಪಾಸಿಟಿವ್, ಆಂಧ್ರದ ಗಡಿಯಲ್ಲಿ ಬಿಗಿ ಪೊಲೀಸ್​ ಕಣ್ಗಾವಲು

ನೆರೆರಾಜ್ಯವಾದ ಆಂಧ್ರಪ್ರದೇಶದಲ್ಲಿ ಇತ್ತೀಚೆಗೆ ಕೊರೊನಾ ಸೋಂಕಿನ ಅಬ್ಬರ ತೀವ್ರಗೊಂಡಿದೆ. ಅಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದಲ್ಲದೆ, ಸೋಂಕಿನಿಂದಾಗಿ ಇಬ್ಬರು ಸಾವನ್ನಪ್ಪಿರುವುದು ಗಡಿಭಾಗದ ಜನರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಮ್ಮೆ ಮಹಾಮಾರಿ ಕೊರೊನಾ ವೈರಸ್ ( Covid 19)  ಆತಂಕ ಮೂಡಿಸಿದೆ. ಕಳೆದ ಕೆಲವು ದಿನಗಳಿಂದ ನಿರಾಳವಾಗಿದ್ದ ರಾಜಧಾನಿಯಲ್ಲಿ ಈಗ ನಾಲ್ವರಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. ಸೋಂಕಿತ ನಾಲ್ವರನ್ನೂ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರ ಕಟ್ಟುನಿಟ್ಟಿನ ನಿಗಾದಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

ನೆರೆರಾಜ್ಯವಾದ ಆಂಧ್ರಪ್ರದೇಶದಲ್ಲಿ ಇತ್ತೀಚೆಗೆ ಕೊರೊನಾ ಸೋಂಕಿನ ಅಬ್ಬರ ತೀವ್ರಗೊಂಡಿದೆ. ಅಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದಲ್ಲದೆ, ಸೋಂಕಿನಿಂದಾಗಿ ಇಬ್ಬರು ಸಾವನ್ನಪ್ಪಿರುವುದು ಗಡಿಭಾಗದ ಜನರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಆಂಧ್ರದಲ್ಲಿ ಪ್ರಕರಣಗಳು ಉಲ್ಬಣಗೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಕರ್ನಾಟಕ ಸರ್ಕಾರ, ರಾಜ್ಯದ ಗಡಿಭಾಗಗಳಲ್ಲಿ ಕಟ್ಟುನಿಟ್ಟಿನ ಕಟ್ಟೆಚ್ಚರ ವಹಿಸಲು ಆದೇಶಿಸಿದೆ.

ಪ್ರಮುಖವಾದ ಕರ್ನಾಟಕದ ಪಾವಗಡ ಸೇರಿದಂತೆ ಆಂಧ್ರಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಎಂಟು ಗಡಿ ಮಾರ್ಗಗಳಲ್ಲಿಯೂ ಆರೋಗ್ಯ ಇಲಾಖೆ ತಪಾಸಣೆಯನ್ನು ಚುರುಕುಗೊಳಿಸಿದೆ. ಹೊರರಾಜ್ಯದಿಂದ ರಾಜ್ಯದ ಗಡಿಯ ಒಳಗೆ ಪ್ರವೇಶಿಸುವ ಪ್ರತಿಯೊಬ್ಬ ಪ್ರಯಾಣಿಕರನ್ನೂ ಕಡ್ಡಾಯವಾಗಿ ಕೋವಿಡ್ ತಪಾಸಣೆಗೆ ಒಳಪಡಿಸಲಾಗುತ್ತಿದೆ. ತುರ್ತು ಪರಿಸ್ಥಿತಿಯನ್ನು ಎದುರಿಸಲು ಗಡಿಭಾಗದ ಪ್ರದೇಶಗಳಲ್ಲಿ ಅಗತ್ಯ ಚಿಕಿತ್ಸಾ ಕೇಂದ್ರಗಳು ಹಾಗೂ ತಾತ್ಕಾಲಿಕ ತಪಾಸಣಾ ಶಿಬಿರಗಳನ್ನು ಈಗಾಗಲೇ ತೆರೆಯಲಾಗಿದೆ.

ರಾಜಧಾನಿಯಲ್ಲಿ ಹೊಸ ಪ್ರಕರಣಗಳು ಪತ್ತೆಯಾಗಿರುವುದರಿಂದ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲದಿದ್ದರೂ, ಮುನ್ನೆಚ್ಚರಿಕೆ ವಹಿಸುವುದು ಅನಿವಾರ್ಯವಾಗಿದೆ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಜನನಿಬಿಡ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷಿಸಿಕೊಳ್ಳುವುದು ಸೂಕ್ತ. ನೆರೆರಾಜ್ಯಗಳ ಸಂಪರ್ಕ ಹೊಂದಿರುವವರು ಹೆಚ್ಚಿನ ಜಾಗರೂಕತೆ ವಹಿಸಬೇಕಿದೆ. ಗಡಿಭಾಗದ ನಿಗಾವನ್ನು ಮತ್ತಷ್ಟು ಬಿಗಿಗೊಳಿಸಲು ಸರ್ಕಾರ ಮುಂದಾಗಿದೆ.

Karnataka Covid Scare High Alert in Andra Border

Exit mobile version