ಜೂನ್ ತಿಂಗಳಿನಲ್ಲಿ ತೀವ್ರ ನಿರಾಶೆ ಮೂಡಿಸಿದ್ದ ಮುಂಗಾರು ಮಾರುತಗಳು ಜುಲೈ ಮೊದಲ ವಾರದಲ್ಲಿ ರಾಜ್ಯದಾದ್ಯಂತ ಉತ್ತಮ ಮಳೆ ಸುರಿಸುವ ಮೂಲಕ ಒಟ್ಟಾರೆ ಮಳೆ ಕೊರತೆಯ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸಿವೆ. ಜುಲೈ ತಿಂಗಳ ಆರಂಭದಲ್ಲಿ ಸುರಿದ ಮಳೆ ಕಂಡು ರಾಜ್ಯದಲ್ಲಿ ಬರಗಾಲವಿಲ್ಲ, ಎಂಬ ನೆಮ್ಮದಿ ಮೂಡಲು ಆರಂಭಿಸಿತ್ತು.
ಆದಾಗ್ಯೂ, ಕಳೆದ ಕೆಲವು ದಿನಗಳಿಂದ ಮುಂಗಾರು ಮತ್ತೆ ನಿಷ್ಕ್ರಿಯಗೊಂಡಿರುವುದು ರೈತಾಪಿ ವಲಯದಲ್ಲಿ ಹೊಸ ಆತಂಕವನ್ನು ಸೃಷ್ಟಿಸಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಇತ್ತೀಚಿನ ವರದಿಯ ಪ್ರಕಾರ, ಜುಲೈ 1 ರಿಂದ 10 ರವರೆಗಿನ ಅವಧಿಯಲ್ಲಿ ರಾಜ್ಯದಲ್ಲಿ ವಾಡಿಕೆಗಿಂತ ಸ್ವಲ್ಪ ಹೆಚ್ಚಿನ ಮಳೆ ದಾಖಲಾಗಿದೆ.
ಈ ಹತ್ತು ದಿನಗಳಲ್ಲಿ ರಾಜ್ಯದ ಸರಾಸರಿ ವಾಡಿಕೆ ಮಳೆಯ ಪ್ರಮಾಣ 84 ಮಿಲಿಮೀಟರ್ ಆಗಿರಬೇಕಿತ್ತು, ಆದರೆ 85 ಮಿಲಿಮೀಟರ್ ಮಳೆಯಾಗಿದ್ದು, ಶೇಕಡಾ ಎರಡರಷ್ಟು ಪ್ರಗತಿ ಕಂಡುಬಂದಿದೆ. ಈ ಆರಂಭಿಕ ಅಬ್ಬರದಿಂದಾಗಿ ಜೂನ್ ಅಂತ್ಯದ ವೇಳೆಗೆ ಶೇಕಡಾ 42 ರಷ್ಟಿದ್ದ ಒಟ್ಟು ಮಳೆ ಕೊರತೆಯು ಸದ್ಯ ಶೇಕಡಾ 29 ಕ್ಕೆ ಇಳಿಕೆಯಾಗಿದೆ.
ಆದರೆ ಭೌಗೋಳಿಕವಾಗಿ ನೋಡಿದಾಗ ದಕ್ಷಿಣ ಒಳನಾಡು ಮತ್ತು ಬೆಂಗಳೂರು ಭಾಗದಲ್ಲಿ ಶೇಕಡಾ 58 ರಷ್ಟು ಮಳೆಯ ತೀವ್ರ ಅಭಾವ ಮುಂದುವರಿದಿದೆ. ಮಲೆನಾಡು ಹಾಗೂ ಕರಾವಳಿ ತೀರದಲ್ಲೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೆ ಸರಿಸುಮಾರು ಶೇಕಡಾ 30 ರಷ್ಟು ಕೊರತೆ ಎದುರಾಗಿದೆ.
ಜುಲೈ ಆರಂಭದ ಮಳೆಯು ಕೃಷ್ಣರಾಜ ಸಾಗರ , ಕಬಿನಿ, ತುಂಗಭದ್ರಾ ಹಾಗೂ ಆಲಮಟ್ಟಿಯಂತಹ ರಾಜ್ಯದ ಪ್ರಮುಖ ಜಲಾಶಯಗಳಿಗೆ ಗಣನೀಯ ಒಳಹರಿವನ್ನು ತಂದುಕೊಟ್ಟಿದ್ದು, ನದಿಗಳ ನೀರಿನ ಮಟ್ಟ ಹೆಚ್ಚಿಸಿದೆ. ಇದು ಕೃಷಿ ಚಟುವಟಿಕೆಗಳಿಗೆ ತಾತ್ಕಾಲಿಕ ನೆಮ್ಮದಿ ನೀಡಿದೆಯಾದರೂ, ಪ್ರಸ್ತುತ ಉಂಟಾಗಿರುವ ಮುಂಗಾರು ದುರ್ಬಲತೆ ವಾತಾವರಣವನ್ನು ಮತ್ತೆ ಬಿಸಿಲಾಗಿಸಿದೆ.
ಇದೇ ಒಣ ಹವೆ ಮತ್ತು ಬಿಸಿಲಿನ ವಾತಾವರಣ ಮುಂದುವರಿದರೆ ರಾಜ್ಯವು ಮುಂದಿನ ದಿನಗಳಲ್ಲಿ ತೀವ್ರ ನೀರಿನ ಅಭಾವ ಹಾಗೂ ಬರಗಾಲದ ಪರಿಸ್ಥಿತಿಯನ್ನು ಎದುರಿಸಬೇಕಾಗಬಹುದು ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ.
Monsoon raged in early July but has weakened again
