ಕರ್ನಾಟಕದಲ್ಲಿ ಜುಲೈ ತಿಂಗಳ ಮುಂಗಾರು ಮಳೆ ಅಬ್ಬರಿಸಬೇಕಾಗಿದ್ದ ಅವಧಿಯಲ್ಲೇ ವಾತಾವರಣ ಸಂಪೂರ್ಣ ಏರುಪೇರಾಗಿದೆ. ಕರಾವಳಿ ಮತ್ತು ಮಲೆನಾಡು ಭಾಗ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಗಣನೀಯವಾಗಿ ಇಳಿಮುಖವಾಗಿದ್ದು, ಜುಲೈ ಮಳೆಗಾಲದಲ್ಲೇ ಸೂರ್ಯನ ತಾಪ ಹೆಚ್ಚಾಗುತ್ತಿದೆ. ಈ ದಿಢೀರ್ ಬದಲಾವಣೆಯು ರೈತ ಸಮುದಾಯ ಮತ್ತು ಸಾರ್ವಜನಿಕರಲ್ಲಿ ತೀವ್ರ ಆತಂಕವನ್ನು ಮೂಡಿಸಿದೆ.
ರಾಜಧಾನಿ ಬೆಂಗಳೂರು ನಗರದಲ್ಲಿ ಕಳೆದ ಕೆಲವು ದಿನಗಳಿಂದ ಮಳೆಯ ಸುಳಿವೇ ಇಲ್ಲದಂತಾಗಿದ್ದು, ತಾಪಮಾನವು ಸತತವಾಗಿ ಏರಿಕೆಯಾಗುತ್ತಿದೆ. ನಗರದಲ್ಲಿ ಗರಿಷ್ಠ ಉಷ್ಣಾಂಶವು ಈಗಾಗಲೇ 31 ಡಿಗ್ರಿ ಸೆಲ್ಸಿಯಸ್ ಆಸುಪಾಸಿಗೆ ತಲುಪಿದ್ದು, ಮುಂದಿನ ಕೆಲ ದಿನಗಳ ಕಾಲ ಇದೇ ರೀತಿಯ ಬಿಸಿಲಿನ ವಾತಾವರಣ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಒಳನಾಡಿನ ಬಹುತೇಕ ಭಾಗಗಳಲ್ಲಿ ಸಂಜೆ ವೇಳೆ ಮಾತ್ರ ಅಲ್ಲಲ್ಲಿ ಸಾಧಾರಣ ಹನಿಗಳು ಬೀಳುವ ಸಾಧ್ಯತೆಯಿದೆ.
ಕೆಲವೇ ದಿನಗಳ ಹಿಂದೆ ಪ್ರವಾಹದ ಭೀತಿ ಮೂಡಿಸಿದ್ದ ದಕ್ಷಿಣ ಕನ್ನಡ, ಉಡುಪಿ ಹಾಗೂ ಶಿವಮೊಗ್ಗದಂತಹ ಮಲೆನಾಡಿನ ಪ್ರಾಂತ್ಯಗಳಲ್ಲೂ ಮಳೆ ಸದ್ಯಕ್ಕೆ ಸ್ತಬ್ಧಗೊಂಡಿದೆ. ಉತ್ತರ ಮತ್ತು ದಕ್ಷಿಣ ಒಳನಾಡಿನ ಸುಮಾರು ಇಪ್ಪತ್ತಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಒಣಹವೆಯ ಮುನ್ಸೂಚನೆ ನೀಡಲಾಗಿದೆ.
ಈ ಮುಂಚೆ ಸುರಿದ ಭಾರಿ ಮಳೆಯಿಂದಾಗಿ ಕಾವೇರಿ ಮತ್ತು ಕೃಷ್ಣಾ ಕೊಳ್ಳದ ಜಲಾಶಯಗಳ ಒಳಹರಿವು ಹೆಚ್ಚಿ ಭರವಸೆ ಮೂಡಿಸಿತ್ತು. ಆದರೆ ಈಗ ದಿಢೀರ್ ಬಿಸಿಲು ಶುರುವಾಗಿರುವುದರಿಂದ ಡ್ಯಾಂಗಳಲ್ಲಿನ ನೀರಿನ ಮಟ್ಟ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದೆ. ಕಳೆದ ವರ್ಷದ ಬರಗಾಲದ ಪರಿಸ್ಥಿತಿಯನ್ನು ನೆನೆದು ಜನರು ಈಗಿನಿಂದಲೇ ಚಿಂತಿತರಾಗಿದ್ದಾರೆ.
Sun scorches even during the monsoon season Rainfall comes to a complete halt in coastal and Malnad regions
