ವಾಹನ ಸವಾರರಿಗೆ ಬಿಗ್​ಶಾಕ್​ : ಸಂಚಾರಿ ನಿಯಮ ಬಾಕಿ ಇರಿಸಿಕೊಂಡ್ರೆ ಡಿಎಲ್​ ಬಂದ್

ದೇಶಾದ್ಯಂತ ಲಕ್ಷಾಂತರ ಇ-ಚಲನ್‌ಗಳು ದಂಡ ಪಾವತಿಯಾಗದೆ ಬಾಕಿ ಉಳಿದುಕೊಂಡಿರುವುದರಿಂದ ರಸ್ತೆ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಕೇಂದ್ರ ಸರ್ಕಾರ ಈ ಕಠಿಣ ನಿರ್ಧಾರ ಕೈಗೊಂಡಿದೆ.

ಬೆಂಗಳೂರು : ಸಂಚಾರ ನಿಯಮಗಳನ್ನು ಗಾಳಿಗೆ ತೂರಿ, ಬಳಿಕ ಇ – ಚಲನ್​ ದಂಡದ ಮೊತ್ತವನ್ನು ಪಾವತಿಸದೇ ಸರ್ಕಾರಕ್ಕೆ ಚಳ್ಳೆ ಹಣ್ಣು ತಿನ್ನಿಸುವ ವಾಹನ ಸವಾರರ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಲು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ನಿರ್ಧರಿಸಿದೆ .

ಈ ಹಿನ್ನೆಲೆಯಲ್ಲಿ ಕೇಂದ್ರೀಯ ಮೋಟಾರು ವಾಹನ ನಿಯಮಗಳು 1989ರಲ್ಲಿ ಪ್ರಮುಖ ತಿದ್ದುಪಡಿಗಳನ್ನು ತರಲು ಹೊಸ ಕರಡು ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಇದರ ಅನ್ವಯ ನಿಗದಿ ಅವಧಿಯಲ್ಲಿ ಸಂಚಾರಿ ನಿಯಮ ಉಲ್ಲಂಘನೆಯ ದಂಡ ಪಾವತಿ ಮಾಡದೇ ಹೋದಲ್ಲಿ ವಾಹನ ಸವಾರರ ಆರ್​ಸಿ ಹಾಗೂ ಚಾಲನಾ ಪರವಾನಗಿ ನವೀಕರಣ ಸೇರಿದಂತೆ ಹಲವು ಸರ್ಕಾರಿ ಸೇವೆಗಳು ಸಂಪೂರ್ಣ ಸ್ಥಗಿತಗೊಳ್ಳಲಿದೆ.

ಪ್ರಸ್ತುತ ಈ ಕರಡು ಪ್ರಸ್ತಾವನೆಯನ್ನು ಸಾರ್ವಜನಿಕರ ಅಭಿಪ್ರಾಯ ಹಾಗೂ ಸಲಹೆಗಳ ಸಂಗ್ರಹಣೆಗಾಗಿ ಮುಕ್ತವಾಗಿ ಇಡಲಾಗಿದ್ದು, ಶೀಘ್ರದಲ್ಲೇ ಅಧಿಕೃತ ಅಂತಿಮ ಅಧಿಸೂಚನೆ ಹೊರಬೀಳಲಿದೆ. ಹೊಸ ನಿಯಮಾವಳಿಗಳ ಪ್ರಕಾರ, ವಿಧಿಸಲಾದ ಇ-ಚಲನ್ ದಂಡವನ್ನು ನಿಗದಿತ ಅವಧಿಯೊಳಗೆ ಪಾವತಿಸದಿದ್ದರೆ ಅಥವಾ ಆಕ್ಷೇಪಣೆ ಸಲ್ಲಿಸದಿದ್ದರೆ, ಅಂತಹ ವಾಹನಗಳ ಆರ್‌ಸಿಯನ್ನು ಸಾರಿಗೆ ಪೋರ್ಟಲ್‌ನಲ್ಲಿ “ವ್ಯವಹರಿಸಬಾರದು” ಎಂದು ನಮೂದಿಸಲಾಗುತ್ತದೆ.

ಇದರಿಂದಾಗಿ ಮಾಲೀಕತ್ವ ವರ್ಗಾವಣೆ, ಆರ್‌ಸಿ ನವೀಕರಣ ಹಾಗೂ ಡಿಎಲ್ ನವೀಕರಣದಂತಹ ಯಾವುದೇ ಅಗತ್ಯ ಸೇವೆಗಳನ್ನು ಸಾರಿಗೆ ಇಲಾಖೆಯಿಂದ ಪಡೆಯಲು ಸಾಧ್ಯವಾಗುವುದಿಲ್ಲ. ಆದರೆ, ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸುತ್ತಿರುವವರಿಗೆ ಈ ನಿಯಮದಿಂದ ವಿನಾಯಿತಿ ಇರಲಿದ್ದು, ವಾಹನ ತೆರಿಗೆ ಪಾವತಿಗೆ ಯಾವುದೇ ತೊಂದರೆ ಇರುವುದಿಲ್ಲ.

ದೇಶಾದ್ಯಂತ ಲಕ್ಷಾಂತರ ಇ-ಚಲನ್‌ಗಳು ದಂಡ ಪಾವತಿಯಾಗದೆ ಬಾಕಿ ಉಳಿದುಕೊಂಡಿರುವುದರಿಂದ ರಸ್ತೆ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಕೇಂದ್ರ ಸರ್ಕಾರ ಈ ಕಠಿಣ ನಿರ್ಧಾರ ಕೈಗೊಂಡಿದೆ. ಡಿಜಿಟಲ್ ಸಂಚಾರ ನಿಯಂತ್ರಣ ವ್ಯವಸ್ಥೆಯನ್ನು ಮತ್ತಷ್ಟು ಪಾರದರ್ಶಕಗೊಳಿಸಲು ಈ ತಿದ್ದುಪಡಿ ತರಲಾಗುತ್ತಿದೆ.

ನಿಗದಿತ ಸಮಯದಲ್ಲಿ ಚಲನ್ ದೂರುಗಳನ್ನು ವಿಲೇವಾರಿ ಮಾಡದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆಯೇ ದಂಡ ವಿಧಿಸುವ ಹೊಣೆಗಾರಿಕೆಯನ್ನೂ ತರಲಾಗಿದೆ. ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ಚಾಲಕರಲ್ಲಿ ಜವಾಬ್ದಾರಿ ಮೂಡಿಸಲು ಈ ಹೊಸ ನಿಯಮಗಳು ಸಹಕಾರಿಯಾಗಲಿವೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

Traffic New Rules Fines Pending Driving License to be Cancelled

Exit mobile version