Kannada News Next

india

ಜನನ, ಮರಣ ನೋಂದಣಿಗೆ ಬಿಗಿ ನಿಯಮ: ಅಕ್ಟೋಬರ್ 1ರಿಂದ ದೇಶಾದ್ಯಂತ ಹೊಸ ಕಾನೂನು ಜಾರಿ

ಜನನ ಅಥವಾ ಮರಣ ಸಂಭವಿಸಿ ಎರಡು ವರ್ಷಗಳ ನಂತರ ನೋಂದಣಿಗೆ ಅರ್ಜಿ ಸಲ್ಲಿಸಿದರೆ, ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (First Class Judicial Magistrate) ಅವರ ಆದೇಶ ಕಡ್ಡಾಯವಾಗಲಿದೆ.

By Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ
birth death registration new rules karnataka

ದೇಶಾದ್ಯಂತ ಜನನ ಮತ್ತು ಮರಣ ನೋಂದಣಿ ಪ್ರಕ್ರಿಯೆಯನ್ನು ಇನ್ನಷ್ಟು ಪಾರದರ್ಶಕ ಹಾಗೂ ನಿಖರಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ. ಪರಿಷ್ಕೃತ ಜನನ ಮತ್ತು ಮರಣ ನೋಂದಣಿ (ತಿದ್ದುಪಡಿ) ಕಾಯ್ದೆ ಅಕ್ಟೋಬರ್ 1ರಿಂದ ದೇಶಾದ್ಯಂತ ಜಾರಿಗೆ ಬರಲಿದ್ದು, ತಡವಾಗಿ ನೋಂದಣಿ ಮಾಡುವವರ ಮೇಲೆ ಕಠಿಣ ನಿಯಮಗಳು ಅನ್ವಯವಾಗಲಿವೆ.

ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕಾರಗೊಂಡಿದ್ದ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿರುವ ಹಿನ್ನೆಲೆಯಲ್ಲಿ, ಹೊಸ ನಿಯಮಗಳು ಕಾನೂನು ರೂಪ ಪಡೆದಿವೆ. ಜನನ ಹಾಗೂ ಮರಣಗಳ ತಡವಾದ ನೋಂದಣಿಯನ್ನು ತಡೆಯುವುದು ಮತ್ತು ಪ್ರತಿಯೊಂದು ಘಟನೆ ಸಕಾಲದಲ್ಲೇ ದಾಖಲಾಗುವಂತೆ ಮಾಡುವುದು ಈ ತಿದ್ದುಪಡಿಯ ಪ್ರಮುಖ ಉದ್ದೇಶವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎರಡು ವರ್ಷ ಮೀರಿದರೆ ಕೋರ್ಟ್ ಆದೇಶ ಕಡ್ಡಾಯ:

ಹೊಸ ನಿಯಮಗಳ ಪ್ರಕಾರ, ಜನನ ಅಥವಾ ಮರಣ ಸಂಭವಿಸಿ ಎರಡು ವರ್ಷಗಳ ನಂತರ ನೋಂದಣಿಗೆ ಅರ್ಜಿ ಸಲ್ಲಿಸಿದರೆ, ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (First Class Judicial Magistrate) ಅವರ ಆದೇಶ ಕಡ್ಡಾಯವಾಗಲಿದೆ. ದಾಖಲೆಗಳ ಪರಿಶೀಲನೆ ಹಾಗೂ ನಿಗದಿತ ಶುಲ್ಕ ಪಾವತಿಯ ನಂತರವೇ ನೋಂದಣಿಗೆ ಅನುಮತಿ ನೀಡಲಾಗುತ್ತದೆ.

ಎರಡು ವರ್ಷಗಳೊಳಗಿನ ವಿಳಂಬಕ್ಕೂ ಕಟ್ಟುನಿಟ್ಟಿನ ಕ್ರಮ:

ಜನನ ಅಥವಾ ಮರಣ ಸಂಭವಿಸಿ ಒಂದು ವರ್ಷದಿಂದ ಎರಡು ವರ್ಷಗಳೊಳಗೆ ನೋಂದಣಿ ಮಾಡಿಸಲು ಬಯಸುವವರು ಜಿಲ್ಲಾ ಮ್ಯಾಜಿಸ್ಟ್ರೇಟ್ (DM), ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ (SDM) ಅಥವಾ ಅಧಿಕೃತ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಅವರ ಅನುಮತಿ ಪಡೆಯಬೇಕು. ಅಧಿಕಾರಿಗಳು ಘಟನೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಿದ ಬಳಿಕ ಹಾಗೂ ನಿಗದಿತ ಶುಲ್ಕ ಪಾವತಿಸಿದ ನಂತರ ಮಾತ್ರ ನೋಂದಣಿಗೆ ಅವಕಾಶ ನೀಡಲಾಗುತ್ತದೆ.

ಸಕಾಲದಲ್ಲಿ ನೋಂದಣಿ ಕಡ್ಡಾಯ

ಜನನ ಅಥವಾ ಮರಣ ಸಂಭವಿಸಿದ 21 ದಿನಗಳೊಳಗೆ ನೋಂದಣಿ ಮಾಡಿಸುವುದು ಈಗಾಗಲೇ ಕಡ್ಡಾಯವಾಗಿದೆ. ತಡವಾದ ನೋಂದಣಿಗಳನ್ನು ಕಡಿಮೆ ಮಾಡಿ, ದೇಶದ ನಾಗರಿಕ ದಾಖಲೆ ವ್ಯವಸ್ಥೆಯನ್ನು ಇನ್ನಷ್ಟು ವಿಶ್ವಾಸಾರ್ಹವಾಗಿಸುವ ಉದ್ದೇಶದಿಂದ ಈ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ.

ಸಾರ್ವಜನಿಕರಿಗೆ ಸರ್ಕಾರದ ಸಲಹೆ

ಮನೆಯಲ್ಲಿನ ಯಾವುದೇ ಜನನ ಅಥವಾ ಮರಣ ಇನ್ನೂ ನೋಂದಣಿಯಾಗದೇ ಉಳಿದಿದ್ದರೆ, ಕೊನೆಯ ಕ್ಷಣದವರೆಗೆ ಕಾಯದೆ ತಕ್ಷಣವೇ ನೋಂದಣಿ ಮಾಡಿಸಿಕೊಳ್ಳುವಂತೆ ಸರ್ಕಾರ ಸಾರ್ವಜನಿಕರಿಗೆ ಸಲಹೆ ನೀಡಿದೆ. ಹೆಚ್ಚಿನ ಮಾಹಿತಿಗಾಗಿ ಹಾಗೂ ಶುಲ್ಕದ ವಿವರಗಳಿಗೆ ಸ್ಥಳೀಯ ಜನನ-ಮರಣ ನೋಂದಣಾಧಿಕಾರಿ ಅಥವಾ ಜಿಲ್ಲಾ ಆಡಳಿತ ಕಚೇರಿಯನ್ನು ಸಂಪರ್ಕಿಸಬಹುದು.

ಹೊಸ ನಿಯಮಗಳು ಜಾರಿಗೆ ಬಂದ ಬಳಿಕ ವಿಳಂಬವಾದ ನೋಂದಣಿ ಪ್ರಕ್ರಿಯೆ ಇನ್ನಷ್ಟು ಕಠಿಣವಾಗಲಿರುವುದರಿಂದ, ಸಾರ್ವಜನಿಕರು ಸಮಯಕ್ಕೆ ಸರಿಯಾಗಿ ಜನನ ಮತ್ತು ಮರಣ ನೋಂದಣಿ ಮಾಡಿಸಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ.