ಹೆತ್ತ ಕರಳು ಮತ್ತು ರಕ್ತಸಂಬಂಧಗಳು ಇತ್ತೀಚಿನ ದಿನಗಳಲ್ಲಿ ಎಷ್ಟು ಯಾಂತ್ರಿಕ ಮತ್ತು ಕ್ರೂರವಾಗುತ್ತಿವೆ ಎಂಬುದಕ್ಕೆ ಹರಿಯಾಣದಲ್ಲಿ ನಡೆದ ಈ ಘಟನೆಯೇ ಸಾಕ್ಷಿಯಾಗಿದೆ. ತಮ್ಮ ಇಡೀ ಜೀವನವನ್ನು ಹೆಣ್ಣುಮಕ್ಕಳ ಉನ್ನತ ಭವಿಷ್ಯಕ್ಕಾಗಿ ಧಾರೆ ಎರೆದಿದ್ದ ವೃದ್ಧ ತಂದೆಯೊಬ್ಬರ ಅಂತ್ಯಕ್ರಿಯೆಗೆ ಬರಲು ಪುತ್ರಿಯರು ನಿರಾಕರಿಸಿದ ಹೃದಯವಿದ್ರಾವಕ ಪ್ರಸಂಗವೊಂದು ಬೆಳಕಿಗೆ ಬಂದಿದೆ.
ಮೃತ ತಂದೆಯ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲು ಹಣ ಕಳುಹಿಸಿ, ಕೇವಲ ವೀಡಿಯೋ ಕಾಲ್ ಮೂಲಕ ಇಡೀ ಕಾರ್ಯವನ್ನು ಮುಗಿಸಿಕೊಂಡಿದ್ದಾರೆ. ಮುಂಬೈ ಮೂಲದ ಮಾಜಿ ಬಟ್ಟೆ ವ್ಯಾಪಾರಿಯಾಗಿದ್ದ 74 ವರ್ಷದ ಶಿವಚರಣ್ ಗುಪ್ತಾ ಅವರು ಸೋನಿಪತ್‌ನ ವೃದ್ಧಾಶ್ರಮದಲ್ಲಿ ವಾಸವಿದ್ದರು.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮಂಗಳವಾರ ಕೊನೆಯುಸಿರೆಳೆದಿದ್ದಾರೆ. ಈ ಸಾವಿನ ಸಂಗತಿಯನ್ನು ಅವರ ಮೂವರು ವಿವಾಹಿತ ಹೆಣ್ಣುಮಕ್ಕಳಿಗೆ ಆಶ್ರಮದ ಆಡಳಿತ ಮಂಡಳಿ ಮುಟ್ಟಿಸಿದೆ. ಆದರೆ, ವಿವಿಧ ರಾಜ್ಯಗಳಲ್ಲಿ ನೆಲೆಸಿರುವ ಆ ಪುತ್ರಿಯರು ತಮಗೆ ಬರಲು ಸಮಯವಿಲ್ಲವೆಂಬ ನಿರ್ದಕ್ಷಿಣ್ಯದ ಉತ್ತರ ನೀಡಿದ್ದಾರೆ. ಅಲ್ಲದೆ, ಆನ್‌ಲೈನ್ ಮೂಲಕ 5100 ರೂಪಾಯಿಗಳನ್ನು ಕಳುಹಿಸಿ, ಚಿತೆಗೆ ಅಗ್ನಿ ಸ್ಪರ್ಶ ಮಾಡುವಾಗ ಫೋನ್ ಮಾಡುವಂತೆ ಹೇಳಿದ್ದಾರೆ.
ಅತ್ಯಂತ ಬೇಸರದ ಸಂಗತಿಯೆಂದರೆ, ತಂತ್ರಜ್ಞಾನದ ಮೂಲಕ ಚಿತೆ ಉರಿಯುವುದನ್ನು ನೋಡುತ್ತಿದ್ದಾಗಲೇ ಒಬ್ಬ ಪುತ್ರಿ, "ಇದು ಮುಗಿಯಲು ಇನ್ನು ಎಷ್ಟು ಹೊತ್ತು ಬೇಕು? ನಾವು ಊಟ ಮಾಡಿ ಸ್ನಾನ ಮಾಡಬೇಕು" ಎಂದು ಕೇಳಿದ್ದಾರೆ.
ಮಕ್ಕಳ ಈ ನಡವಳಿಕೆ ಅಲ್ಲಿನ ಸಿಬ್ಬಂದಿಯ ಕಣ್ಣಲ್ಲಿ ನೀರು ತರಿಸಿದೆ. ಓದಿಸಿ ಶಿಕ್ಷಕರನ್ನಾಗಿ ಮಾಡಿದ ಕೈಗಳೇ ಇಂದು ತಂದೆಯ ಮುಖ ನೋಡಲು ಬಾರದಿರುವುದು ಇಂದಿನ ಸಮಾಜದ ನೈತಿಕ ಕುಸಿತಕ್ಕೆ ಕನ್ನಡಿಯಾಗಿದೆ. ಕೊನೆಗೆ ಆಶ್ರಮದ ಸಿಬ್ಬಂದಿ ಮತ್ತು ಸ್ಥಳೀಯರೇ ಸೇರಿ ತಂದೆಯ ಅಂತಿಮ ಸಂಸ್ಕಾರ ನೆರವೇರಿಸಿದ್ದಾರೆ.
ಶಿವಚರಣ್ ಅವರು ತಮ್ಮ ಇಚ್ಛೆಯಂತೆ ಕಣ್ಣುಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಇಬ್ಬರ ಬಾಳಿಗೆ ಬೆಳಕಾಗಿದ್ದಾರೆ. ಚಿತಾಭಸ್ಮವನ್ನು ಪಡೆಯಲೂ ನಿರಾಕರಿಸಿದ ಪುತ್ರಿಯರು, ಅದನ್ನೂ ನೀವೆ ಗಂಗಾ ನದಿಯಲ್ಲಿ ವಿಸರ್ಜಿಸಿ ಎಂದು ಸಿಬ್ಬಂದಿಗೆ ಮನವಿ ಮಾಡಿದ್ದಾರೆ. ಈ ಘಟನೆಯ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ.