Kannada News Next

india

ಡಾಬರ್‌ ತುಪ್ಪ, ಜೇನುತುಪ್ಪಕ್ಕೆ ನಿಷೇಧ : FSSAIನಿಂದ ಬಿಗ್‌ ಶಾಕ್‌

ಆಹಾರ ಸುರಕ್ಷತೆಯ ಪ್ರಮುಖ ಕಾಯ್ದೆಗಳ ಪ್ರಕಾರ, ಮಿಶ್ರಿತ ಆಹಾರ ಪದಾರ್ಥಗಳ ಮೇಲೆ ಇಂತಹ ಲೇಬಲ್ ಬಳಸುವುದು ಕಾನೂನುಬಾಹಿರವಾಗಿದೆ.

By ರಶ್ಮಿ ಎಸ್. | Rashmi S

ನವದೆಹಲಿ : ಗ್ರಾಹಕರಲ್ಲಿ ಅತಿಯಾದ ನಂಬಿಕೆ ಮೂಡಿಸುವ ದೃಷ್ಟಿಯಿಂದ ನಿಯಮಬಾಹಿರವಾಗಿ ಪ್ರಚಾರ ನಡೆಸುತ್ತಿದ್ದ ದೇಶದ ಮುಂಚೂಣಿ ಆಹಾರೋತ್ಪನ್ನ ಸಂಸ್ಥೆ 'ಡಾಬರ್ ಇಂಡಿಯಾ'ಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ಭಾರಿ ಶಾಕ್ ನೀಡಿದೆ.

ಉತ್ಪನ್ನಗಳ ಪ್ಯಾಕೆಟ್‌ಗಳ ಮೇಲೆ ನೂರಕ್ಕೆ ನೂರು ನೈಸರ್ಗಿಕ ಹಾಗೂ ಸಂಪೂರ್ಣ ಶುದ್ಧ ಎನ್ನುವ ಹಕ್ಕುಗಳನ್ನು ಮಂಡಿಸಿ ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ಕಂಪನಿಯ ಪ್ರಮುಖ ಆಹಾರ ಪದಾರ್ಥಗಳ ಮಾರಾಟಕ್ಕೆ ತಕ್ಷಣವೇ ನಿರ್ಬಂಧ ಹೇರಲಾಗಿದೆ.

ಆಹಾರ ಸುರಕ್ಷತೆಯ ಪ್ರಮುಖ ಕಾಯ್ದೆಗಳ ಪ್ರಕಾರ, ಮಿಶ್ರಿತ ಆಹಾರ ಪದಾರ್ಥಗಳ ಮೇಲೆ ಇಂತಹ ಲೇಬಲ್ ಬಳಸುವುದು ಕಾನೂನುಬಾಹಿರವಾಗಿದೆ. ಆದರೂ ಡಾಬರ್ ಸಂಸ್ಥೆಯು ತನ್ನ ತೆಂಗಿನ ಹಾಲು, ಹಸುವಿನ ತುಪ್ಪ, ಜೇನುತುಪ್ಪ, ಎಳ್ಳಿನ ಎಣ್ಣೆ ಮತ್ತು ಎಳನೀರಿನ ಉತ್ಪನ್ನಗಳ ಮೇಲೆ ಈ ನಿಯಮಗಳನ್ನು ಗಾಳಿಗೆ ತೂರಿ ಗ್ರಾಹಕರನ್ನು ಗೊಂದಲಕ್ಕೀಡು ಮಾಡಿತ್ತು.

ಎಲ್ಲಕ್ಕಿಂತ ಮಿಗಿಲಾಗಿ, ಕಂಪನಿಯ ಜನಪ್ರಿಯ ಆರ್ಗ್ಯಾನಿಕ್ ಜೇನುತುಪ್ಪ ಮತ್ತು ಆಪಲ್ ಸೈಡರ್ ವಿನೆಗರ್ ಉತ್ಪನ್ನಗಳಿಗೆ ಅಧಿಕೃತ ಒಪ್ಪಿಗೆ ಇಲ್ಲದಿದ್ದರೂ 'ಜೈವಿಕ್ ಭಾರತ್' ಮುದ್ರೆಯನ್ನು ಕಾನೂನುಬಾಹಿರವಾಗಿ ಮುದ್ರಿಸಿರುವುದು ತನಿಖೆಯಲ್ಲಿ ಸಾಬೀತಾಗಿದೆ.

ಈ ಹಿಂದೆಯೇ ಎಚ್ಚರಿಕೆ ಸಂದೇಶಗಳನ್ನು ನೀಡಿದ್ದರೂ ಸಂಸ್ಥೆಯು ಯಾವುದೇ ಸೂಕ್ತ ಬದಲಾವಣೆಗಳನ್ನು ಮಾಡಿಕೊಳ್ಳದ ಹಿನ್ನೆಲೆಯಲ್ಲಿ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಸದ್ಯ ವಿವಾದಿತ ಲೇಬಲ್ ಹೊಂದಿರುವ ಎಲ್ಲಾ ಸಾಮಗ್ರಿಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಲು ಸೂಚಿಸಲಾಗಿದ್ದು, ಮುಂದಿನ ಹದಿನೈದು ದಿನಗಳ ಒಳಗಾಗಿ ಕೈಗೊಂಡಿರುವ ಶಿಸ್ತುಕ್ರಮಗಳ ವರದಿಯನ್ನು ಸಲ್ಲಿಸುವಂತೆ ಕಂಪನಿಗೆ ಕಟ್ಟುನಿಟ್ಟಿನ ಗಡುವು ನೀಡಲಾಗಿದೆ.

ಇತ್ತೀಚಿನ ದಿನಗಳಲ್ಲಿ ಇ-ಕಾಮರ್ಸ್ ಹಾಗೂ ಆನ್‌ಲೈನ್ ಮಾರುಕಟ್ಟೆಗಳಲ್ಲಿ ಸುಳ್ಳು ಜಾಹೀರಾತುಗಳ ಮೂಲಕ ಗ್ರಾಹಕರನ್ನು ವಂಚಿಸುವ ಕಂಪನಿಗಳ ವಿರುದ್ಧ ನಿಯಂತ್ರಣ ಮಂಡಳಿಯು ನಿರಂತರ ಸಮರ ಸಾರಿದೆ.