Kannada News Next

india

ಗರ್ಭಕಂಠದ ಕ್ಯಾನ್ಸರ್​ ಲಸಿಕೆ ಪಡೆದ ಮಹಿಳೆಯರಿಗೆ ಮಾತ್ರ ಗೃಹಲಕ್ಷ್ಮೀ ಹಣ..!

ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಕುಟುಂಬದ ಗರ್ಭಿಣಿಯರು ಅಥವಾ ಹಾಲುಣಿಸುವ ತಾಯಂದಿರನ್ನು ಕೇಂದ್ರ ಸರ್ಕಾರದ 'ಪೋಷಣ್ ಟ್ರ್ಯಾಕರ್' ಜಾಲತಾಣದಲ್ಲಿ ನೋಂದಾಯಿಸುವುದು ಕಡ್ಡಾಯಗೊಳಿಸಲಾಗಿದೆ.

By Arun Gundmi | ಅರುಣ್‌ ಗುಂಡ್ಮಿ Editor-in-Chief
delhi lakshmi scheme hpv vaccine mandatory cervical cancer

ರಾಜ್ಯದಲ್ಲಿ ಸದ್ಯ ಪ್ರಚಲಿತದಲ್ಲಿರುವ ಗ್ಯಾರಂಟಿ ಯೋಜನೆಗಳ ಪೈಕಿ ಗೃಹಲಕ್ಷ್ಮೀ ಯೋಜನೆ ಕೂಡ ಒಂದು. ರಾಜ್ಯ ಸರ್ಕಾರ ಗೃಹಲಕ್ಷ್ಮೀ ಯೋಜನೆ ಪಡೆಯಲು ಹಲವು ಷರತ್ತುಗಳನ್ನು ವಿಧಿಸಿರುವುದು ತಿಳಿದಿರುವ ವಿಚಾರ. ಇದೇ ಮಾದರಿಯ ಯೋಜನೆಯು ದೆಹಲಿ ಸರ್ಕಾರದಲ್ಲಿಯೂ ಜಾರಿಯಲ್ಲಿ ಬಂದಿದೆ. ಆದರೆ ದೆಹಲಿ ಲಕ್ಷ್ಮೀ ಯೋಜನೆಯ ಲಾಭವನ್ನು ಪಡೆಯಲು ಫಲಾನುಭವಿಗಳಿಗೆ ಕಠಿಣ ಆರೋಗ್ಯ ಮತ್ತು ಸಾಮಾಜಿಕ ಷರತ್ತುಗಳನ್ನು ವಿಧಿಸಲು ಸಜ್ಜಾಗಿದೆ.

ಈ ಯೋಜನೆಯ ಮುಖ್ಯ ಉದ್ದೇಶ ಅರ್ಹ ಮಹಿಳೆಯರಿಗೆ ಮಾಸಿಕ ₹2,500 ಧನಸಹಾಯ ನೀಡುವುದಾಗಿದ್ದರೂ, ಇದರ ಲಾಭ ಪಡೆಯಲು ಕುಟುಂಬದ ಹೆಣ್ಣುಮಕ್ಕಳ ಆರೋಗ್ಯ ರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಮುಖ್ಯವಾಗಿ, ಅರ್ಜಿ ಸಲ್ಲಿಸುವ ಕುಟುಂಬದಲ್ಲಿ 14 ವರ್ಷ ಮೇಲ್ಪಟ್ಟ ಹೆಣ್ಣುಮಕ್ಕಳಿದ್ದರೆ, ಅವರಿಗೆ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ಹೆಚ್‌ಪಿವಿ ಲಸಿಕೆ ಹಾಕಿಸಿರುವುದು ಕಡ್ಡಾಯವಾಗಿರುತ್ತದೆ.

ಲಸಿಕೆಯ ಕುರಿತಾದ ಸಾರ್ವಜನಿಕ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಮತ್ತು ಪೋಷಕರಲ್ಲಿ ಅರಿವು ಮೂಡಿಸಲು ಸರ್ಕಾರ ಈ ಕಠಿಣ ನಿಯಮವನ್ನು ಅಳವಡಿಸಿಕೊಂಡಿದೆ. ಇದರೊಂದಿಗೆ, ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಕುಟುಂಬದ ಗರ್ಭಿಣಿಯರು ಅಥವಾ ಹಾಲುಣಿಸುವ ತಾಯಂದಿರನ್ನು ಕೇಂದ್ರ ಸರ್ಕಾರದ 'ಪೋಷಣ್ ಟ್ರ್ಯಾಕರ್' ಜಾಲತಾಣದಲ್ಲಿ ನೋಂದಾಯಿಸುವುದು ಕಡ್ಡಾಯಗೊಳಿಸಲಾಗಿದೆ.

ಫಲಾನುಭವಿಗಳು ಯೋಜನೆಯ ಲಾಭ ಪಡೆಯಲು ತಮ್ಮ ಆಧಾರ್ ಸೇರಿದಂತೆ ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳಲು ಒಪ್ಪಿಗೆ ನೀಡುವುದು ಅಗತ್ಯವಾಗಿದೆ. ಮಾಧ್ಯಮಗಳ ವರದಿಯ ಪ್ರಕಾರ, ಈ ಯೋಜನೆಯಡಿ ಸಿಗುವ ಮೊತ್ತದಲ್ಲಿ ₹1,500 ಅನ್ನು ಭವಿಷ್ಯದ ಉಳಿತಾಯದ ರೂಪದಲ್ಲಿ ಬ್ಯಾಂಕ್ ಖಾತೆಯಲ್ಲಿ ಇರಿಸಲಾಗುವುದು ಮತ್ತು ಉಳಿದ ₹1,000 ಹಣವನ್ನು ಡಿಜಿಟಲ್ ವ್ಯಾಲೆಟ್ ಮೂಲಕ ನೀಡಲಾಗುತ್ತದೆ.

ಈ ಹಣವನ್ನು ಯಾವುದೇ ದುಶ್ಚಟಗಳಿಗೆ ಬಳಸದಂತೆ ಕಣ್ಗಾವಲು ಇಡಲಾಗುತ್ತದೆ. ಸದ್ಯ ಕರ್ನಾಟಕದಲ್ಲಿ ಗರ್ಭಕಂಠದ ಕ್ಯಾನ್ಸರ್​ ಲಸಿಕೆಯನ್ನು ಸರ್ಕಾರ ಕಡ್ಡಾಯಗೊಳಿಸಿಲ್ಲ. ಗೃಹಲಕ್ಷ್ಮೀ ಯೋಜನೆಯ ಲಾಭ ಪಡೆಯಲು ವಿವಿಧ ಷರತ್ತುಗಳನ್ನು ವಿಧಿಸಲಾಗಿದೆ.

ಈವರೆಗೂ ಆರೋಗ್ಯ ಇಲಾಖೆಯ ವತಿಯಿಂದ ಷರತ್ತುಗಳು ವಿಧಿಕೆಯಾಗಿಲ್ಲ. ಆದರೆ ದೆಹಲಿ ಸರ್ಕಾರದ ಮಾದರಿಯಲ್ಲಿ ಭವಿಷ್ಯದಲ್ಲಿ ರಾಜ್ಯದ ಜನತೆಯ ಆರೋಗ್ಯದ ದೃಷ್ಠಿಯಿಂದ ಇಂತಹ ಷರತ್ತುಗಳು ಜಾರಿಗೆ ಬಂದರೂ ಆಶ್ಚರ್ಯವೇನಿಲ್ಲ.