ಗ್ರಾಹಕರಿಗೆ ಬಿಗ್​ ರಿಲೀಫ್​ : ಬ್ಯಾಂಕ್​ ಮುಷ್ಕರ ಮುಂದೂಡಿಕೆ..!

ಕೇಂದ್ರ ಹಣಕಾಸು ಸಚಿವಾಲಯವು ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮಾತುಕತೆಯ ಮೂಲಕವೇ ಈ ಬಿಕ್ಕಟ್ಟನ್ನು ಬಗೆಹರಿಸಿಕೊಳ್ಳಲು ಸೂಚಿಸಿತ್ತು.

By ರಶ್ಮಿ ಎಸ್. | Rashmi S

1 min read

WhatsAppPost
bank strike deferred big relief for bank customers
bank strike deferred big relief for bank customers

ದೇಶಾದ್ಯಂತ ಇಂದಿನಿಂದ ಆರಂಭವಾಗಬೇಕಿದ್ದ ಮೂರು ದಿನಗಳ ಕಾಲದ ಬ್ಯಾಂಕ್ ಮುಷ್ಕರವನ್ನು ಸದ್ಯಕ್ಕೆ ಮುಂದೂಡಲಾಗಿದ್ದು, ಬ್ಯಾಂಕಿಂಗ್ ಸೇವೆಗಳು ಎಂದಿನಂತೆ ಮುಂದುವರಿಯಲಿವೆ. ಬ್ಯಾಂಕ್ ನೌಕರರ ವಿವಿಧ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ ನೇತೃತ್ವದಲ್ಲಿ ಈ ಪ್ರತಿಭಟನೆಗೆ ಕರೆ ನೀಡಲಾಗಿತ್ತು. ಆದರೆ, ಭಾನುವಾರ ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ ಹಾಗೂ ಬ್ಯಾಂಕ್ ಒಕ್ಕೂಟಗಳ ಪ್ರತಿನಿಧಿಗಳ ನಡುವೆ ನಡೆದ ಸುದೀರ್ಘ ಸಮಾಲೋಚನೆಯು ಯಶಸ್ವಿಯಾಗಿದ್ದು, ಮುಷ್ಕರವನ್ನು ತಾತ್ಕಾಲಿಕವಾಗಿ ಹಿಂಪಡೆಯಲು ನಿರ್ಧರಿಸಲಾಗಿದೆ. ಇದರಿಂದಾಗಿ ವಾರದ ಆರಂಭದಲ್ಲೇ ಬ್ಯಾಂಕ್ ವ್ಯವಹಾರಗಳಿಗೆ ಅಡಚಣೆಯಾಗಬಹುದು ಎಂದು ಆತಂಕದಲ್ಲಿದ್ದ ಸಾರ್ವಜನಿಕರು ಹಾಗೂ ಗ್ರಾಹಕರಿಗೆ ದೊಡ್ಡ ನಿರಾಳತೆ ಸಿಕ್ಕಂತಾಗಿದೆ.

ಬ್ಯಾಂಕ್ ನೌಕರರ ಪ್ರಮುಖ ಬೇಡಿಕೆಗಳಲ್ಲಿ ಒಂದಾದ ವಾರದಲ್ಲಿ 5 ದಿನಗಳ ಬ್ಯಾಂಕಿಂಗ್ ವ್ಯವಸ್ಥೆಯನ್ನು ಜಾರಿಗೆ ತರುವುದು ಮತ್ತು ಎಲ್ಲಾ ಶನಿವಾರಗಳನ್ನು ಅಧಿಕೃತ ರಜಾದಿನಗಳಾಗಿ ಘೋಷಿಸುವ ಕುರಿತು ಈ ಸಭೆಯಲ್ಲಿ ಮಹತ್ವದ ಚರ್ಚೆಗಳು ನಡೆದಿವೆ. ಈ ಸಮಸ್ಯೆಗೆ ಗ್ರಾಹಕರ ಹಿತಾಸಕ್ತಿಗೆ ಧಕ್ಕೆಯಾಗದಂತೆ ಸೂಕ್ತ ಪರಿಹಾರ ಕಂಡುಕೊಳ್ಳಲು ಐಬಿಎ ಮತ್ತು ಯುಎಫ್‌ಬಿಯು ಪ್ರತಿನಿಧಿಗಳನ್ನೊಳಗೊಂಡ ಉನ್ನತ ಮಟ್ಟದ ಸಮಿತಿಯೊಂದನ್ನು ತಕ್ಷಣವೇ ರಚಿಸಲು ಉಭಯ ಕಡೆಯವರು ಸಮ್ಮತಿಸಿದ್ದಾರೆ. ಇದರೊಂದಿಗೆ, ಸ್ಕೇಲ್ IV ಹಾಗೂ ಅದಕ್ಕಿಂತ ಹೆಚ್ಚಿನ ಅಧಿಕಾರಿಗಳ ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಕ ಯೋಜನೆಯಲ್ಲಿ ಅಗತ್ಯ ಮಾರ್ಪಾಡುಗಳನ್ನು ಮಾಡಲು ಮತ್ತು ಬಾಕಿ ಇರುವ ಇತರ ಆಡಳಿತಾತ್ಮಕ ಸಮಸ್ಯೆಗಳನ್ನು ಶೀಘ್ರದಲ್ಲಿಯೇ ಚರ್ಚಿಸಿ ಇತ್ಯರ್ಥಪಡಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ.

ಕೇಂದ್ರ ಹಣಕಾಸು ಸಚಿವಾಲಯವು ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮಾತುಕತೆಯ ಮೂಲಕವೇ ಈ ಬಿಕ್ಕಟ್ಟನ್ನು ಬಗೆಹರಿಸಿಕೊಳ್ಳಲು ಸೂಚಿಸಿತ್ತು. ಸಭೆಯಲ್ಲಿ ಮೂಡಿಬಂದ ಸಕಾರಾತ್ಮಕ ನಿರ್ಧಾರಗಳ ಹಿನ್ನೆಲೆಯಲ್ಲಿ ದೇಶದ ಸಾರ್ವಜನಿಕ ವಲಯ, ಖಾಸಗಿ ಹಾಗೂ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ ಕಾರ್ಯನಿರ್ವಹಣೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗುವುದಿಲ್ಲ ಎಂದು ಒಕ್ಕೂಟವು ಸ್ಪಷ್ಟಪಡಿಸಿದೆ. ಈ ಮಾತುಕತೆಯು ಯಶಸ್ವಿಯಾಗಿರುವುದರಿಂದ ಸದ್ಯಕ್ಕೆ ಬ್ಯಾಂಕಿಂಗ್ ವಲಯದಲ್ಲಿ ಎದುರಾಗಿದ್ದ ದೊಡ್ಡ ಮುಷ್ಕರದ ಆತಂಕ ದೂರವಾಗಿದೆ.

Topics

ಸಂಬಂಧಿತ ಸುದ್ದಿಗಳು