Kannada News Next

india

ಕೇರಳದಲ್ಲಿ ಜಲಪ್ರಳಯ: ಮಳೆಗೆ 15 ಬಲಿ; ರಕ್ಷಣಾ ಕಾರ್ಯ ಚುರುಕು

ಕೇರಳದಾದ್ಯಂತ ಭಾರೀ ಮಳೆ ಮತ್ತು ಪ್ರವಾಹ ಪರಿಸ್ಥಿತಿ ತೀವ್ರಗೊಂಡಿದ್ದು, ಮಳೆ ಸಂಬಂಧಿತ ಘಟನೆಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.

By Meghana Pranuth | ಮೇಘನಾ ಪ್ರಣೂತ್‌

ತಿರುವನಂತಪುರಂ: ಕೇರಳದಾದ್ಯಂತ ಭಾರೀ ಮಳೆ ಮತ್ತು ಪ್ರವಾಹ ಪರಿಸ್ಥಿತಿ ತೀವ್ರಗೊಂಡಿದ್ದು, ಮಳೆ ಸಂಬಂಧಿತ ಘಟನೆಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಉನ್ನತಾಧಿಕಾರಿಗಳೊಂದಿಗೆ ತುರ್ತು ಪರಾಮರ್ಶೆ ನಡೆಸಿದ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ವಿ.ಡಿ. ಸತೀಶನ್, ಪ್ರವಾಹ ಪರಿಸ್ಥಿತಿಯ ಗಂಭೀರ ಚಿತ್ರಣ ಹಾಗೂ ಸರ್ಕಾರ ಕೈಗೊಂಡಿರುವ ಪರಿಹಾರ ಕ್ರಮಗಳ ಕುರಿತು ಮಾಹಿತಿ ನೀಡಿದ್ದಾರೆ.

ಪ್ರವಾಹದಲ್ಲಿ ಕೊಚ್ಚಿಹೋದ 7 ಜನರಿಗಾಗಿ ರಕ್ಷಣಾ ಪಡೆಗಳಿಂದ ಹುಡುಕಾಟ ಮುಂದುವರಿದಿದೆ. ರಾಜ್ಯದಾದ್ಯಂತ 316 ಶಿಬಿರಗಳನ್ನು ತೆರೆಯಲಾಗಿದ್ದು, ಪ್ರವಾಹ ಹಾಗೂ ಭೂಕುಸಿತದಿಂದ ಸಂಕಷ್ಟಕ್ಕೊಳಗಾದ 11,018 ಜನರಿಗೆ ವಸತಿ ಮತ್ತು ಆಹಾರ ಒದಗಿಸಲಾಗಿದೆ. ಹಠಾತ್ ಪ್ರವಾಹದ ಬಳಿಕ ಪಂಬಾ ನದಿಯಲ್ಲಿ ನೀರಿನ ಮಟ್ಟ ನಿರಂತರವಾಗಿ ಏರುತ್ತಿದೆ. ನೀರು ಹೆಚ್ಚಾದರೆ ಮೂಜಿಯಾರ್ ಅಣೆಕಟ್ಟು ತೆರೆಯುವ ಸಾಧ್ಯತೆ ಇದ್ದು, ನದಿ ಪಾತ್ರದ ಜನರಿಗೆ ಸ್ಥಳಾಂತರಗೊಳ್ಳಲು ಸೂಚಿಸಲಾಗಿದೆ.

ಮುಂಜಾಗ್ರತಾ ಕ್ರಮವಾಗಿ ವೃತ್ತಿಪರ ಕಾಲೇಜುಗಳು ಸೇರಿ 12 ಜಿಲ್ಲೆಗಳ ಶಿಕ್ಷಣ ಸಂಸ್ಥೆಗಳಿಗೆ ರಜೆ ನೀಡಲಾಗಿದೆ. ಕೇರಳ, ಕರ್ನಾಟಕ ಹಾಗೂ ಲಕ್ಷದ್ವೀಪ ಕರಾವಳಿಯಲ್ಲಿ ಸಮುದ್ರ ಪ್ರಕ್ಷುಬ್ಧವಾಗಿರುವುದರಿಂದ ಮೀನುಗಾರರು ಕಡಲಿಗೆ ಇಳಿಯದಂತೆ ಸಂಪೂರ್ಣ ನಿಷೇಧ ಹೇರಲಾಗಿದೆ.

ಕಷ್ಟದಲ್ಲಿರುವ ರಾಜ್ಯದ ಜನರಿಗೆ ಸಿಎಂ ವಿ.ಡಿ. ಸತೀಶನ್ ನೇತೃತ್ವದ ಸರ್ಕಾರ ಭರಪೂರ ಪರಿಹಾರ ಧನ ಪ್ರಕಟಿಸಿದೆ:

ಮೃತರ ಅಂತ್ಯಕ್ರಿಯೆಗೆ ತಕ್ಷಣವೇ ₹10,000 ಹಾಗೂ ಒಟ್ಟಾರೆಯಾಗಿ ₹8 ಲಕ್ಷ ಆರ್ಥಿಕ ನೆರವು.  ತಕ್ಷಣದ ನೆರವಾಗಿ ತಲಾ ₹10,000 ವಿತರಣೆ. ಪ್ರವಾಹದಿಂದ ಸಂಕಷ್ಟಕ್ಕೊಳಗಾದ ಕುಟುಂಬಗಳಿಗೆ ಪರಿಸ್ಥಿತಿ ತಿಳಿಯಾಗುವವರೆಗೆ, ಪ್ರತಿ ಪಡಿತರ ಚೀಟಿಗೆ ಗರಿಷ್ಠ ಇಬ್ಬರಿಗೆ ಸೀಮಿತವಾಗುವಂತೆ ದಿನಕ್ಕೆ ತಲಾ ₹300 ನೆರವು. ಸಂಪೂರ್ಣ ಮನೆ ಕಳೆದುಕೊಂಡವರಿಗೆ ನೀಡುತ್ತಿದ್ದ ಪರಿಹಾರವನ್ನು ₹10 ಲಕ್ಷದಿಂದ ₹12 ಲಕ್ಷಕ್ಕೆ ಏರಿಕೆ.

ಪ್ರಾಥಮಿಕ ಮಾಹಿತಿಯಂತೆ ರಾಜ್ಯದಲ್ಲಿ 164.98 ಹೆಕ್ಟೇರ್ ಕೃಷಿ ಭೂಮಿ ಹಾನಿಗೊಳಗಾಗಿದ್ದು, 3,596 ರೈತರು ತೀವ್ರ ನಷ್ಟ ಅನುಭವಿಸಿದ್ದಾರೆ. "ಪ್ರಸ್ತುತ ಇರುವ ಬೆಳೆ ನಷ್ಟ ಪರಿಹಾರ ದರಗಳು (ಉದಾ: 2.5 ಎಕರೆಗೆ ಕೇವಲ ₹13,500) ಅತ್ಯಂತ ಕಡಿಮೆಯಾಗಿವೆ. ರೈತರಿಗೆ ನ್ಯಾಯಯುತ ಪರಿಹಾರ ಒದಗಿಸಲು ಕೃಷಿ ಇಲಾಖೆಗೆ ಪರಿಷ್ಕೃತ ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಗಿದೆ. ಮುಂಬರುವ ಸಂಪುಟ ಸಭೆಯಲ್ಲಿ ಹೆಚಿಸಿದ ನಷ್ಟ ಪರಿಹಾರ ದರಗಳನ್ನು ಅಧಿಕೃತವಾಗಿ ಘೋಷಿಸಲಾಗುವುದು."