ಗಗನಕ್ಕೇರಿದ ಅಡುಗೆಮನೆ ಬಜೆಟ್: ಆಹಾರ ಹಣದುಬ್ಬರ ಶೇ. 7.74 ಕ್ಕೆ ಜಂಪ್!

ಕಳೆದ ಆಗಸ್ಟ್ ತಿಂಗಳಿನಲ್ಲಿ ಶೇ. 4.83 ರಷ್ಟಿದ್ದ ಹಣದುಬ್ಬರ ದರವು, ಸೆಪ್ಟೆಂಬರ್‌ನಲ್ಲಿ ಇತ್ತೀಚಿನ ತಿಂಗಳುಗಳಲ್ಲೇ ಮೊದಲ ಬಾರಿಗೆ ಶೇಕಡಾ 5ರ ಗಡಿಯನ್ನು ದಾಟಿ ಮುನ್ನುಗ್ಗಿದೆ.

By ರಶ್ಮಿ ಎಸ್. | Rashmi S

1 min read

WhatsAppPost
food inflation jumps to 7 74 percent kitchen budget hike
food inflation jumps to 7 74 percent kitchen budget hike

ದೇಶದ ಸಾಮಾನ್ಯ ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದ್ದು, ಭಾರತದ ಚಿಲ್ಲರೆ ಹಣದುಬ್ಬರ ದರವು ಸೆಪ್ಟೆಂಬರ್ 2026 ರಲ್ಲಿ ಭಾರಿ ಪ್ರಮಾಣದ ಏರಿಕೆ ಕಂಡು ಶೇಕಡಾ 5.54 ಕ್ಕೆ ತಲುಪಿದೆ. ರಾಷ್ಟ್ರೀಯ ಅಂಕಿಅಂಶ ಕಚೇರಿ ಬಿಡುಗಡೆ ಮಾಡಿರುವ ಅಧಿಕೃತ ವರದಿಯಲ್ಲಿ ಈ ಆತಂಕಕಾರಿ ಮಾಹಿತಿ ಹೊರಬಿದ್ದಿದೆ.

ಕಳೆದ ಆಗಸ್ಟ್ ತಿಂಗಳಿನಲ್ಲಿ ಶೇ. 4.83 ರಷ್ಟಿದ್ದ ಹಣದುಬ್ಬರ ದರವು, ಸೆಪ್ಟೆಂಬರ್‌ನಲ್ಲಿ ಇತ್ತೀಚಿನ ತಿಂಗಳುಗಳಲ್ಲೇ ಮೊದಲ ಬಾರಿಗೆ ಶೇಕಡಾ 5ರ ಗಡಿಯನ್ನು ದಾಟಿ ಮುನ್ನುಗ್ಗಿದೆ.

ಈ ದಿಢೀರ್ ಹಣದುಬ್ಬರ ಏರಿಕೆಗೆ ಪ್ರಮುಖ ಕಾರಣ ಅಡುಗೆಮನೆಯ ಬಜೆಟ್ ಮೇಲೆ ನೇರ ಪರಿಣಾಮ ಬೀರಿರುವ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಿದೆ. ಆಗಸ್ಟ್‌ನಲ್ಲಿ ಶೇ. 5.97 ರಷ್ಟಿದ್ದ ಆಹಾರ ಹಣದುಬ್ಬರ ದರವು ಸೆಪ್ಟೆಂಬರ್‌ನಲ್ಲಿ ಭಾರಿ ಪ್ರಮಾಣದಲ್ಲಿ ಜಂಪ್ ಆಗಿ ಶೇ. 7.74 ಕ್ಕೆ ತಲುಪಿದೆ.

ಪ್ರಮುಖವಾಗಿ ನಿತ್ಯಬಳಕೆಯ ತರಕಾರಿಗಳ ಬೆಲೆ ಗಗನಕ್ಕೇರಿದ್ದು, ಮಾರುಕಟ್ಟೆಯಲ್ಲಿ ಈರುಳ್ಳಿ ಹಣದುಬ್ಬರ ದರವು ಬರೋಬ್ಬರಿ ಶೇ. 108.09 ಕ್ಕೆ ತಲುಪುವ ಮೂಲಕ ಗ್ರಾಹಕರಿಗೆ ಕಣ್ಣೀರು ತರಿಸುತ್ತಿದೆ. ಇದರೊಂದಿಗೆ ಬೆಳ್ಳುಳ್ಳಿ ಮತ್ತು ನಿಂಬೆಹಣ್ಣು ಕೂಡ ಸಾಮಾನ್ಯ ಜನರ ಕೈಗೆಟುಕದಂತೆ ದುಬಾರಿಯಾಗಿವೆ.

ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರವನ್ನು ನಿಯಂತ್ರಿಸುವ ಸಲುವಾಗಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ಪ್ರಮುಖ ಸಾಲದ ದರವಾದ ರೆಪೊ ದರವನ್ನು ಶೇ. 5.50ಗೆ ಹೆಚ್ಚಿಸಿದ ಮರುದಿನವೇ ಈ ಚಿಲ್ಲರೆ ಹಣದುಬ್ಬರದ ವರದಿ ಪ್ರಕಟವಾಗಿರುವುದು ಆರ್ಥಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಸದ್ಯ ಮಾರುಕಟ್ಟೆಗೆ ಮುಂಗಾರು ಬೆಳೆಗಳ ಹೊಸ ಆವಕ ಆರಂಭವಾಗುತ್ತಿರುವುದರಿಂದ ಮುಂಬರುವ ದಿನಗಳಲ್ಲಿ ತರಕಾರಿ ಹಾಗೂ ಆಹಾರ ಪದಾರ್ಥಗಳ ಬೆಲೆ ಕೊಂಚ ಇಳಿಕೆಯಾಗಬಹುದು ಮತ್ತು ಕಚ್ಚಾ ತೈಲ ಬೆಲೆಯ ಸ್ಥಿರತೆಯಿಂದಾಗಿ ಹಣದುಬ್ಬರ ನಿಯಂತ್ರಣಕ್ಕೆ ಬರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.

Topics

ಸಂಬಂಧಿತ ಸುದ್ದಿಗಳು