ಉತ್ತರಾಖಂಡದ ಕೇದಾರನಾಥ ಯಾತ್ರಾ ಮಾರ್ಗದಲ್ಲಿ ಭೀಕರ ಭೂಕುಸಿತ ಉಂಟಾಗಿದೆ. ಭೂಕುಸಿತದಲ್ಲಿ ಓರ್ವ ಭಕ್ತ ಮೃತಪಟ್ಟಿದ್ದು, 6500ಕ್ಕೂ ಅಧಿಕ ಭಕ್ತರನ್ನು ಎಸ್‌ಡಿಆರ್‌ಎಫ್ ಹಾಗೈ ಸ್ಥಳೀಯ ಆಡಳಿತ ರಕ್ಷಣೆ ಮಾಡಿದೆ. ಕಳೆದ ಕೆಲವು ದಿನಗಳಿಂದಲೂ ನಿರಂತರವಾಗಿ ಸುರಿದ ಭಾರೀ ಮಳೆಯಿಂದಾಗಿ ಬೆಟ್ಟದ ಕಲ್ಲು ಹಾಗೂ ಮಣ್ಣು ಕುಸಿದಿದ್ದು, ಇದರಿಂದಾಗಿ ರಸ್ತೆ ಸಂಪೂರ್ಣವಾಗಿ ಹಾನಿಗೆ ಒಳಗಾಗಿದೆ. ಇದೇ ಕಾರಣದಿಂದಾಗಿ ಸದ್ಯ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ರುದ್ರಪ್ರಯಾಗ ಜಿಲ್ಲೆಯ ಗೌರಿಕುಂಡದಿಂದ ಸರಿ ಸಮಾರು 2.5 ಕಿಲೋಮೀಟರ್ ದೂರದಲ್ಲಿ ಇರುವ ಚಿರ್ಬಾಸಾ ಹೆಲಿಪ್ಯಾಡ್ ಬಳಿ ಸತತ ಮಳೆಯಾಗುತ್ತಿದೆ. ಬೆಟ್ಟದಿಂದ ಬೃಹತ್ ಪ್ರಮಾಣದ ಬಂಡೆ ಕುಸಿದಿರುವ ಹಿನ್ನೆಲೆಯಲ್ಲಿ ಸ್ಥಳೀಯರೋರ್ವರು ಮೃತಪಟ್ಟಿದ್ದರು. ವಿಪತ್ತು ರಕ್ಷಣಾ ಪಡೆಗಳಿಂದ ಭೂಕುಸಿತದ ಮಾಹಿತಿ ಲಭ್ಯವಾಗುತ್ತಿದ್ದಮತೆಯೇ ಎಸ್‌ಡಿಆರ್‌ಎಫ್ ಕಮಾಂಡೆಂಟ್ ಅರ್ಪಣ್ ಯದುವಂಶಿ ಅವರ ಮಾರ್ಗದರ್ಶನದಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ.
ಆದರೆ ರಸ್ತೆಗೆ ನಿರಂತರವಾಗಿ ಕಲ್ಲುಗಳು ಉರುಳುತ್ತಿರುವುದು ರಕ್ಷಣಾ ಕಾರ್ಯಕ್ಕೆ ತೊಡಕಾಗುತ್ತಿದೆ. ಅಪಾಯಕಾರಿ ಸ್ಥಿತಿಯಲ್ಲಿ 6,500ಕ್ಕೂ ಹೆಚ್ಚು ಯಾತ್ರಾರ್ಥಿಗಳನ್ನು ಮತ್ತು ಮಾರ್ಗದಲ್ಲಿದ್ದ 600ರಿಂದ 700 ಕುದುರೆ ಹಾಗೂ ಕತ್ತೆಗಳನ್ನು ಸುರಕ್ಷಿತವಾಗಿ ರಕ್ಷಣೆ ಮಾಡಲಾಗಿದೆ. ಯಾತ್ರಾರ್ಥಿಗಳಲ್ಲಿ ಯಾರೆಲ್ಲಾ ಎಷ್ಟು ಮಂದಿ ಇದ್ದಾರೆ ಅನ್ನೋ ನಿಖರ ಮಾಹಿತಿ ಇನ್ನೂ ಲಭ್ಯವಾಗಿಲ್ಲ.
ಸದ್ಯ ಕೇದಾರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಭಕ್ತಾದಿಗಳನ್ನು ಸೋನಪ್ರಯಾಗ ಮತ್ತು ಗೌರಿಕುಂಡದಲ್ಲೇ ತಡೆಯಲಾಗಿದೆ. ಅಲ್ಲದೇ ಬೆಟ್ಟದಿಂದ ಹಿಂತಿರುಗುತ್ತಿದ್ದವರನ್ನು ಜಂಗಲ್ ಚಟ್ಟಿ ಬಳಿ ಉಳಿದುಕೊಳ್ಳಲು ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಲೋಕೋಪಯೋಗಿ ಇಲಾಖೆಯ ಯಂತ್ರೋಪಕರಣಗಳ ಸಹಾಯದಿಂದ ರಸ್ತೆಯಲ್ಲಿ ಬಿದ್ದಿರುವ ಕಲ್ಲು ಹಾಗೂ ಮಣ್ಣುಗಳ ತೆರವು ಕಾರ್ಯವನ್ನು ನಡೆಸುತ್ತಿದೆ.