ದೇಶಾದ್ಯಂತ ಅಡುಗೆ ಅನಿಲ ಗ್ರಾಹಕರಿಗೆ ನೀಡಲಾಗಿದ್ದ ಅತ್ಯಂತ ಪ್ರಮುಖವಾದ ಗಡುವು ಇಂದಿಗೆ ಕೊನೆಗೊಳ್ಳಲಿದೆ. ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ಹೊಂದಿರುವ ಗ್ರಾಹಕರು ತಮ್ಮ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸರ್ಕಾರ ನೀಡಿರುವ ಕಾಲಾವಕಾಶ ಇಂದು ಮುಕ್ತಾಯವಾಗಲಿದ್ದು, ಈ ಕೆಲಸ ಮಾಡದಿದ್ದರೆ ಮುಂದಿನ ತಿಂಗಳಿನಿಂದ ಭಾರಿ ಸಂಕಷ್ಟ ಎದುರಾಗಲಿದೆ.
ಒಂದು ವೇಳೆ ಗ್ರಾಹಕರು ಇಂದಿನೊಳಗೆ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸದಿದ್ದರೆ, ಸೆಪ್ಟೆಂಬರ್ 1ರಿಂದ ನಿಮ್ಮ ಗೃಹ ಬಳಕೆಯ ಸಿಲಿಂಡರ್ ಸಬ್ಸಿಡಿ ಕಡಿತಗೊಳ್ಳುವ ಸಾಧ್ಯತೆ ಇದೆ. ಅಷ್ಟೇ ಅಲ್ಲದೆ, ನೀವು ಸಬ್ಸಿಡಿ ರಹಿತ ವಾಣಿಜ್ಯ ದರದಲ್ಲಿ ಸಿಲಿಂಡರ್ ಖರೀದಿಸಬೇಕಾದ ಸ್ಥಿತಿ ನಿರ್ಮಾಣವಾಗಬಹುದು ಎಂದು ತೈಲ ಮಾರುಕಟ್ಟೆ ಕಂಪನಿಗಳು ಎಚ್ಚರಿಸಿವೆ. ಅಕ್ರಮ ಗ್ಯಾಸ್ ಸಂಪರ್ಕಗಳನ್ನು ತಡೆಗಟ್ಟಲು ಮತ್ತು ಅರ್ಹ ಫಲಾನುಭವಿಗಳಿಗೆ ಮಾತ್ರ ಸಬ್ಸಿಡಿ ತಲುಪಿಸಲು ಕೇಂದ್ರ ಸರ್ಕಾರ ಈ ನಿಯಮವನ್ನು ಕಡ್ಡಾಯಗೊಳಿಸಿದೆ.
ಸೆಪ್ಟೆಂಬರ್ ಆರಂಭದಿಂದ ಇ-ಕೆವೈಸಿ ಮಾತ್ರವಲ್ಲದೆ ಇನ್ನು ಹಲವು ನಿಯಮಗಳು ಬದಲಾಗಲಿವೆ. ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಜಾಗತಿಕ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಹೊಸ ಎಲ್‌ಪಿಜಿ ಸಂಪರ್ಕಗಳ ಬುಕಿಂಗ್ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಅಲ್ಲದೆ, ಸಿಲಿಂಡರ್ ರೀಫಿಲ್ ಪಡೆಯಲು ನಗರ ಪ್ರದೇಶದಲ್ಲಿ 25 ದಿನ ಹಾಗೂ ಗ್ರಾಮೀಣ ಭಾಗದಲ್ಲಿ 45 ದಿನ ಕಾಯುವ ನಿಯಮ ಚಾಲ್ತಿಯಲ್ಲಿದೆ.
ಮತ್ತೊಂದೆಡೆ, ನಿಮ್ಮ ವ್ಯಾಪ್ತಿಯಲ್ಲಿ ಪೈಪ್ಡ್ ನೈಸರ್ಗಿಕ ಅನಿಲ (PNG) ಸೌಲಭ್ಯವಿದ್ದರೆ, ಗ್ರಾಹಕರು ಕಡ್ಡಾಯವಾಗಿ ಎಲ್‌ಪಿಜಿಯಿಂದ ಪಿಎನ್‌ಜಿಗೆ ಬದಲಾಗಬೇಕಾಗುತ್ತದೆ. ಎರಡೂ ಸಂಪರ್ಕ ಹೊಂದಿರುವವರು ತಮ್ಮ ಎಲ್‌ಪಿಜಿ ಸಂಪರ್ಕವನ್ನು ಹಸ್ತಾಂತರಿಸಲು 30 ದಿನಗಳ ಅವಕಾಶ ನೀಡಲಾಗಿದೆ.
ಪ್ರತಿ ತಿಂಗಳ 1ನೇ ತಾರೀಖಿನಂದು ತೈಲ ಕಂಪನಿಗಳು ಸಿಲಿಂಡರ್ ಬೆಲೆಗಳನ್ನು ಪರಿಷ್ಕರಿಸಲಿದ್ದು, ಸೆಪ್ಟೆಂಬರ್‌ನಲ್ಲಿ ದರ ಏರಿಕೆಯಾಗಲಿದೆಯೇ ಅಥವಾ ಇಳಿಕೆಯಾಗಲಿದೆಯೇ ಎಂಬ ಆತಂಕ ಗ್ರಾಹಕರನ್ನು ಕಾಡುತ್ತಿದೆ. ಹೀಗಾಗಿ, ಯಾವುದೇ ಅಡೆತಡೆಯಿಲ್ಲದೆ ಗ್ಯಾಸ್ ಪೂರೈಕೆ ಮುಂದುವರಿಯಲು ಗ್ರಾಹಕರು ಇಂದೇ ತಮ್ಮ ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿ ಅಥವಾ ಆನ್‌ಲೈನ್ ಮೂಲಕ ಇ-ಕೆವೈಸಿ ಪ್ರಕ್ರಿಯೆಯನ್ನು ತಪ್ಪದೇ ಪೂರ್ಣಗೊಳಿಸಬೇಕಿದೆ.